ಎಫ್‍ಪಿಒಗಳ ಬಲವರ್ಧನೆಗೆ ಕೇಂದ್ರ-ರಾಜ್ಯ ಸರಕಾರಗಳಿಂದ ಬರಪೂರ ನೆರವು: ಸಚಿವೆ ಶೋಭಾ ಕರಂದ್ಲಾಜೆ

Suddivijaya
Suddivijaya November 15, 2022
Updated 2022/11/15 at 8:51 AM

ಸುದ್ದಿವಿಜಯ, ಚಿತ್ರದುರ್ಗ (ಸಿರಿಗೆರೆ) : ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾಟ್ ಅಪ್ ಕಲ್ಚರ್ ಹುಟ್ಟು ಹಾಕಿ ಭಾರತ ಸ್ವಾತಂತ್ರೋತ್ಸವ 100 ವರ್ಷ ತುಂಬುವುದರ ಒಳಗೆ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮೊದಲಿರಬೇಕು ಎಂಬ ಕನಸು ಕಂಡಿದ್ದಾರೆ. ಹೀಗಾಗಿ ಕೃಷಿ ಸಂಬಂಧಿಸಿದ ಇನ್‍ಪುಟ್ ಮತ್ತು ಔಟ್‍ಪುಟ್ ಬಿಜಿನೆಸ್ ಅಭಿವೃದ್ಧಿಗೆ ರೈತ ಉತ್ಪಾದಕ ಕಂಪನಿ(ಎಫ್‍ಪಿಒ)ಗಳಿಗೆ ಹೆಚ್ಚು ಪ್ರೋತ್ಸಾ-ನೆರವು ನೀಡುತ್ತಿದ್ದೇವೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲೇಜೆ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗಳ ಕೃಷಿಕರೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಸಚಿವರು, ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಟ್ಟುಗೂಡಿಸಬೇಕಾಗಿದೆ. ಎಲ್ಲಾ ಇಲಾಖೆಗಳನ್ನು ಒಟ್ಟುಗೂಡಿಸುವುದರಿಂದ ಅಭಿವೃದ್ಧಿಯ ಕೆಲಸಗಳನ್ನು ಚುರಕಾಗಿ ಮಾಡಬಹುದಾಗಿದೆ ಎಂದರು.

ಚಾಲ್ತಿಯಲ್ಲಿರುವ ಪದ್ಧತಿಯಿಂದ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳು ಕೆಲವೇ ಜನರ ಕೈಸೇರುತ್ತಿವೆ. ಕೃಷಿಕರೂ ಸಹ ತಮ್ಮ ಕೆಲಸಗಳಿಗೆ ಹಲವು ಕಚೇರಿಗಳಿಗೆ ಓಡಾಡಬೇಕಾಗಿದೆ. ಜೊತೆಗೆ ಈ ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದೇ ಹೋಗಿ ಅಭಿವೃದ್ಧಿಯ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ ಎಂದರು.

ಈ ಇಲಾಖೆಗಳನ್ನು ಒಟ್ಟುಗೂಡಿಸುವ ಅಗತ್ಯ ಇರುವಂತೆ ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳನ್ನು ಒಂದುಗೂಡಿಸುವ ಅಗತ್ಯ ಇದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು. ತರಳಬಾಳು ಶ್ರೀಗಳು ಭಾಗವಹಿಸಿದ್ದರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೃತ ರೈತ ಉತ್ಪಾದಕ ಕಂಪನಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ದೇಶದಲ್ಲಿ ಆರಂಭವಾಗಿರುವ ರೈತ ಉತ್ಪಾದಕ ಕಂಪನಿಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಕಂಪನಿಗಳು ಹೊಸ ಚಿಂತನೆಯನ್ನು ಮೈಗೂಡಿಸಿಕೊಂಡು ಲಭ್ಯವಿರುವ ಯಂತ್ರೋಪಕರಣ, ತಂತ್ರಜ್ಞಾನ ಬಳಸಿಕೊಂಡು ಆಹಾರ ಸಂಸ್ಕರಣೆ, ಸಾವಯವ ಖಾದ್ಯತೈಲ ಮುಂತಾದವುಗಳನ್ನು ಅಳವಡಿಸಿಕೊಂಡು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು.

ಜೊತೆಗೆ ತಮ್ಮ ಉತ್ಪಾದನೆಗಳಿಗೆ ಬ್ರಾಂಡ್ ಸೃಷ್ಟಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಅವುಗಳನ್ನು ಸಂರಕ್ಷಿಸಿ ರಪ್ತು ಮಾಡುವ ಮೂಲಕ ಯಶಸ್ವಿ ಉದ್ಯಮ ಸ್ಥಾಪನೆಯತ್ತ ಉತ್ಪಾದಕ ಕಂಪನಿಗಳು ಮುಂದಾಗಬೇಕು ಎಂದು ಸಚಿವರು ಹೇಳಿದರು.

ಇದೀಗ ಸಿರಿಧಾನ್ಯಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಚಿತ್ರದುರ್ಗ ಸಿರಿಧಾನ್ಯಗಳ ತವರು ಎಂದೇಳಲಾಗಿದೆ. ಹೆಚ್ಚು ಪೌಷ್ಠಿಕಾಂಶ, ಖನಿಜಾಂಶ ಇರುವ ಸಿರಿಧಾನ್ಯಗಳಿಗೆ ಬ್ರಾಂಡ್ ಮಾಡಿಕೊಂಡು ಅವುಗಳನ್ನು ಬೇರೆ ದೇಶಗಳಿಗೆ ರಪ್ತು ಮಾಡುವ ಕಡೆಗೆ ಉತ್ಪಾದಕ ಸಂಸ್ಥೆಗಳು ಮುಂದಾಗಬೇಕು.

ಅನಿವಾನಿ ಭಾರತೀಯರೊಬ್ಬರು ದೇಶಕ್ಕೆ ಹಿಂದಿರುಗಿ ಹೊಸದಾಗಿ ಸ್ಟಾರ್ಟ್‍ಅಪ್ಪ ಆರಂಭ ಮಾಡಿ 55 ಕೋಟಿ ರೂ.ಗಳ ವ್ಯವಹಾರ ಮಾಡಿ ಜಯಶೀಲರಾಗಿದ್ದಾರೆ. ಅಂತಹ ದಿಕ್ಕಿನಲ್ಲಿ ನಮ್ಮ ರೈತ ಉತ್ಪಾದಕ ಕಂಪನಿಗಳು ಯೋಚಿಸಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಆಗಬೇಕಾದ ಆವಿಷ್ಕಾರಗಳನ್ನು ಕೇಂದ್ರ ರೂಪಿಸುತ್ತದೆ. ಅವುಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಫಸಲ್ ಭೀಮಾ ಯೋಜನೆಯನ್ನು ಕೇಂದ್ರವು ಅನುಷ್ಠಾನಗೊಳಿಸಿದೆ. ಆದರೆ ವಿಮಾ ಕಂಪನಿಗಳನ್ನು ನಿರ್ಧರಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಕ್ಕೆ ಇದೆ.

ಕಳೆದ ಮೂರು ವರ್ಷಗಳಲ್ಲಿ 10 ಲಕ್ಷ ಕೋಟಿ. ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿರುವ ನ್ಯೂನತೆಗಳನ್ನು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದೆಂದು ಭರವಸೆ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು. ತರಳಬಾಳು ಶ್ರೀಗಳು ಭಾಗವಹಿಸಿದ್ದರು
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು. ತರಳಬಾಳು ಶ್ರೀಗಳು ಭಾಗವಹಿಸಿದ್ದರು

ರೈತ ಉತ್ಪಾದಕ ಕಂಪನಿಗಳಿಗೆ ವಿಧಿಸುತ್ತಿರುವ ಜಿಎಸ್‍ಟಿ, ಆದಾಯ ತೆರಿಗೆಗೆ ವಿನಾಯ್ತಿ ನೀಡಬೇಕು, ಉತ್ಪಾದನಾ ಘಟಕ ಆರಂಭಿಸಲು ಅಗತ್ಯವಿರುವ ನಿವೇಶನಗಳನ್ನು ಒದಗಿಸಬೇಕು, ಕಂಪನಿ ಆರಂಭಿಸಲು ಅಗತ್ಯವಿರುವ ಕಟ್ಟಡವನ್ನು ಸರ್ಕಾರವೇ ನೀಡಬೇಕೆಂದು ಉತ್ಪಾದಕ ಕಂಪನಿಗಳು ಪದಾಧಿಕಾರಿಗಳು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ಸಂಸದ ಮಾಜಿ ಸಚಿವ ಜಿ.ಎಂ. ಸಿದ್ಧೇಶ್ವರ್, ಪ್ರಧಾನ ಮಂತ್ರಿಗಳು ದೇಶದ ರೈತರ ಹಿತವನ್ನು ಕಾಯಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಕೃಷಿ ಸನ್ಮಾನ್ ಯೋಜನೆಯೂ ಮಹತ್ತರವಾದುದಾಗಿದೆ. ಹಿಂದಿನ ಸರ್ಕಾರಗಳು ಮಾಡದೇ ಇದ್ದಂತ ರೈತಪರ ಕೆಲಸಗಳನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

ಸಂವಾದಕ್ಕೊಂದು ಚೌಕಟ್ಟು ಹಾಕಿ ಆಶೀರ್ವಚನ ನೀಡಿದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ರೈತರ ನೈಜ ಸಮಸ್ಯೆಗಳನ್ನು ಅರಿಯಲು ಕೇಂದ್ರ ಸಚಿವರೊಂದಿಗೆ ಸಂವಾದ ಏರ್ಪಡಿಸಿದೆ. ರೈತರು ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು.

ಫಸಲು ಭೀಮಾ ಯೋಜನೆಯಲ್ಲಿನ ನಿಯಮಾವಳಿಗಳನ್ನು ಬದಲಿಸಬೇಕು. ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತ ಜಮಾ ಆದಾಗ ಆ ಹಣವನ್ನು ಸಾಲಕ್ಕೆ ಬ್ಯಾಂಕಿನವರು ಮುರಿತಾಯ ಮಾಡಬಾರದು ಎಂದು ತಿಳಿಸಿದರು.

ಬೆಂಗಳೂರು ಐಸಿಆರ್ ನಿರ್ದೇಶಕ ಡಾ. ವಿ. ವೆಂಕಟ ಸುಬ್ರಹ್ಮಣ್ಯ, ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಚಿತ್ರದುರ್ಗ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪರಿಣಿತರು ಭಾಗವಹಿಸಿದ್ದರು. ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿಗಳಾದ ಡಾ.ಬಿ.ಒ.ಮಲ್ಲಿಕಾರ್ಜುನ ಎಂ.ಜಿ.ಬಸವನಗೌಡ, ಸಣ್ಣಗೌಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಅನೇಕ ಕೆವಿಕೆಗಳಿದ್ದು ಅದರಲ್ಲಿ ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಎಫ್‍ಪಿಗಳ ಬಲವರ್ಧನೆ ಹಾಗೂ ರೈತರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಂದಿರುವ ಯೋಜನೆಗಳನ್ನು ತಾಂತ್ರಿಕ ಸಮೀಕರಣ ಮೂಲಕ ರೈತರಿಗೆ ತಲುಪಿಸುವ ಕಾರ್ಯವನ್ನು ದಾವಣಗೆರೆಯ ಕೆವಿಕೆ ಮಾಡುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ.
-ಶೋಭಾ ಕರಂದ್ಲಾಜೆ, ಕೇಂದ್ರದ ಸಚಿವರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!