ದಾವಣಗೆರೆ: ಅನ್ಯ ರಾಜ್ಯಕ್ಕೆ ಭತ್ತ ಮಾರಾಟ, ಕ್ವಿಂಟಲ್‍ಗೆ 3,000 ಗಡಿ ದಾಟುವ ಸಂಭವ?

Suddivijaya
Suddivijaya June 27, 2023
Updated 2023/06/27 at 1:20 PM

ಸುದ್ದಿವಿಜಯ,ದಾವಣಗೆರೆ: ಜಿಲ್ಲೆಯ ಭತ್ತಕ್ಕೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಭತ್ತದ ಧಾರಣೆ ಹೆಚ್ಚಾಗಿದ್ದು, ಸಹಜವಾಗಿಯೇ ರೈತರ ಖುಷಿಗೆ ಕಾರಣವಾಗಿದೆ. ನಗರದ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 2700 ರೂ ಗರಿಷ್ಟ ಬೆಲೆ ಸಿಕ್ಕಿದ್ದು, ಇತ್ತೀಚಿನ ದಿನಗಳಲ್ಲಿ ಭತ್ತಕ್ಕೆ ದೊರೆತ ಹೆಚ್ಚು ಧಾರಣೆ ಇದಾಗಿದೆ.

ಕಳೆದ ವಾರ 2200ರ ಆಸುಪಾಸಿನಲ್ಲಿದ್ದ ಆರ್‍ಎನ್‍ಆರ್ ಭತ್ತದ ಬೆಲೆ ಇಂದು 2700 ರೂ ಗೆ ಜಿಗಿದಿದೆ. ಈ ಮಾಸಾಂತ್ಯಕ್ಕೆ 3000 ಸಾವಿರ ರೂ. ಗಡಿ ದಾಟುವ ಸಾಧ್ಯತೆಗಳಿವೆ ಎನ್ನುತ್ತಾರೆ ವರ್ತಕರು. ಆಂಧ್ರಪ್ರದೇಶ, ತಮಿಳುನಾಡು, ತುಮಕೂರು, ಗಂಗಾವತಿ ಭಾಗದಲ್ಲಿ ಜಿಲ್ಲೆಯ ಹೆಚ್ಚು ಬೇಡಿಕೆ ಇರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿರುವ ಸುಮಾರು 25 ಅಕ್ಕಿ ಗಿರಣಿಗಳಲ್ಲೂ ಭತ್ತದ ದಾಸ್ತಾನು ಮಾಡುತ್ತಿರುವುದರಿಂದ ಬೇಡಿಕೆ ಬಂದಿದೆ. ನಿತ್ಯ 15 ಸಾವಿರ ಕ್ಚಿಂಟಲ್ ತನಕ ದಾವಣಗೆರೆ ಎಪಿಎಂಸಿಗೆ ಮಾರಾಟಕ್ಕೆ ಬರುತ್ತಿದೆ. ಮಳೆಯಿಂದ ಭತ್ತ ನಾಶ ಮತ್ತು ಅವಕ ಕಡಿಮೆಯಾಗುತ್ತಿರುವುದೂ ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಚೆನ್ನಾಗಿ ಒಣಗಿದ ಭತ್ತವನ್ನು 6 ತಿಂಗಳಿಅದ 1 ವರ್ಷದತನಕ ಸಂಗ್ರಹಿಸಬಹುದಾಗಿದೆ. ಆದರೆ ರೈತರ ಬಳಿ ಭತ್ತವಿಲ್ಲ.

ಬೇಸಿಗೆ ಹಂಗಾಮಿನ ಭತ್ತ ಮಾರಾಟ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆದರೆ ಇದೀಗ ಧಾರಣೆ ಹೆಚ್ಚಾಗಿರುವುದು ಭತ್ತ ಇಲ್ಲದ ರೈತರಿಗೆ ನಿರಾಶೆ ಮೂಡಿದೆ. ಈ ಮೊದಲು ಭತ್ತ ಮಾರಾಟ ಮಾಡಿದ ರೈತರಿಗೆ ಏನೂ ಉಪಯೋಗದೇ ಇದ್ದರೂ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಧಾರಣೆ ದೊರೆತಿದೆ.

ಹಾಗಾಗಿ ಈ ಬಾರಿ ಭತ್ತ ಬೆಳೆಗಾರನ ಖುಷಿಗೆ ಕಾರಣವಾಗಿದೆ. ಭತ್ತದ ಸುಗ್ಗಿ ಮುಗಿದಿದ್ದು ಈಗ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ, ಮಾರಾಟ ಮಾಡಲು ರೈತರ ಬಳಿ ಭತ್ತವೇ ಇಲ್ಲ. ಬೆಲೆ ಹೆಚ್ಚಳದ ಲಾಭವು ಭತ್ತ ದಾಸ್ತಾನು ಮಾಡಿರುವ ವರ್ತಕರ ಪಾಲು ಎಂಬಂತಾಗಿದೆ.

ಹಿಂಗಾರಿನ ಭತ್ತದ ಸುಗ್ಗಿ ಮುಗಿದಿದೆ. ಬಹುತೇಕ ರೈತರು ತಾವು ಬೆಳೆದಿದ್ದ ಭತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ಈಗ ಭತ್ತದ ಬೆಲೆ 2,600 ರೂ.ಗೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಉತ್ತಮ ಧಾರಣೆಯಾಗಿದ್ದು, ಈ ಬೆಲೆ ಸುಗ್ಗಿ ಕಾಲದಲ್ಲಿ ಇದ್ದಿದ್ದರೆ ಬೆವರು ಬಸಿದ ರೈತನಿಗೆ ಲಾಭವಾದರೂ ಆಗುತ್ತಿತ್ತು. ಆದರೀಗ ಲಾಭ ವರ್ತಕರ ಪಾಲಾಗಲಿದೆ, ಇದೀಗ ಭತ್ತದ ಬೆಲೆ ಏರಿಕೆಯ ಪರಿಣಾಮ ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯೂ ಹೆಚ್ಚಳವಾಗಿ ಜನ ಸಾಮಾನ್ಯರಿಗೂ ಹೊರೆಯಾಗುವುದರಲ್ಲಿ ಎರಡು ಮಾತಿಲ್ಲ.

ಹಿಂಗಾರು ಭತ್ತ ಮೇ 15ರಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಆರಂಭದಲ್ಲಿ ಕ್ವಿಂಟಾಲ್‍ಗೆ ಕನಿಷ್ಠ 1,790ರಿಂದ ಗರಿಷ್ಟ 2,070 ರೂ. ಬೆಲೆಯಿತ್ತು. ಸರಾಸರಿ 1,904 ರೂ. ಬೆಲೆಯಿತ್ತು. ಭತ್ತಕ್ಕೆ ಬೆಲೆ ಹೆಚ್ಚಿಸಬೇಕು. ಕನಿಷ್ಠ 3,500 ರೂ. ಬೆಲೆ ನೀಡಬೇಕು, ಎಂದು ರೈತರು ಕೂಡ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು.

ಈಗ ರೈತರು ಎಲ್ಲ ಭತ್ತವನ್ನು ಮಾರಿಕೊಂಡಿದ್ದು ಅವರ ಬಳಿ ಉತ್ಪನ್ನ ಇಲ್ಲ. ಆದರೆ ಈಗ ಮಾರುಕಟ್ಟೆಯಲ್ಲಷ್ಟೆ ಅಲ್ಲ, ವರ್ತಕರು ಹಳ್ಳಿಗಳಿಗೆ ಹೋಗಿ ಕ್ವಿಂಟಾಲ್ಗೆ 2,500 ರಿಂದ 2,800 ರೂ.ಗೆ ಖರೀದಿ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಭತ್ತ ಕಟಾವು ಪೂರ್ಣಗೊಂಡು 1 ತಿಂಗಳು ಕಳೆದಿವೆ. ಭದ್ರಾನಾಲಾ ಅಚ್ಚುಕಟ್ಟು ಭಾಗದ ಕೊನೆಯ ರೈತರು ತಡವಾಗಿ ಕೊಯ್ಲು ಮಾಡಿದ್ದು, ಈ ಭಾಗದ ರೈತರಿಗೆ ಭತ್ತದ ಬೆಲೆ ಏರಿಕೆ ವರದಾನವಾಗಿದೆ.

ಪ್ರಸಕ್ತ ಸಾಲಿನ ಆರ್‍ಎನ್‍ಆರ್ ಸೋನಾ ಭತ್ತಕ್ಕೆ ಈ ಪ್ರಮಾಣದಲ್ಲಿ ಬೆಲೆ ಇರುವುದರಿಂದ ಕಳೆದ ವರ್ಷದ ಆರ್‍ಎನ್‍ಆರ್ ಸೋನಾ ಭತ್ತಕ್ಕೂ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ? ಒಂದು ವರ್ಷ ಹಳೆಯದಾದ ಆರ್‍ಎನ್‍ಆರ್ ಸೋನಾ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ 2,200 ರಿಂದ 2,300 ರೂ.ವರೆಗೆ ದರವಿತ್ತು.

ಸದ್ಯ ಮಾರುಕಟ್ಟೆಯಲ್ಲಿ 2,700 ರಿಂದ 2,900 ರೂ.ಗಳ ದರದಲ್ಲಿ ಖರೀದಿ ನಡೆದಿದೆ. ಮುಂದಿನ ಕೆಲವು ದಿನಗಳಲ್ಲಿ ಹಳೆಯ ಆರ್‍ಎನ್‍ಆರ್ ಸೋನಾ ಭತ್ತದ ಬೆಲೆ ಪ್ರತಿ ಕ್ವಿಂಟಲ್‍ಗೆ 3,000 ರೂ.ಗಳವರೆಗೆ ದರ ಹೆಚ್ಚುವ ಸಾಧ್ಯತೆಯಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!