ಆಪ್ತೆಯ ಬಳಿಯಿದ್ದ ಆಸ್ತಿ ಕೇಳಿದ್ದಕ್ಕೆ ಗುರೂಜಿ ಕೊಲೆ ಆಯ್ತಾ?

Suddivijaya
Suddivijaya July 6, 2022
Updated 2022/07/06 at 12:21 AM

ಸುದ್ದಿವಿಜಯ, ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆ ಪ್ರಕರಣದ ಹಿಂದೆ ಅವರು ಮಾಡಿರುವ ಆಸ್ತಿ ಹಾಗೂ ಹಣಕಾಸಿನ ವ್ಯವಹಾರವೇ ಕಾರಣವಾಯ್ತೆ’ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

‘ಹತ್ಯೆ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಜೊತೆ ಮಹಾಂತೇಶ ಮದುವೆಯಾಗಿದ್ದ. ಗುರೂಜಿ ಅವರ ಎಲ್ಲ ವ್ಯವಹಾರಗಳು ಮೂವರಿಗೂ ತಿಳಿದಿತ್ತು. ಅಲ್ಲದೆ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಹೆಸರಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ಮಹಾಂತೇಶ್ ಶಿರೂರು ಜೊತೆ ಚಂದ್ರಶೇಖರ್ ಗುರೂಜಿ

ಆಸ್ತಿ ಹಾಳಾಗುತ್ತಿದೆ ಎಂದು ಗುರೂಜಿ ಅವರು, ನೋಂದಣಿ ಮಾಡಿರುವ ಆಸ್ತಿಗಳನ್ನು ಮರಳಿಸುವಂತೆ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಗುರೂಜಿ ಅವರ ಹತ್ಯೆ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ವನಜಾಕ್ಷಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಗ ಹಣಕಾಸಿನ ವಿಷಯದಲ್ಲಿ ಅವ್ಯವಹಾರ ನಡೆಸಿದ್ದರು. ಇದರಿಂದ ಗುರೂಜಿ ಅವರನ್ನು ಕೆಲಸದಿಂದ ತೆಗೆದುಹಾಕಿ, ಹಣ ಮರಳಿಸುವಂತೆ ಹೇಳಿದ್ದರು. ಈ ಕೋಪದಿಂದಲೂ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಮಂಜುನಾಥ್ ಮರೇವಾಡ

Share this Article
Leave a comment

Leave a Reply

Your email address will not be published. Required fields are marked *

error: Content is protected !!