ಸುದ್ದಿ ವಿಜಯ, ಜಗಳೂರು:ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬುಧವಾರ ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಗೆ ಭೇಟಿ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ಜೊತೆಗೆ ಎಚ್ಚರಿಕೆಯನ್ನು ನೀಡಿದರು.
ಯಾರೇ ಸಾರ್ವಜನಿಕರು ಕಚೇರಿಗೆ ಬಂದರೆ ಅವರನ್ನು ಹೆಚ್ಚು ಹೊತ್ತು ಕಾಯಿಸಬೇಡಿ. ಸಾರ್ವಜನಿಕರ ಅರ್ಜಿಗಳನ್ನು ತಕ್ಷಣವೇ ಸವೀಕರಿಸಿ ಮನೆಗೆ ಕಳುಹಿಸಿ ಎಂದು ತಾಕೀತು ಮಾಡಿದರು.
ಪ್ರತಿ ವಿಭಾಗದ ಕೊಠಡಿಗಳಿಗೆ ಭೇಟಿ ನೀಡಿ ಕಡೆತಗಳನ್ನು ವೀಕ್ಷಿಸಿದರು. ಭೂಮಿಕೇಂದ್ರ, ಶಿರಾಸ್ತೇದಾರ್ ಕಚೇರಿ, ವೃದ್ಧಾಪ್ಯವೇತನ ವಿಭಾಗ, ಸಕಾಲ ಅರ್ಜಿ ವಿಭಾಗ, ಪಹಣಿ ವಿತರಣಾ ಕೇಂದ್ರ, ಧಾರ್ಮಿಕ ದತ್ತಿ ಇಲಾಖೆ, ಭೂ ಹಿಡುವಳಿದಾರರ ಕೊಠಡಿ, ಆಹಾರ ನಾಗರೀಕ ಸರಬರಾಜು ಕೊಠಡಿ, ಕಡೆತಗಳ ಕೊಠಡಿ, ಸಬ್‍ರಿಜಿಸ್ಟ್ರಾರ್ ಕಚೇರಿ, ಚುನಾವಣಾ ಶಾಖೆ, ಉಪತಹಶೀಲ್ದಾರ್ ಕಚೇರಿ, ಸಾಂಖಿಕ ಕಚೇರಿ, ಭೂಮಾಪನಾ ಇಲಾಖೆಗಳು ಸೇರಿ ಪ್ರತಿ ಕೊಠಡಿಗಳನ್ನು ಕೂಲಂಕಷವಾಗಿ ಖುದ್ದು ವೀಕ್ಷಿಸಿದರು.
ಹಳೆ ಕಡೆತಗಳ ಕೊಠಡಿಗೆ ಭೇಟಿ ವೇಳೆ ಅಲ್ಲಿನ ಸಿಬ್ಬಂದಿ ಕಾಂತರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾರ ಬಳಿಯೂ ಲಂಚ ಪಡೆಯಬಾರದು. ಒಂದೇ ಒಂದು ಕಡೆತವೂ ಕಚೇರಿಯಿಂದ ಹೊರ ಹೋಗಬಾರದು. ಜಾಗದ ಕೊರತೆ ಇದ್ದರೆ ಹೊಸ ಕೊಠಡಿಗೆ ವ್ಯವಸ್ಥೆ ಮಾಡಿ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಶಿಸ್ತಿಗೆ ಮೆಚ್ಚುಗೆ:
ತಾಲೂಕು ಕಚೇರಿಗೆ ಭೇಟಿ ಕೊಡುವ ಸಾರ್ವಜನಿಕರ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿದ್ದೀರಿ. ಬೆರಳೆಣಿಕೆಯಷ್ಟು ಮಂದಿ ಮಾತ್ರ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇದೇ ರೀತಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಕಾರ್ಯಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವೆ ಅಧಿಕಾರಿ ಕಾರ್ಯಕ್ಕೆ ಶ್ಲಾಘನೆ:
ಜಿಲ್ಲಾಧಿಕಾರಿಗಳು ಭೂಮಾಪನ ಮತ್ತು ಸರ್ವೆ ಕೊಠಡಿಗೆ ಭೇಟಿ ನೀಡಿದಾಗ ಪ್ರತಿಯೊಬ್ಬ ಸರ್ವೆ ಅಧಿಕಾರಿ ತಿಂಗಳಿಗೆ ಕೊಟ್ಟಿದ್ದ ಅವರ ಟಾರ್ಗೆಟ್ ರೀಚ್ ಆಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭೂ ಸರ್ವೆ, ಹದ್ದುಬಸ್ತು, ಪೋಡಿ ಮಾಡಿದ್ದೇವೆ ಎಂದು ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಂತೆ ಉತ್ತಮ ಕೆಲಸ ಮಾಡಿದ್ದಕ್ಕೆ ಅಭಿನಂದನೆ ಎಂದರು.
ಕಚೇರಿ ಏಕೆ ಹೀಗಿದೆ ಎಂದು ಕೇಳಿದ್ರು ಡಿಸಿ:
ಡಿಸಿ ವೀಕ್ಷಣೆ ವೇಳೆ ಮೇಲ್ಛಾವಣಿ ಕಿತ್ತು ಹೋಗಿದ್ದನ್ನು ವೀಕ್ಷಿಸಿ ಅವರು 20 ವರ್ಷಕ್ಕೆ ಇಷ್ಟೊಂದು ಹಾಳಾಗಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಪ್ರತಿ ವಿಭಾಗದ ಅಧಿಕಾರಿಗಳ ದಾಖಲಾತಿ ಕಡೆತಗಳನ್ನು ವೀಕ್ಷಿಸಿ ವಿಳಂಬ ಮಾಡದೇ ತಕ್ಷಣವೇ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಗ್ರಾಮಲೆಕ್ಕಿಗ ಮಲ್ಲಿಕಾರ್ಜುನ್ ಅವರ ಕಡೆತಗಳ ಸ್ವಚ್ಛತೆಗೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶಹಬ್ಬಾಸ್ ಎಂದರು.
ಮಂದಗತಿ ಕಾಮಗಾರಿಗೆ ಆಕ್ರೋಶ:
ತಹಶೀಲ್ದಾರ್ ಕಚೇರಿ ದುರಸ್ಥಿ ಕಾಮಗಾರಿಗೆ 2.10 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿದೆ ಆದರೆ ಕಾಮಗಾರಿ ಕುಂಠಿತವಾಗಿದೆ ಎಂದು ಡಿಸಿ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು.’ನಿಮ್ಮ ಕೈಲಿಗೆ ಕೆಲಸ ಮಾಡ್ಲಿಕ್ಕೆ ಆಗುತ್ತೊ ಇಲ್ವೋ ಹೇಳಿಬಿಡಿ. ಇಲ್ಲದಿದ್ದರೆ ಏಜೆನ್ಸಿ ಬದಲಿಸುತ್ತೇವೆ. ಮೂರು ತಿಂಗಳೊಳಗೆ ಕಾರ್ಯ ಮುಗಿಸಿ ಎಂದು ಎಚ್ಚರಿಕೆ ನೀಡಿದರು.
ಮೂರು ತಿಂಗಳು ಸಂಬಳ ಬಂದಿಲ್ಲ ಸ್ವಾಮಿ:
ಡಿಸಿ ಭೇಟಿ ವೇಳೆ ಜಾಡನಕಟ್ಟೆ ಗ್ರಾಮದ ವೃದ್ಧ ಕರಿಯಪ್ಪ ಮೂರುತಿಂಗಳಿಂದ ವೃದ್ಧಾಪ್ಯವೇತನ ಬಂದಿಲ್ಲ ಸ್ವಾಮಿ ಎಂದಾಕ್ಷಣ ಅಲ್ಲಿಯೇ ಇದ್ದ ಕೇಸ್ ವರ್ಕರ್ ಕರೆದು ಇಂದೇ ಅವರಿ ವೃದ್ಧಾಪ್ಯವೇತನ ಆರ್ಡರ್ ಕೊಡಿ ಎಂದು ಸೂಚಿಸಿದರು.
ಡಿಸಿಗೆ ಆಶೀವಾಧ ಮಾಡಿದ ವೃದ್ಧೆ:
ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ವೇಳೆ ವೃದ್ಧಿ ಕಾಲಿಗೆ ಬೀಳಲು ಮುಂದಾದಾಗ ಜಿಲ್ಲಾಧಿಕಾರಿ ಅಯ್ಯೊ ನೀವು ಕಾಲಿಗೆ ಬೀಳಬಾರದು ತಾಯಿ ಆಶೀರ್ವಾದ ಮಾಡಿ ಎಂದು ವೃದ್ಧೆಯಿಂದ ಆಶೀವಾದ ಪಡೆದರು.
ಈವೇಳೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಉಪತಹಶೀಲ್ದಾರ್ ಮಂಜಾನಂದ, ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಇಒ ಲಕ್ಷ್ಮೀಪತಿ, ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್‍ಮೂರ್ತಿ, ಕೃಷಿ ಇಲಾಖೆ ಅಧಿಕಾರಿ ಮಿಥುನ್ ಕೀಮಾವತ್, ಬಿಸಿಎಂ ಕಲ್ಯಾಣಾಧಿಕಾರಿ ಆಸ್ಮಾಭಾನು, ಆರ್‍ಐ ಕುಬೇರ್ ನಾಯ್ಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.