ಸುದ್ದಿವಿಜಯ,ದಾವಣಗೆರೆ: (ವಿಶೇಷ)ಬಾಣಂತಿ ಮತ್ತು ಗರ್ಭಿಣಿ ಕ್ಷೇಮಾಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿಗೆ ತರಲಾಗಿರುವ ಯೋಜನೆ ಪಾಲುದಾರರು ಆಗಿರುವ ಡಾಟಾ ಎಂಟ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ವರ್ಷದ ಬಳಿಕ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದ್ದು, ಪರ್ಸೆಟೇಜ್ ವಾಸನೆ ಬಡಿಯುತ್ತಿದೆ.
ಹೌದು, ಸದ್ಯ ಕೇಂದ್ರ ಸರಕಾರ ಇಡೀ ರಾಜ್ಯಕ್ಕೆ ರೂ.21,81, 45, 600 ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಅನುದಾನಕ್ಕೆ ಅನುಗುಣವಾಗಿ ರಾಜ್ಯದ ಪಾಲಿನ ಅನುದಾನ ರೂ.14,54,30,400 ರೂ. ಸೇರಿದಂತೆ ಒಟ್ಟಾರೆ 36, 35, 76,000 ಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಅದರಂತೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಫ್ಲೆಕ್ಸಿಫಂಡ್ಅನುದಾನದಡಿ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಮತ್ತು ಡಾಟಾ ಎಂಟ್ರಿ ಆಪರೇಟರ್‍ಗಳಿಗೆ ಪ್ರೋತ್ಸಾಹ ಧನ ಪಾವತಿಸಲು ಕೇಂದ್ರ ಸರಕಾರ 36, 35, 76,000 ಗಳನ್ನು ಹೆಚ್ಚುವರಿಯಾಗಿ ಪೂರಕ ಅಂದಾಜು-03ರಲ್ಲಿ ಒದಗಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಿಡುಗಡೆಗೊಳಿಸಿದೆ.
2022-23ನೇ ಸಾಲಿಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಮತ್ತು ಡಾಟಾ ಎಂಟ್ರಿ ಆಪರೇಟರ್‍ಗಳಿಗೆ ಜು.2020ರಿಂದ ಫೆಬ್ರುವರಿ 2023ರವರೆಗೆ ಪ್ರೋತ್ಸಾಹ ಧನ ಪಾವತಿಸಲು ಕೇಂದ್ರ ಸರಕಾರ ಸೂಚಿಸಿದೆ. ಮಹಿಳಾ ಮತ್ತು ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಪಿಎಂಎಸ್ ಮೂಲಕ ಮರುಹಂಚಿಕೆ ಮಾಡಲು ಆದೇಶಿಸಲಾಗಿದೆ.
ಈ ಸೂಚನೆಯಂತೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇತರೆಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ತನ್ನ ಸಿಡಿಪಿಒ ಮೂಲಕ ಮಾಹಿತಿ ತೆಗೆದುಕೊಂಡು ಅಂಗನವಾಡಿಗಳ ಕಾರ್ಯಕರ್ತೆ ಹಾಗೂ ಹೆಲ್ಪರ್‍ಗಳ ಖಾತೆಗೆ ಹಣ ಹಾಕಲು ಸೂಚಿಸಲಾಗಿದೆ. ಇನ್ನೂ ಜಿಲ್ಲೆ ಹಾಗೂ ತಾಲೂಕು ಡಾಟಾ ಎಂಟ್ರಿ ಆಪರೇಟರ್‍ಗಳ ಖಾತೆಗೆ ಖುದ್ದಾಗಿ ಹಣ ಡಿಬಿಟಿ ಆಗಿದೆ. ಆದರೆ ಇವೆಲ್ಲವೂ ಕಾನೂನು ರೀತಿಯೇ ಆಗಿದೆ.
ಆದರೆ ಖಾತೆಗೆ ಹಣ ಬಂದ ಮೇಲೆ ಜಿಲ್ಲಾ ಅಧಿಕಾರಿಗಳು ಪರ್ಸಟೇಂಜ್ ವ್ಯವಹಾರ ಮಾತನಾಡುತ್ತಿದ್ದಾರೆ. ಇನ್ನು ಕೆಲ ಸಿಡಿಪಿಒಗಳು ಅಂಗನವಾಡಿ ಕಾರ್ಯಕರ್ತೆ, ಹೆಲ್ಪರ್ ಖಾತೆಗೆ ಬಂದಿರುವ ಹಣಕ್ಕೆ ಪರ್ಸಟೇಂಜ್ ಕೇಳುತ್ತಿದ್ದಾರೆ. ಒಂದು ವೇಳೆ ಕೊಡದೇ ಹೋದರೆ ಏನಾದರೂ ಕಿರಿಕ್ ಮಾಡಿ ಕೆಲಸದಿಂದ ವಜಾ ಮಾಡುವ ತಂತ್ರ ಉಪಯೋಗಿಸುತ್ತಿದ್ದಾರೆ. ಇದರಿಂದ ಡಾಟಾ ಎಂಟ್ರಿ ಆಪರೇಟರ್‍ಗಳು, ಹಾಗೂ ಕೆಲ ಅಂಗನವಾಡಿ ಕಾರ್ಯಕರ್ತೆಯರು ಹೆದರಿದ್ದಾರೆ. ಈ ಸಮಸ್ಯೆಯನ್ನು ಸ್ವತಃ ಬಿಚ್ಚಿಟ್ಟಿದ್ದಾರೆ.
ನಮಗೆ ಬರೋದೆ ಕಡಿಮೆ ಸಂಬಳ ಜಿಲ್ಲೆ, ತಾಲೂಕಿಗೆ ಒಬ್ಬ ಡಾಟಾ ಎಂಟ್ರಿ ಇರುತ್ತಾರೆ. ಅವರು ಡಿಡಿ ಹೇಳಿದ ಹಾಗೆ ಕೇಳಬೇಕು. ಇಲ್ಲದೇ ಹೋದ್ರೆ ಇನ್ನುಳಿದ ನೆಪ ಹೇಳಿ ಕೆಲಸದಿಂದ ವಜಾಮಾಡುತ್ತಾರೆ. ಅವರಿಗೆ ಹಣ ಕೊಟ್ಟಿದ್ದೇವೆ ಎಂಬುದಕ್ಕೆ ನಮ್ಮಲ್ಲಿ ಯಾವುದೇ ಆಧಾರವಿಲ್ಲ. ಇದು ದಾವಣಗೆರೆ ಮಾತ್ರವಲ್ಲ, ಚಿತ್ರದುರ್ಗ, ಮಂಡ್ಯ, ಬಿಜಾಪುರ ಹೀಗೆ ಹತ್ತಾರು ಹಲವು ಜಿಲ್ಲೆಗಳಲ್ಲಿ ಸಮಸ್ಯೆ ಇದ್ದು, ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ ಡಾಟಾ ಆಪರೇಟರ್‍ಗಳ ಸಮಸ್ಯೆಗೆ ಇತೀಶ್ರೀ ಹಾಡಬೇಕಿದೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಗೆ ಒಬ್ಬರು, ತಾಲೂಕಿಗೆ ಒಬ್ಬರು ಡಾಟಾ ಎಂಟ್ರಿ ಇರುತ್ತಾರೆ. 1 ಅಪ್ಲಿಕೇಶ್‍ನ್ ನ್ನು 4 ಹಂತದಲ್ಲಿ ತುಂಬ ಬೇಕು. ಪ್ರತಿ ಹಂತಕ್ಕೂ 25 ರೂ.ಗಳಂತೆ ನಾಲ್ಕು ಹಂತಕ್ಕೆ 120 ರೂ.ಗಳನ್ನು ಸರಕಾರ ನೀಡುತ್ತದೆ. ಅಂಗನವಾಡಿ ಟೀಚರ್‍ಗೆ 200, ಹೆಲ್ಪರ್ 100ಗಳನ್ನು ಕೊಡಲಾಗುತ್ತದೆ. ಈ ಹಣ 3 ವರ್ಷ ಬಂದಿರಲಿಲ್ಲ. ಹಣ ಬಂದಿಲ್ಲ ಎಂದು ಎಲ್ಲರೂ ಪ್ರತಿಭಟನೆ ಮಾಡಿದ ವೇಳೆ ಹಣ ಬಂದಿದೆ. ಆದರೀಗ ಪರ್ಸೆಟೇಜ್ ವ್ಯವಹಾರ ನಡೆಯುತ್ತಿದ್ದು, ಲೋಕಾಯುಕ್ತ ಈ ಬಗ್ಗೆ ಗಮನಹರಿಸಲಿ.
ಡಿಡಿ, ಶಿಶು ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿದ್ದಾರಾ?:
ಡಾಟಾ ಎಂಟ್ರಿ, ಅಂಗನವಾಡಿ ಕಾರ್ಯಕರ್ತೆ ಖಾತೆಗೆ ಹಣಹಾಕಲು ಡಿಡಿ, ಶಿಶು ಅಭಿವೃದ್ಧಿ ಅಧಿಕಾರಿಗಳು ಮೊದಲು ಒಪ್ಪಂದ ಮಾಡಿಕೊಳ್ಳುತ್ತಾರೆ. ಹಣಕ್ಕೆ ಒಪ್ಪಂದ ಮಾಡಿಕೊಳ್ಳದೇ ಹೋದರೆ ಅಪ್ಲಿಕೇಶನ್ ಸರಿಯಿಲ್ಲಘಿ, ಅದು ಸರಿಯಿಲ್ಲ ಎಂದು ಕಿರಿಕ್ ಮಾಡುತ್ತಾರೆ. ಹಣ ಖಾತೆಗೆ ಬಂದ ನಂತರ ಮಾತನಾಡಿದ ಪರ್ಸೆಟೇಜ್ ಹಣ ಕೊಡಬೇಕಾಗಿದೆ. ಇದು ಕೂಡ ಅಧಿಕಾರಿಗಳ ಮಧ್ಯವರ್ತಿಗಳ ನಡುವೆ ನಡೆಯುತ್ತದೆ. ಇಲ್ಲಿ ಹಣ ತೆಗೆದುಕೊಳ್ಳುವ ವ್ಯಕ್ತಿಯೇ ಬೇರೆ ಇರುತ್ತಾನೆ.
ಎಂಟ್ರಿ ಹೇಗೆ ?:
ಮಾತೃವಂದನ ಯೋಜನೆಯಡಿ ಪ್ರಯೋಜನ ಪಡೆಯುವವರು ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಅನುಮೋದಿತ ಆರೋಗ್ಯ ಕೇಂದ್ರದಲ್ಲಿ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ಡಿಡಿ ಕಚೇರಿ, ತಾಲೂಕು ಕಚೇರಿಯಲ್ಲಿ ಡಾಟಾ ಎಂಟ್ರಿಗಳು ಈ ಕೆಲಸ ಮಾಡುತ್ತಾರೆ.
ಈ ಯೋಜನೆಯು 2017ರ ಜನವರಿ 1 ರಂದು ಜಾರಿಗೆ ಬಂದಿದ್ದು, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಪಡೆಯುವುದಕ್ಕಾಗಿ 5000 ರೂ. ಗಳನ್ನು ಲಾನುಭವಿಗಳ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯು ಮೊದಲನೇ ಬಾರಿಯ ಗರ್ಭಿಣಿಗೆ/ ಬಾಣಂತಿಯರಿಗೆ ಮಾತ್ರ ಅನ್ವಯವಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಸಾರ ಅನುಷ್ಠಾನಗೊಳ್ಳಿಸಲಾಗಿದೆ.
ಗರ್ಭಿಣಿ/ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಒಂದನೇ ಕಂತು ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ (150 ದಿನಗಳೊಳಗಾಗಿ) 1000 ರೂ., ಎರಡನೇ ಕಂತು ಕನಿಷ್ಠ ಒಂದು ಆರೋಗ್ಯ ತಪಾಸಣೆ (ಗರ್ಭಿಣಿಯಾಗಿ 6 ತಿಂಗಳ ನಂತರ) 2000 ರೂ. ಹಾಗೂ ಮೂರನೇ ಕಂತು ಮಗು ಜನನ ನೋಂದಣಿ ಮತ್ತು ಮೊದಲನೇ ಹಂತದ ಚುಚ್ಚುಮದ್ದು ರೂ. 2000 ರೂ.ಗಳ ಸೌಲಭ್ಯ ಒದಗಿಸಲಾಗುತ್ತದೆ.