ದಾವಣಗೆರೆ :ಮಾಜಿ ಸಚಿವರ ಫಾರ್ಮ್ ಹೌಸ್ ಮೇಲೆ ಸಿಸಿಬಿ ದಾಳಿ, ಜೀವಂತ ವನ್ಯ ಜೀವಿಗಳು ಪತ್ತೆ!

Suddivijaya
Suddivijaya December 22, 2022
Updated 2022/12/22 at 11:07 AM

ಸುದ್ದಿ ವಿಜಯ, ದಾವಣಗೆರೆ : ಬೆಂಗಳೂರಿನಲ್ಲಿ ಜಿಂಕೆ ಚರ್ಮ ಮಾರಾಟ ಮಾಡುವ ವೇಳೆ ಸಿಸಿಬಿಯವರಿಗೆ ಸಿಕ್ಕ ವ್ಯಕ್ತಿಯೊಬ್ಬನ ಹೇಳಿಕೆ‌ ಆಧಾರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಒಡೆತನದ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ವನ್ಯಜೀವಿಗಳು ಪತ್ತೆಯಾಗಿವೆ.

ದಾವಣಗೆರೆಯ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮ್‌ ಹೌಸ್‌ ಮೇಲೆ ಈ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಪ್ರಾಣಿ ಸಂಕುಲ ಪತ್ತೆಯಾಗಿವೆ. ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿದ್ದು, ಸ್ಥಳೀಯ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ. ಬುಧವಾರ ರಾತ್ರಿಯ ತನಕ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು ನಗರದ ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್‌ ಎಂಬ ವ್ಯಕ್ತಿಯನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ದಾವಣಗೆರೆ ಕಲ್ಲೇಶ್ವರ ಮಿಲ್ಸ್ ನಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ’ .

ಸಿಸಿಬಿ ಪೊಲೀಸರು ಸೆಂಥಿಲ್‌ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮುಂದಿನ ಕ್ರಮಕ್ಕೆ ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕಲ್ಲೇಶ್ವರ ಫಾರ್ಮ್‌ ಹೌಸ್‌ನಲ್ಲಿ ಪತ್ತೆಯಾಗಿರುವ ವನ್ಯಜೀವಿಗಳನ್ನು ಈಗಾಗಲೇ ಅರಣ್ಯ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಅವುಗಳ ರಕ್ಷಣೆಗೆ ಸಿದ್ದತೆ ನಡೆದಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ನ್ಯಾಯಾಲಯವನ್ನು ಕೋರಲಾಗಿದೆ. ಆದೇಶದ ಪ್ರತಿ ಸಿಗುತ್ತಿದ್ದಂತೆಯೇ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭಿಸಿ ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ ಸಮೀಪದ ಆನಗೋಡು ಸಮೀಪ ಇಂದಿರಾ ಪ್ರಿಯಾದರ್ಶಿನಿ ಪ್ರಾಣಿ ಸಂಗ್ರಹಾಲಯವಿದ್ದು, ಅವುಗಳನ್ನು ಅಲ್ಲಿ ಬಿಡಲು ನ್ಯಾಯಾಲಯದ ಅನುಮತಿ ಬೇಕಿದೆ. ನಂತರ ನ್ಯಾಯಾಲಯದ ಅನುಮತಿ ಪಡೆದು ವನ್ಯಜೀವಿಗಳನ್ನು ಅರಣ್ಯಕ್ಕೆ ಬಿಡಬೇಕೇ ಅಥವಾ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಪರಿಶೀಲನೆ : ಇಲ್ಲಿ ಸಿಕ್ಕಿರುವ ಪ್ರಾಣಿಗಳನ್ನು ಪರವಾನಗಿ ಪಡೆದೇ ಸಾಕುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ವಶಕ್ಕೆ ಪಡೆದಿರುವ ವನ್ಯಜೀವಿಗಳನ್ನು ಸಾಕಲು ಪರವಾನಗಿ ಪಡೆದಿರುವ ಯಾವುದೇ ದಾಖಲೆಗಳನ್ನೂ ಸಂಬಂಧಪಟ್ಟವರು ನಮ್ಮ ಗಮನಕ್ಕೆ ಇನ್ನೂ ತಂದಿಲ್ಲ. ಒಂದು ವೇಳೆ ಪಡೆದರೂ, ವ್ಯಾಲಿಡಿಟಿ ಇತ್ತಾ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು. ಈ ಜಾಗ ಯಾರ ಹೆಸರಿನಲ್ಲಿದೆ ಎಂದು ಪುರಸಭೆಯಲ್ಲಿ ಚೆಕ್ ಮಾಡಬೇಕು ಎಂದು ಡಿಎಫ್ಒ ಹೇಳಿದ್ದಾರೆ.

ಲೈಸೇನ್ಸ್ ಪಡೆದೇ ಸಾಕಿದ್ದೇವೆ : ಮೊದಲಿನಿಂದಲೂ ಪ್ರಾಣಿ ಸಾಕುವ ಹವ್ಯಾಸವಿದ್ದು, ಪರವಾನಗಿ ಪಡೆದೇ 2000ರಿಂದಲೇ ನಮ್ಮ ಫಾರ್ಮ್‌ ಹೌಸ್‌ನಲ್ಲಿ ಜಿಂಕೆ ಸಾಕಿದ್ದೇವೆ. ಇವುಗಳನ್ನು ನೋಡಿಕೊಳ್ಳಲು ವ್ಯಕ್ತಿಯೊಬ್ಬನನ್ನು ನೇಮಿಸಲಾಗಿತ್ತು. ಆದರೆ ಆತ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ. ಕಾನೂನು ಪ್ರಕಾರವೇ ನಾವು ಸಾಕುತ್ತಿದ್ದೇವೆ’ ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿಕೆ ನೀಡಿದ್ದಾರೆ.

ಮುಂಗುಸಿ ಸಾಕಿದ್ದೇಕೆ ಎಂಬ ಅನುಮಾನ : ಸಾಮಾನ್ಯವಾಗಿ ಯಾರು ಕೂಡ ಮುಂಗುಸಿಯನ್ನು ಸಾಕೋದಿಲ್ಲ. ಕೆಲವರು ಅದೃಷ್ಟ ಎಂದು ಸಾಕುತ್ತಾರೆ. ಆದರೆ ಮುಂಗುಸಿ ಸಾಕೋದರ ಹಿಂದೆ ಒಂದು ಜಾಲವೇ ಇದೆ. ಮುಂಗುಸಿ ಕೂದಲಿನಿಂದ ತಯಾರಿಸಿದ್ದ ಪೈಂಟ್ ಬ್ರಷ್‍ಗಳನ್ನು ತಯಾರು ಮಾಡಲಾಗುತ್ತದೆ. ವರ್ಣಚಿತ್ರ ಕಲಾವಿದರು ತೈಲ ಮತ್ತು ಆಕ್ರಿಲಿಕ್ ಪೇಂಟಿಂಗ್ ಮತ್ತು ಕಲಾಕೃತಿಗಳನ್ನು ಸೃಷ್ಟಿಸಲು ಮುಂಗುಸಿ ಕೂದಲಿನ ಬ್ರಷ್‍ಗಳನ್ನು ಬಳಸುತ್ತಾರೆ. ಮುಂಗುಸಿ ಕೂದಲಿನಿಂದ ತಯಾರಿಸಿದ ಇಂಥ ಬ್ರಷ್‍ಗಳು ದುಬಾರಿಯಾಗಿದ್ದು, ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಮಹಾರಾಷ್ಟ್ರ, ಹೈದ್ರಾಬಾದ್ ಮತ್ತು ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಪ್ರತಿ ವರ್ಷ ಸಹಸ್ರಾರು ಮುಂಗುಸಿಗಳನ್ನು ಕೊಂದು ಅವುಗಳ ಚರ್ಮ ಮತ್ತು ರೋಮಗಳನ್ನು ಅಕ್ರಮವಾಗಿ ಕಳ್ಳ ಸಾಗಣೆ ಮತ್ತು ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ಮುಂದುವರಿದಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!