suddivijaya/kannada news26/04/2023
ಸುದ್ದಿವಿಜಯ, ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಸಹಾಯ ಮತ್ತು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು ದಿನದ 24×7 ಮಾದರಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಸಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧೆಡೆ ಚಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮೆರಾಗಳ ಮೂಲಕ ತೀವ್ರ ನಿಗಾ ವಹಿಸಲಾಗಿದ್ದು, ಅದರಂತೆ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿಗೆ ಸಹಾಯವಾಣಿ ಹಾಗೂ ಟೋಲ್‍ಫ್ರೀ ನಂಬರ್‍ಗಳ ಮೂಲಕ ನಿಯಂತ್ರಿಸಲಾಗುತ್ತಿದೆ.
1950 ಮತ್ತು 18004251342 ಟೋಲ್‍ಫ್ರೀ: ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು ಟೋಲ್‍ಫ್ರೀ ನಂಬರ್‍ಗಳ ಮೂಲಕ ಸಾರ್ವಜನಿಕರಿಂದ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಮಾ.29 ರಿಂದ ಏಪ್ರಿಲ್ 25 ರ ವರೆಗೆ ಒಟ್ಟು 912 ದೂರುಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯ ಮಾಹಿತಿ, ಮತದಾರರ ಹೆಸರು ಬದಲಾವಣೆ, ಚುನಾವಣಾ ಗುರುತಿನ ಚೀಟಿಗಳ ಮಾಹಿತಿಗೆ ಸಂಬಂಧಿಸಿದಂತವುಗಳಾಗಿದ್ದು ಎಲ್ಲಾ ಕರೆಗಳಿಗೆ ಮಾಹಿತಿ ನೀಡಲಾಗಿದೆ.
ಸಿ.ವಿಜಿಲ್ ಹದ್ದಿನ ಕಣ್ಣು: ಸಿ.ವಿಜಿಲ್ ಆಪ್ ಮೂಲಕವು ಚುನಾವಣೆ ಅಕ್ರಮಗಳ ಬಗ್ಗೆ ದೂರು ಸ್ವೀಕರಿಸಲಾಗುತ್ತಿದೆ. ಸಿ.ವಿಜಿಲ್ ಸಿಟಿಜನ್ ಆಪ್ ಡೌನ್‍ಲೋಡ್ ಮಾಡಿಕೊಂಡು ಚುನಾವಣೆ ಅಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಫೋಟೊ ಸಹಿತ ಮಾಹಿತಿ ಹಾಕಿದ 20 ನಿಮಿಷಗಳಲ್ಲಿ ಪರಿಹಾರ ದೊರಕಲಿದೆ. ಸಿ.ವಿಜಿಲ್ ಅಪ್ ಮೂಲಕ ಸಾರ್ವಜನಿಕರು ನೇರವಾಗಿ ಪೋಟೋ, ವೀಡಿಯೋ ಮತ್ತು ಆಡಿಯೋ ಸೆರೆ ಹಿಡಿದು ಕಳುಹಿಸಿದ ತಕ್ಷಣ ನಿಯಂತ್ರಣ ಕೊಠಡಿಗೆ ತಲುಪಲಿದ್ದು ಎಫ್.ಎಸ್.ಟಿ. ತಂಡವು 10 ನಿಮಿಷದೊಳಗಾಗಿ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳಲಿದ್ದು ಇದು ಸಿ.ವಿಜಿಲ್‍ನ ವಿಶೇಷತೆಯಾಗಿದೆ.
ಜಿಲ್ಲೆಯಲ್ಲಿ ಸಿವಿಸಿಲ್ ಆಪ್ ಪರಿಶೀಲನೆಗೂ ಪ್ರತ್ಯೇಕ ತಂಡ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೂ 72 ದೂರುಗಳು ಸ್ವೀಕರಿಸಲಾಗಿದ್ದು ಇದರಲ್ಲಿ 53 ಪ್ರಕರಣಗಳಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಮಾಡಿದ 19 ಪ್ರಕರಣಗಳನ್ನು ಕೈಬಿಡಲಾಗಿದೆ. ಒಂದು ಪ್ರಕರಣದಲ್ಲಿ ಕಾಲ್ ಸೆಂಟರ್ ಮಾದರಿಯಲ್ಲಿ ನಡೆಸುತ್ತಿದ್ದ ಕೇಂದ್ರದ ವೀಡಿಯೋವನ್ನು ಸಿ.ವಿಜಿಲ್‍ಗೆ ಬಂದ ದೂರಿನ ಮೇರೆಗೆ ದಾಳಿಮಾಡಿ 59 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಉಳಿದಂತೆ 12 ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಚಿನ್ಹೆ, ಮುಖಂಡರ ಭಿತ್ತಿಪತ್ರಗಳಿಗೆ ಸಂಬಂಧಿಸಿದ್ದಾಗಿದೆ. ಅವುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಪರಿಣಾಮಕಾರಿಯಾಗಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಿ.ವಿಜಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಇದರ ಮೂಲಕ ನೇರ ಸೆರೆ ಹಿಡಿದು ಅಪ್‍ಲೋಡ್ ಮಾಡಿದಲ್ಲಿ ಪಾರದರ್ಶಕ ಚುನಾವಣೆಗೆ ಸಹಭಾಗಿತ್ವ ಸಿಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದ್ದಾರೆ