ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ಯೂನಿಯನ್ ಪಾತ್ರ ಪ್ರಮುಖ: ಅಧ್ಯಕ್ಷ ಸಿರಿಗೆರೆ ರಾಜಣ್ಣ

Suddivijaya
Suddivijaya September 21, 2023
Updated 2023/09/21 at 12:59 AM

ಸುದ್ದಿವಿಜಯ,ದಾವಣಗೆರೆ: ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.

ಬುಧವಾರ ನಗರದ ಸದ್ಯೋಜಾತ ಹಿರೇಮಠದಲ್ಲಿ ನಡೆದ ಒಕ್ಕೂಟದ 2022-23 ನೇ ಸಾಲಿನ 20 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಯೂನಿಯನ್ ಸ್ಥಾಪನೆಗೊಂಡ ಈ 19 ವರ್ಷಗಳಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಾಕಷ್ಟು ಶ್ರಮಿಸಿದೆ.

ಜಿಲ್ಲೆಯಲ್ಲಿ ಸುಮಾರು 1252 ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಚಳುವಳಿಗೆ ಅಗತ್ಯವಿರುವ ಶಿಕ್ಷಣ, ತರಬೇತಿ ಮತ್ತು ಪ್ರಚಾರ ನೀಡುವ ನೆಲೆಯಲ್ಲಿ ಮಾತೃಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿ ಶ್ರಮವಹಿಸಿ ವರದಿ ಸಾಲಿನಲ್ಲಿ ಸಹಕಾರ ತರಭೇತಿಗಾಗಿ ಸಹಕಾರ ಭವನ ನಿರ್ಮಾಣ ಮಾಡಲು 66*57 ಅಳತೆಯ ನಿವೇಶನವನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದೆ.

ಈ ನಿವೇಶನ ಶಿಕ್ಷಣ ಮತ್ತು ತರಭೇತಿ ಸಂಸ್ಥೆಗೆ ಸಾಕಾಗುವುದಿಲ್ಲ ಎನ್ನುವುದನ್ನು ಮನಗಂಡು ಕನಿಷ್ಟ 1 ಎಕರೆ ಜಾಗ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಯೂನಿಯನ್ ಹಿರಿಯ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ.

ಭವಿಷ್ಯದಲ್ಲಿ ಸಹಕಾರ ಸಂಘಗಳ ಮೂಲಕವೇ ಎಲ್ಲ ಅಗತ್ಯ ವಸ್ತುಗಳ ಮಾರಾಟ ಮಾಡಲು ನಿರ್ಧರಿಸಿದೆ.

ಈ ಮೂಲಕ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಬಲಗೊಳಿಸುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ ಎಂದರು.

ಸಭೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಬೇತೂರು ರಾಜಣ್ಣ, ನಿರ್ದೇಶಕರಾದ ಎಸ್.ಬಿ.ಶಿವಕುಮಾರ್, ಡಿ.ಎಂ.ಮುರುಗೇಂದ್ರಯ್ಯ,ಆರ್.ಜಿ.ಶ್ರೀನಿವಾಸ ಮೂರ್ತಿ, ಕೆ.ಜಿ.ಸುರೇಶ್, ಎಸ್.ಜಿ.ಪರಮೇಶ್ವರಪ್ಪ, ಅನ್ನಪೂರ್ಣ, ಎಂ.ವಿ.ರಾಜ್,ಎಎನ್.ಸ್ವಾಮಿ, ಸಿಬ್ಬಂದಿಗಳಾದ ಮಂಗಳಗೌಡ ದಾನಪ್ಪ ಗೌಡ, ಕೆ.ಎಚ್.ಸಂತೋಷ್ ಕುಮಾರ್, ಕೆ.ಎಂ.ಜಗದೀಶ್,ವಿ.ರಂಗನಾಥ್ ಮತ್ತು ಆರ್.ಸ್ವಾಮಿ ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!