Suddivijaya|Kannada News|30-05-2023
ಸುದ್ದಿವಿಜಯ ಜಗಳೂರು.ಚುನಾವಣೆಯಲ್ಲಿ ಮತ ಹಾಕಿದ 51 ಸಾವಿರ ಜನರಿಗಷ್ಟೆ ನಾನು ಶಾಸಕನಲ್ಲ, ಕ್ಷೇತ್ರದ ಎಲ್ಲಾ ವರ್ಗದ ಜನರಿಗೂ ಶಾಸಕನಾಗಿ ಅಭಿವೃದ್ದಿಗೆ ಒತ್ತು ನೀಡುತ್ತೇನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
33 ವರ್ಷಗಳ ಕಾಲ ನಾಲಂದ ಕಾಲೇಜಿನಲ್ಲಿ ಕಸ ಗೂಡಿಸಿ, ಗಂಟೆ ಹೊಡೆದು ಕಾಯಕ ಮಾಡಿದ್ದೇನೆ, ಯಾವುದೇ ಕಾಯಕವಾಗಲೀ ಕೀಳರಿಮೆ ಮಾಡಬಾರದು,ಈಗ ಕ್ಷೇತ್ರ ಜನರು ಆಶೀರ್ವದಿಸಿ ಸಮಾಜದಲ್ಲಿರುವ ಕಸವನ್ನು ಹೊಡೆಯಲು, ಭ್ರಷ್ಟರವನ್ನು ಹೊರ ಹಾಕಲು ಅವಕಾಶ ನೀಡಿದ್ದಾರೆ ಇದು ನನ್ನ ಸೌಭಾಗ್ಯ ಎಂದು ಮೆಲುಕು ಹಾಕಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದ ಬಿಜೆಪಿ ಕರ್ನಾಟಕ ಜನತೆ ಒಂದು ಇಂಜಿನ್ ಕಟ್ ಮಾಡಿದ್ದಾರೆ. ಉಳಿದ ಇನ್ನೊಂದು ಇಂಜಿನನ್ನು ಮುಂದಿನ ಚುನಾವಣೆಯಲ್ಲಿ ಕಟ್ ಮಾಡುವ ಮೂಲಕ ದೇಶಕ್ಕೆ ಉತ್ತಮವಾದ ಸಂದೇಶವನ್ನು ರವಾನಿಸಬೇಕು ಎಂದರು.
ಐದು ವರ್ಷಗಳಲ್ಲಿ ಪ್ರತಿ ಹಳ್ಳಿಗೂ ಅಗತ್ಯ ಮೂಲಭೂತ ಸೌಕರ್ಯಗಳಾದ ಸೂರು- ನೀರು, ಸಾರಿಗೆ, ಆಸ್ಪತ್ರೆ, ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಕೆಳಗೋಟೆ ಗ್ರಾಮದಲ್ಲಿ ಪ್ರೌಢ ಶಾಲೆ, ಆರೋಗ್ಯ ಉಪ ಕೇಂದ್ರ, ಗ್ರಂಥಾಲಯ, ರಸ್ತೆ ಅಭಿವೃದ್ದಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕರ ವಿರುದ್ದ ಕಿಡಿ:
ವಿಧಾನ ಸಭಾ ಚುನಾವಣೆಯಲ್ಲಿ ದೇವೇಂದ್ರಪ್ಪ ರೌಡಿ ಎಂದು ಅಪ ಪ್ರಚಾರ ಮಾಡಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ನಾನೇನು ಕೊಲೆಗಾರನಾ, ಕಳ್ಳನಾ, ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣವಿದಯ, ಒಬ್ಬ ಸಮಾಜದ ವ್ಯಕ್ತಿಗೆ ಅನ್ಯಾಯವಾಗಿದೆ ಎನ್ನುವ ಕಾರಣಕ್ಕೆ ಅವನ ಜತೆಗೆ ನಿಂತಿದ್ದೇ ತಪ್ಪಾಯಿತು. ಅದನ್ನು ವೈರಲ್ ಮಾಡಿ ತೇಜೋವಧೆ ಮಾಡುವುದು ಎಷ್ಟು ಎಂದು ಪ್ರಶ್ನಿಸಿದ ಅವರು ಇದಕ್ಕೆ ಕಾಲವೇ ಉತ್ತರ ನೀಡುತ್ತದೆ ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ವಿರುದ್ದ ಪರೋಕ್ಷವಾಗಿ ಶಾಸಕ ದೇವೇಂದ್ರಪ್ಪ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ:
ಹನ್ನೊಂದು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದು ಒಮ್ಮೆ ಶಾಸಕನಾಗಿ ಆಯ್ಕೆಯಾಗಿ ಪಕ್ಷ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟು ಹೋರ ಹೋಗಿದ್ದು ಯಾರು? ತಮ್ಮ ಸ್ವಾರ್ಥಕ್ಕಾಗಿ ಪಕ್ಷ ಸೋಲಿಸಲು ಮುಂದಾಗಿದ್ದಲ್ಲದೆ ಕಾರ್ಯಕರ್ತರನ್ನು ಅನಾಥ ಮಾಡಿದ್ದು ಪಕ್ಷ ದ್ರೋಹ ಕೆಲಸವಲ್ಲವೇ ಎಲ್ಲವನ್ನು ಒಮ್ಮೆ ಆತ್ಮವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ತಾಯಿ ಬಂಜೆ ಅಂದುಕೊಂಡಿದ್ದರು ಆದರೆ ಅವರಿಗೆ ತಾಯಿ ಗರ್ಭದಲ್ಲಿ 51 ಸಾವಿರ ಮತಗಳಿದ್ದವು ಎನ್ನುವುದು ಗೊತ್ತಿರಲಿಲ್ಲ. ಇದೀಗ ಗೊತ್ತಾಗಿದೆ ಎಂದರು.
ಕೆ.ಪಿ ಪಾಲಯ್ಯ ಮಾತನಾಡಿ, ಕ್ಷೇತ್ರದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಲ್ಲದೇ ರಾಜ್ಯ ಜನತೆ ಕಾಂಗ್ರೆಸ್ ಜೈ ಎಂದಿದ್ದಾರೆ. ಚುನಾವಣಾ ಪ್ರಣಾಳಿಕೆಯಂತೆ ಎಲ್ಲಾ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಸಿದ್ದರಾಮಯ್ಯನವರು ಕೊಟ್ಟ ಮಾತು, ರಾಮ ಬಿಟ್ಟ ಬಾಣ ಎಂದಿಗೂ ಗುರಿ ತಪ್ಪುವುದಿಲ್ಲ. ಜನರು ಯಾವುದೇ ಗಾಳಿ ಸುದ್ದಿಗೆ ಕಿವಿ ಗೊಡಬಾರದು ಎಂದು ಸಲಹೆ ನೀಡಿದರು.
ರಸ್ತೆಗಳ ರಾಜ ರಾಜೇಶ್ ಬಿರುದಿನ ಹಿಂದೆ ನನ್ನ ಪರಿಶ್ರಮ ತುಂಬ ಇದೆ. ತಾಲೂಕಿನಲ್ಲಿ ಯಾವ ರಸ್ತೆಗಳು ಹಾಳಾಗಿ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಅಧಿಕಾರಿಗಳ ಗಮನಕ್ಕೆ ತಂದು ರಸ್ತೆಗಳನ್ನು ಮಾಡಲಾಗಿತ್ತು ಎಂದರು.
ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತರಲಿದೆ. ಆದರೆ ವಿರೋಧ ಪಕ್ಷದ ನಾಯಕರು ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದು ಎಂದರು.
ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇಡೀ ಗ್ರಾಮಕ್ಕೆ ಅನ್ನ ದಾಸೋಹ ಹಮ್ಮಿಕೊಂಡಿದ್ದರು. ಅಲ್ಲದೇ ಶಾಸಕ ಬಿ. ದೇವೇಂದ್ರಪ್ಪ, ಕೆ. ಪಿ ಪಾಲಯ್ಯ ಸೇರಿದಂತೆ ನೂರಾರು ಮುಖಂಡರು ಉಗ್ಗಿ, ಪಲ್ಯ, ಅನ್ನ ಸಾಂಬರು ಸವಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಅಲ್ಪ ಸಂಖ್ಯಾತ ವರ್ಗದ ಅಧ್ಯಕ್ಷ ಅಹಮದ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಪ.ಪಂ ಸದಸ್ಯ ರವಿಕುಮಾರ್, ಮಹಮದ್‌ಗೌಸ್, ಗ್ರಾ.ಪಂ ಸದಸ್ಯ ಶಿವಕುಮಾರ್, ಯುವ ಮುಖಂಡರಾದ ಅಜ್ಜಯ್ಯ, ಭದ್ರಿ, ಹನುಮಂತಪ್ಪ, ರವಿಕುಮಾರ್, ಚಿತ್ರಲಿಂಗಪ್ಪ, ಸುರೇಶ್,ಯೋಗೇಂದ್ರ, ರೈತ ಮೋರ್ಚಾ ಅಧ್ಯಕ್ಷ ಚಂದ್ರು ಸೇರಿದಂತೆ ಮತ್ತಿತರಿದ್ದರು.