ಕ್ರಿಕೆಟ್ ಬ್ಯಾಟ್ ತಯಾರಿಕೆ, ಮಾರಾಟವೇ ಇವರ ಜೀವನ, ಛಲಬಿಡದ ಸಾಧಕರಿವರು!

Suddivijaya
Suddivijaya May 25, 2023
Updated 2023/05/25 at 5:50 AM

ಸುದ್ದಿವಿಜಯ, ದಾವಣಗೆರೆ(ವಿಶೇಷ): ಕ್ರಿಕೆಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ರಜೆ ಬಂತು ಅಂದ್ರೆ ಸಾಕು ಖಾಲಿ ಫೀಲ್ಡ್, ಹೊಲಗಳಲ್ಲಿ, ಸ್ಟೇಡಿಯಂನಲ್ಲಿ ಆಟಗಾರರು ಕಾಣುತ್ತಾರೆ. ಅದರಲ್ಲೂ ಬ್ಯಾಟ್ಸ್‍ಮನ್ ಹೊಡೆಯುವ ಸಿಕ್ಸರ್, ಫೋರ್ಸ್ ಗಳಿಗೆ ಅನೇಕರು ಫಿದಾ ಕೂಡ ಆಗಿದ್ದಾರೆ. ಆದರೆ ಈ ಖುಷಿ ಹಿಂದೆ ಹಲವು ಶ್ರಮಿಕರ ಶ್ರಮವೂ ಇದೆ.

ದಾವಣಗೆರೆ ಪಿಬಿ ರೋಡ್‍ನಲ್ಲಿ ಗುಜರಾತಿ ಕುಟುಂಬವೊಂದು, ಬ್ಯಾಟ್‍ಗಳ ತಯಾರಿಕೆಯಲ್ಲಿ ತೊಡಗಿದ್ದು, ಮಹಿಳೆಯರೇ ಈ ಕಾಯಕದಲ್ಲಿ ಇರೋದು ವಿಶೇಷ. ಒಂದು ಪುಟ್ಟ ಗೂಡಿನಲ್ಲಿ ಕಳೆದ 30 ವರ್ಷದಿಂದ ವಾಸ ಮಾಡುತ್ತಿರುವ ಕುಟುಂಬ ಮಳೆಗಾಲದಲ್ಲಿ ಮಾತ್ರ ಬೇರೆ ಕಡೆ ಹೋಗುತ್ತದೆ. ಇನ್ನುಳಿದ ದಿನವೆಲ್ಲ ಬ್ಯಾಟ್ ತಯಾರಿಕೆಯಲ್ಲಿ ತೊಡಗಿರುತ್ತದೆ. ರಮೇಶ್ ಎಂಬುವರು ಮನೆ ಯಜಮಾನನಾದರೆ, ಇವರಿಗೆ ಕಾಜಲ್ ಮತ್ತು ಷಜಾನ್ ಎಂಬ ಮಹಿಳೆಯರು ಕೆಲಸಕ್ಕೆ ಸಾಥ್ ನೀಡುತ್ತಾರೆ.

ದಾವಣಗೆರೆ ನಗರ ಅಲ್ಲದೆ ಸುತ್ತಮುತ್ತಲ ಗ್ರಾಮದವರು ಬೀಸುತ್ತಿರುವ ಬ್ಯಾಟ್‍ಗಳು ಈ ಕಾರ್ಮಿಕರ ಕೈ ಕುಸುರಿಲ್ಲಿಯೇ ರೆಡಿಯಾಗಿದೆ. ಸಂಸಾರವೆಂಬ ಬಂಡಿ ನೂಕಲು ಸರಕಾರಿ ಕೆಲಸ, ಸ್ವಂತ ಊರು, ಮನೆಯೇ ಇರಬೇಕಾಗಿಲ್ಲ.

ಚಿಕ್ಕದೊಂದು ಗುಡಿಸಲು, ಕೈ ಕಸುಬಿದ್ದರೇ ಸಾಕು ಪ್ರಪಂಚವನ್ನೇ ಮನೆಯನ್ನಾಗಿ ಮಾಡಿ ಕೊಂಡು ಎಲ್ಲಿ ಬೇಕಾದರೂ ದುಡಿಯಬಹುದು, ಬದುಕಬಹುದು ಎಂಬುದಕ್ಕೆ ಇವರು ತಾಜಾ ಉದಾಹರಣೆಯಾಗಿದ್ದಾರೆ. ಅದಕ್ಕಾಗಿ ಸುಮಾರು 1300 ಕಿ.ಮೀ ದೂರದಿಂದ ಬಂದು ಇಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮೂಲತಃ ವಿಶ್ವಕರ್ಮ ಜನಾಂಗಕ್ಕೆ ಸೇರಿದ ಇವರು ಬ್ಯಾಟ್‍ಗಳನ್ನು ತಯಾರಿಸಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹೊಸದುರ್ಗ, ಶಿವಮೊಗ್ಗ ಸೇರಿದಂತೆ ಇತರೆ ಊರುಗಳಿಗೆ ಹೋಲ್‍ಸೇಲ್ ದರದಲ್ಲಿ ಕಳಿಸುತ್ತಾರೆ.

 

ಬೇಸಿಗೆಯಲ್ಲಿ ಹೆಚ್ಚು ಕೆಲಸ :

ಬೇಸಿಗೆಯಲ್ಲಿ ಇವರ ಕಾಯಕಕ್ಕೆ ಹೆಚ್ಚು ಕೆಲಸವಿರುತ್ತದೆ. ಆದ್ದರಿಂದ ಹೆಚ್ಚು ಬೇಡಿಕೆ ಇರುವ ಕ್ರಿಕೆಟ್ ಬ್ಯಾಟ್, ಸಾಮಗ್ರಿ ಗಳನ್ನು ತಯಾರಿಸುತ್ತಿದ್ದಾರೆ. ಗುಜರಾತ್‍ನಿಂದ ಜಾಲರ್ ಎಂಬ ಮರದಿಂದ ಮಾಡಿದ ಬ್ಯಾಟ್‍ಗಳನ್ನು ಇವರು ತರಿಸಿಕೊಳ್ಳುತ್ತಾರೆ. ನಂತರ ಅವುಗಳಿಗೆ ನಾನಾ ಆಕಾರವನ್ನು ಇವರು ಕೊಡುತ್ತಾರೆ. ಪ್ರತಿದಿನ ಬೆಳಗ್ಗೆ 6 ರಿಂದ ಆರಂಭವಾಗುವ ಇವರ ಕೆಲಸ ತಡರಾತ್ರಿವರೆಗೆ ನಡೆಯುತ್ತದೆ.

ದಿನಕ್ಕೆ 50 ಬ್ಯಾಟ್‍ಳನ್ನು ಮಾಡುತ್ತೇವೆ. ಆದರೆ, ಮಾಡಿದ್ದೆಲ್ಲವೂ ಮಾರಾಟವಾಗುವುದಿಲ್ಲ. ಒಂದು ಬ್ಯಾಟ್ ಮಾಡಲು ಮರದ ವೆಚ್ಚ, ಕೂಲಿ ಸೇರಿ 150ರೂ. ತಗಲುತ್ತದೆ. ಅವು ಗಳನ್ನು 200ರಿಂದ 500 ರೂ.ಗಳಿಗೆ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ಏನೆಲ್ಲಾ ಅಂದ್ರೂ ಸಾವಿರ ರೂ. ಸಿಗುತ್ತದೆ ಎನ್ನುತ್ತಾರೆ ರಮೇಶ್.

ವಲಸೆ ಬರಲು ಕಾರಣ: ಗುಜರಾತಲ್ಲಿ ಈ ಜನಾಂಗ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಪ್ರತಿ ಕುಟುಂಬ ತಮ್ಮ ಮೂಲ ಕಸುಬು ಬ್ಯಾಟ್ ತಯಾರಿಕೆಯಲ್ಲಿ ತೊಡಗಿದೆ. ಹೀಗಾಗಿ ಅಲ್ಲಿ ವ್ಯಾಪಾರ ಕಡಿಮೆ. ಈ ಉದ್ದೇಶದಿಂದ ಅಲ್ಲಿಂದ ಅನೇಕ ಕುಟುಂಬಗಳು ರಾಜ್ಯಾದ ನಾನಾ ಮೂಲೆಗಳಿಗೆ ಬಂದಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!