ಸುದ್ದಿವಿಜಯ,ದಾವಣಗೆರೆ: ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಮತ್ತು ಪುತ್ರರಾದ ಟಿ.ಜಿ.ಅರವಿಂದಕುಮಾರ್, ಟಿ.ಜಿ.ಪವನ್‍ಕುಮಾರ್ ಮತ್ತು ಡಾ.ಟಿ.ಜಿ.ರವಿಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೇಶ್ ಹನಗವಾಡಿ ಆದೇಶದ ಮೇರೆ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಟೇಲ್ ಉಚ್ಛಾಟನೆ ಮಾಡಿರುವುದಕ್ಕೆ ಡಾ.ಟಿ.ಜಿ.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಮತ್ತು ನನ್ನ ತಂದೆ ಸಹೋದರರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ತಿಳಿದು ಬೇಸರವಾಯಿತು.
ಯಾವುದೇ ನೋಟಿಸ್ ನೀಡದೆ ಸತ್ಯಾಸತ್ಯತೆ ಪರಿಶೀಲಿಸದೇ ಉಚ್ಛಾಟನೆ ಮಾಡಿರುವುದು ಅಪರಾದ.35 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಏಕಾ ಏಕಿ ಉಚ್ಛಾಟನೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.
ನನ್ನ ತಂದೆ 65 ವರ್ಷಗಳಿಂದ ಜನ ಸಂಘದಲ್ಲಿ ದುಡಿದ್ದಾರೆ. ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪಕ್ಷ ನಮಗೆ ತಾಯಿ ಇದ್ದಂತೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಈ ರೀತಿ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಆದರೆ ಪಕ್ಷಕ್ಕೆ ಎಂದೂ ದ್ರೋಹ ಮಾಡಿಲ್ಲ. ನಾವು ಯಾವತ್ತು ನಿಷ್ಠಾವಂತ ಕಾರ್ಯಕರ್ತರು. ಪಕ್ಷದಿಂದ ಹೊರ ಹೋಗಲು ಸಾಧ್ಯವಿಲ್ಲ. ನಮ್ಮ ಜೊತೆ ಕಾರ್ಯಕರ್ತರಿದ್ದಾರೆ ಎಂದು ರವಿಕುಮಾರ್ ಹೇಳಿದರು.ನಾನು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದೇನೆ. ಆದರೆ ಕೆಲವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಹಿಸಿದ್ದೆ ಎಂದು ಪಿತೂರಿ ಮಾಡಿದ್ದಾರೆ. ಅವರು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದೇನೆ ಎಂದು ಆಧಾರ ನೀಡಲಿ. ನಾನು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ದಾಖಲೆಗಳನ್ನು ತೋರಿಸುತ್ತೇನೆ.
ರಾಜಕೀಯದಲ್ಲಿ ವಿದ್ಯಾವಂತರು, ಯುವಕರು, ಸಮಾಜ ಸೇವೆಗೆ ಮುಂದೆ ಬಂದರೆ ಅವರ ಬುಡ ಅಲ್ಲಾಡುತ್ತೆ ಎಂದು ಗೊತ್ತಾಗಿದೆ. ನಾನು ಎಂಬಿಬಿಎಸ್ ಮಾಡುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪರವಾಗಿಯೇ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೇನೆ.
ಈಗಲೂ ಅಷ್ಟೇ ಪ್ರತಿಯೊಬ್ಬ ಮನೆ ಮನೆಗೆ ಹೋಗಿ ಅನ್ಯಾಯದ ಬಗ್ಗೆ ಹೇಳುತ್ತೇನೆ. ತಪ್ಪಾಗಿದ್ದರೆ ಶಿಕ್ಷೆ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಆದರೆ ನಾವು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಮ್ಮನ್ನು ಉಚ್ಛಾಟಿಸಿರುವುದು ರಾಜ್ಯಮಟ್ಟದ ನಾಯಕರಿಗೆ ಗೊತ್ತಿಲ್ಲ. ಅವರ ಗಮನಕ್ಕೆ ಬಾರದೇ ನಮ್ಮನ್ನು ಉಚ್ಚಾಟಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ನಾಯಕರ ಗಮನಕ್ಕೆ ತರುತ್ತೇವೆ ಎಂದರು.