ಆರೋಗ್ಯ ಪೂರ್ಣ ಪೈಪೋಟಿ ಇದ್ದರೆ ಸಹಕಾರಿ ರಂಗದಲ್ಲಿ ಉತ್ತಮ ಬೆಳವಣಿ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ J.R. ಷಣ್ಮುಖಪ್ಪ ಅಭಿಮತ

Suddivijaya
Suddivijaya September 23, 2023
Updated 2023/09/23 at 10:50 AM

ಸುದ್ದಿವಿಜಯ, ದಾವಣಗೆರೆ : ಎಲ್ಲಾ ಸಹಕಾರಿಗಳಲ್ಲೂ ಆರೋಗ್ಯಪೂರ್ಣ ಪೈಪೋಟಿ ಇದ್ದರೆ ಸಹಕಾರಿ ರಂಗವು ಉತ್ತಮ ಬೆಳವಣಿಗೆ ಕಾಣಲು ಸಾಧ್ಯ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ದಾವಣಗೆರೆ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಜೆ.ಆರ್. ಷಣ್ಮುಖಪ್ಪ ಅಭಿಪ್ರಾಯ ಪಟ್ಟರು.

ಶನಿವಾರ ನಗರದ ವಿನೋಬನಗರ ಒಂದನೇ ಮುಖ್ಯರಸ್ತೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತದ ಆವರಣದಲ್ಲಿ ನಡೆದ 2022 -23ನೇ ಸಾಲಿನ 16ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಧ್ಯ ಕರ್ನಾಟಕ ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಈ ಭಾಗಗಳಲ್ಲಿ ಇತರೆ ಸಹಕಾರ ಸೊಸೈಟಿಗಳಿಗೆ ಆರೋಗ್ಯಪೂರ್ಣ ಪೈಪೋಟಿ ನೀಡುವ ಬದಲಿಗೆ ಆ ಸೊಸೈಟಿಗಳ ಹಾಳು ಮಾಡಬೇಕೆಂಬ ಕೆಡಕು ಭಾವನೆ ಇದೆ. ಖಾಲಿ ಸೊಸೈಟಿ ಇದ್ದರೂ ಬೆಳೆವಣಿಗೆ ಸಹಿಸಲಾಗದೇ ಸೊಸೈಟಿ ವಿರುದ್ಧ ವಿನಾಕಾರಣ ಮೂಖರ್ಜಿ ಹಾಕುವುದು, ಗಲಾಟೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಸಹಕಾರ ರಂಗಕ್ಕೂ ಪೆಟ್ಟು ಸಹ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಭಾಗಗಳಲ್ಲಿ ಬೆಳೆಯುವ ಸೊಸೈಟಿಗಳಂತೆ ತಾವೂ ಉತ್ತಮವಾಗಿ ಸೊಸೈಟಿ ಕಟ್ಟಬೇಕೆಂಬ ಆರೋಗ್ಯಪೂರ್ಣ ಪೈಪೆÇೀಟಿ ಇದೆ. ಹಾಗಾಗಿ ಟೀಕೆ ಮತ್ತು ಕೆಡಕನ್ನು ಉಂಟು ಮಾಡುವ ಭಾವನೆ ದೂರವಾಗಿ ಆರೋಗ್ಯಪೂರ್ಣ, ಪ್ರೇರಕ ಭಾವನೆ ಎಲ್ಲಾ ಸಹಕಾರಿಗಳಲ್ಲೂ ಮೂಡಿದಾಗ ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಸಾಧನೆ ಕಾಣಲು ಸಾಧ್ಯ ಎಂದು ಆಶಿಸಿದರು.

2008ರಲ್ಲಿ ನಾವು ಸಹಕಾರ ಸಂಘ ಕಟ್ಟಿ ಬೆಳೆಸಿದ್ದೇವೆ. ಸಂಘ ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಆದರೆ ಈ ಬಗ್ಗೆ ಟೀಕೆ ಸುಲಭ. ಇಡೀ ರಾಜ್ಯದಲ್ಲಿ ದಾವಣಗೆರೆ ಹಾಪ್ ಕಾಮ್ಸ್ ಅನ್ನು ಉನ್ನತವಾಗಿ ಬೆಳೆಸಲಾಗಿದೆ. ಸಂಸ್ಥೆ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ನಾವೇನು ಕೊಟ್ಟಿದ್ದೀವೆ ಎಂಬ ಭಾವನೆ ಬೇಕು.

ನಮ್ಮ ಅವಧಿಯಲ್ಲಿ ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಗಾಡಿಗಳ ಕೊಡಿಸಿದ್ದೇವೆ. ರೈತರಿಗೆ ಗೊಬ್ಬರ, ಔಷಧಿಗೆ ಹಣ ಕೊಡಿಸಿದ್ದೇವೆ. ರೈತರ ಮನವೋಲಿಸಿ ಸಾಲ ಮರುಪಾವತಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಶಿರಸಿಯಲ್ಲಿನ ತೋಟಗಾರ್ಸ್ ಸಹಕಾರ ಸೊಸೈಟಿಯಿಂದ ರೈತರಿಗೆ ಅವಶ್ಯಕ ರಸಗೊಬ್ಬರ, ಯಂತ್ರೋಪಕರಣಗಳು, ಸಾಲ, ಅಡಮಾನ ಸಾಲ, ಚಾಲಿ ಅಡಿಕೆ ಬೆಳೆಯಲು ಸಾಲ, ಬಂಗಾರ ಅಡಮಾನ ಸಾಲ, ಕಡಿಮೆ ದರದಲ್ಲಿ ಉಗ್ರಾಣಗಳು, ಕೊಬ್ಬರಿ, ಶೇಂಗಾ ಗಾಣಕ್ಕೆ ಪ್ರೊತ್ಸಾಹ ಇದೆ. ಇವುಗಳನ್ನು ಸ್ವತಹ ವೀಕ್ಷಿಸಿದ್ದೇನೆ. ಈ ರೀತಿಯಾಗಿ ಸಹಕಾರ ಸೊಸೈಟಿಗಳು ರೈತರಿಗೆ ಸಹಕಾರ ನೀಡಬೇಕು ಎಂದರು.

ದಾವಣಗೆರೆಯ ಹಾಪ್ ಕಾಮ್ಸ್ ನ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ನೀಡಿ ಲಾಭಧಾಯಕವಾಗಿಸಲು ಈಗಿರುವ 8 ಮಳಿಗೆಗಳು ಸಾಲದು. ಅದಕ್ಕಾಗಿ ಕನಿಷ್ಠ 50 ಮಳಿಗೆಗಳಾದರೂ ಅವಶ್ಯವಿದೆ. ವಿನೋಬನಗರದ ದಿಕ್ಕಿನಲ್ಲಿ ಜಾಗ ಕೀಳಲಾಗಿತ್ತು ಕೊಟ್ಟಿಲ್ಲ.

20*30 ಅಳತೆ ಜಾಗ ಕೊಟ್ಟರೆ ಒಳ್ಳೇ ಮಳಿಗೆ ಮಾಡಬಹುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಬಳಿ ದೂಡಾ ಅಥವಾ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಜಾಗ ನೀಡುವಂತೆ ಮನವಿ ಮಾಡಲಾಗಿದ್ದು, ಸಚಿವರಿಂದ ಸಾಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್. ಹೆಚ್. ರವೀಂದ್ರನಾಥ, ನಿರ್ದೇಶಕರುಗಳಾದ ಟಿ. ರಾಜಣ್ಣ, ಜಿ.ಎಂ. ರುದ್ರಗೌಡ, ಜೆ.ಎಸ್. ಶಿವಮೂರ್ತಿ, ಎಸ್.ಜಿ. ಮಧುಗೌಡ, ಜಿ. ಟಿ. ಶಿವಕುಮಾರ್, ಬಿ.ಎಸ್. ನಾಗನಗೌಡ, ಜಿ.ಎನ್. ವೀಣಾ, ರೇಷ್ಮಾ, ವಿ.ಆರ್. ರಂಗಪ್ಪ, ವೈ. ಲೋಕೇಶ್, ಬಿ. ಚಂದ್ರನಾಯ್ಕ, ಕೆ. ರೇವಣಸಿದ್ದಪ್ಪ, ವೃತ್ತಿಪರ ನಿರ್ದೇಶಕ ಹೆಚ್.ಜಿ. ಶಂಕರಮೂರ್ತಿ ಸೇರಿದಂತೆ ಇತರರು ಇದ್ದರು.

ಜಾಗ ಸಿಕ್ಕರೆ ರೈತರ ಮೆಗಾ ಮಾರ್ಕೆಟ್ : ಬೆಂಗಳೂರು, ಮೈಸೂರು, ಹಾಸನ, ಕೊಡಗು ಈ ಜಿಲ್ಲೆಗಳಲ್ಲಿ ಮೆಗಾ ಮಾರ್ಕೆಟ್ ಇದ್ದು, ಅಲ್ಲಿ ಹಣ್ಣು, ತರಕಾರಿ ಸೇರಿದಂತೆ ರೈತರಿಗೆ ಅವಶ್ಯಕ ಕೃಷಿ ಉಪಕರಣಗಳು ಸಿಗುವ ವ್ಯವಸ್ಥೆ ಇದೆ. ಅಂತೆಯೇ ದಾವಣಗೆರೆಯಲ್ಲೂ 100/100 ಅಡಿ ಜಾಗ ಸಿಕ್ಕರೆ ರೈತರ ಮೆಗಾ ಮಾರ್ಕೆಟ್ ಮಾಡಲಾಗುವುದು ಎಂದು ಜೆ.ಆರ್. ಷಣ್ಮುಖಪ್ಪ ತಿಳಿಸಿದರು.

ಸಂಸ್ಕರಣ ಘಟಕ ಸ್ಥಾಪನೆಗೆ ಜಾಗ ಅವಶ್ಯಕ : ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಹಾಪ್ ಕಾಮ್ಸ್ 13 ಎಕರೆ ಪ್ರದೇಶ ಸೂಕ್ತವಾಗಿದೆ. ಈಗ ಸದ್ಯಕ್ಕೆ 15 ಸಾವಿರ ಚದರಡಿಯಲ್ಲಿದ್ದು, ಕೇವಲ ಸರ್ವಿಸ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಸ್ವಲ್ಪ ಜಾಗ ಸಿಕ್ಕರೆ ಎಳನೀರು ಶೇಖರಣೆ ಹಾಗೂ ಜಾಮ್ ತಯಾರಿಕಾ ಮತ್ತು ಸಂಸ್ಕರಣ ಘಟಕವನ್ನು ಸ್ಥಾಪಿಸಬಹುದಾಗಿದೆ. ಮೊದಲು ತಾಲೂಕುವಾರು ನಂತರ ಹೋಬಳಿ ಮಟ್ಟದಲ್ಲಿ ಇದನ್ನ ಸ್ಥಾಪಿಸಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಕ್ಷೇಮಾಭಿವೃದ್ಧಿ ಇಲಾಖೆ ಸೇರಿದಂತೆ ಆಸ್ಪತ್ರೆಗಳಿಗೆ ಹಣ್ಣು ತರಕಾರಿಗಳನ್ನು ಸುಲಭವಾಗಿ ಸರಬರಾಜು ಮಾಡಲು ಅನುಕೂಲವಾಗುತ್ತದೆ. ಹಾಪ್ ಕಾಮ್ಸ್ ನಲ್ಲಿರುವ ಜಿ-4 ವ್ಯವಸ್ಥೆಯಲ್ಲಿ ರೈತರ ಉತ್ಪನ್ನಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಬೇಕು. ಅದೇ ನಮಗೆ ಜಿ-ಹೆಚ್ ವ್ಯವಸ್ಥೆಯಿಂದ ರೈತರಿಂದ ನೇರವಾಗಿ ಉತ್ಪನ್ನಗಳು ನಮಗೆ ದೊರೆಯಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಸೂಕ್ತ.
– ಜೆ.ಆರ್. ಷಣ್ಮುಖಪ್ಪ,

Share this Article
Leave a comment

Leave a Reply

Your email address will not be published. Required fields are marked *

error: Content is protected !!