ಚಳ್ಳಕೆರೆ, ಸುದ್ದಿವಿಜಯ:ಟೊಮೊಟೊ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಎರಡು ಟನ್ ಟೊಮೊಟೊ ಲೋಡ್ ಮಾಡಿದ್ದ ಬುಲೆರೋ ವಾಹನವನ್ನು ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದ ದಂಪತಿಯನ್ನು ಆರ್ ಎಂ ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ..
ಮೂಲತಃ ತಮಿಳುನಾಡಿನ ವಿಜಯವಾಡದ ಅಂಬೂರು ಟೌನ್ ನಿವಾಸಿಗಳಾದ ಭಾಸ್ಕರನ್(38) ಮತ್ತು ಸಿಂಧು(36) ಬಂಧಿತ ದಂಪತಿ.
ಈ ಪ್ರಕರಣದಲ್ಲಿ ಇನ್ನು ಮೂವರು ತಲೆಮರೆಸಿಕೊಂಡಿದ್ದು, ಈ ಪೈಕಿ ಇಬ್ಬರು ಬೆಂಗಳೂರಿನವರು ಹಾಗೂ ಮತ್ತೊಬ್ಬ ತಮಿಳುನಾಡಿನವನಾಗಿದ್ದು, ಇವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಘಟನೆ ವಿವರ:
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಿವಾಸಿ, ರೈತ ಮಲ್ಲೇಶ್ ಅವರು ಈ ಬಾರಿ ಟೊಮೊಟೊ ಬೆಳೆದಿದ್ದು, ಜು.8ರಂದು 210 ಬಾಕ್ಸ್ಗಳಲ್ಲಿ ಟೊಮೊಟೊ ಲೋಡ್ ಮಾಡಿಕೊಂಡು ಬುಲೆರೊ ಪಿಕಪ್ ವಾಹನದಲ್ಲಿ ಚಳ್ಳಕೆರೆಯಿಂದ ಕೋಲಾರ ಮಾರುಕಟ್ಟೆಗೆ ಅಂದು ರಾತ್ರಿ 10.45ರಲ್ಲಿ ಚಾಲಕ ಶಿವಣ್ಣನವರೊಂದಿಗೆ ಬರುತ್ತಿದ್ದರು.
ಮಾರ್ಗಮಧ್ಯೆ ತುಮಕೂರು ರಸ್ತೆ ಸಿಎಂಟಿಐನಿಂದ ಹೆಬ್ಬಾಳ ಕಡೆ ಹೋಗುವ ರಸ್ತೆಬದಿ ತಮ್ಮ ಬುಲೆರೋ ವಾಹನವನ್ನು ನಿಲ್ಲಿಸಿ ಟೀ ಕುಡಿಯಲೆಂದು ಮಲ್ಲೇಶ್ ಹಾಗೂ ಶಿವಣ್ಣ ಹೋಟೆಲ್ಗೆ ಹೋಗಿದ್ದಾರೆ.
ಇದೇ ಸಮಯವನ್ನು ಕಾದಿದ್ದ ದರೋಡೆಕೋರರು ಟೊಮೊಟೊ ತುಂಬಿದ್ದ ಬುಲೆರೋ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಕೆಲ ಸಮಯದ ಬಳಿಕ ಟೀ ಕುಡಿದುಕೊಂಡು ಮಲ್ಲೇಶ್ ಹಾಗೂ ಶಿವಣ್ಣ ಬಂದು ನೋಡಿದಾಗ ತಾವು ನಿಲ್ಲಿಸಿದ್ದ ಸ್ಥಳದಲ್ಲಿ ಬುಲೆರೋ ವಾಹನ ಇರಲಿಲ್ಲ.
ತಕ್ಷಣ ಗಾಬರಿಯಾಗಿ ಸುತ್ತಮುತ್ತ ಸ್ವಲ್ಪ ದೂರ ಹೋಗಿ ಹುಡುಕಾಡಿದರೂ ವಾಹನ ಪತ್ತೆಯಾಗಿಲ್ಲ. ಈ ಸಂಬಂಧ ಚಾಲಕ ಶಿವಣ್ಣ ಅವರು ಆರ್ಎಂಸಿಯಾರ್ಡ್ ಪೊಲೀಸ್ ಠಾಣೆಗೆ ಹೋಗಿ ವಾಹನ ಕಳ್ಳತನವಾಗಿರುವ ಬಗ್ಗೆ ಹಾಗೂ ಅದರಲ್ಲಿ 2 ಮೊಬೈಲ್ ಇತ್ತೆಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ವಾಹನ ನಿಲ್ಲಿಸಿದ್ದ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಈ ಬುಲೆರೊ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ.
ಈ ಮಾಹಿತಿಯನ್ನು ಆಧರಿಸಿ ತಮಿಳುನಾಡು ಮೂಲದ ದಂಪತಿಯನ್ನು ಬಂಧಿಸಿ ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ. ಬೆಂಗಳೂರಿನ ಇಬ್ಬರ ಸಹಾಯದಿಂದ ಟೊಮೊಟೊ ತುಂಬಿದ್ದ ವಾಹನವನ್ನು ಕಳ್ಳತನ ಮಾಡಿಕೊಂಡು ತಮಿಳುನಾಡಿಗೆ ಹೋಗಿರುವುದು ಗೊತ್ತಾಗಿದೆ.
ಆ ಸಂದರ್ಭದಲ್ಲಿ ಸಿಂಧು, ಈಕೆಯ ಪತಿ ಭಾಸ್ಕರನ್ ಹಾಗೂ ಮೂವರ ಜೊತೆ ಸೇರಿ ಟೊಮೊಟೊವನ್ನು 1.50 ಲಕ್ಷ ರೂ.ಗಳಿಗೆ ಮಾರಿ ಬಂದ ಹಣವನ್ನು ಐದು ಮಂದಿ ಸಮಾನವಾಗಿ ಹಂಚಿಕೊಂಡಿದ್ದಾರೆ.
ನಂತರ ಬುಲೆರೊ ವಾಹನವನ್ನು ದೇವನಹಳ್ಳಿಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿರುವ ಬಗ್ಗೆ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದು, ಈ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿ ಬುಲೆರೊ ವಾಹನಕ್ಕೆ ಡಿಕ್ಕಿ ಹೊಡೆಸಲು ಯತ್ನಿಸಿ ಸಾಧ್ಯವಾಗದಿದ್ದಾಗ ವಾಹನವನ್ನೇ ಕಳ್ಳತನ ಮಾಡಿಕೊಂಡು ಹೋಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಆರ್ಎಂಸಿಯಾರ್ಡ್ ಪೊಲೀಸರು ಇದೀಗ ಉಳಿದವರ ಬಂಧನಕ್ಕೆ ಶೋಧ ನಡೆಸಿದ್ದಾರೆ.