ದಾವಣಗೆರೆ:ಮತದಾರನ ಗಲ್ಲಿಗೆ ನುಗ್ಗುತ್ತಿರುವ ಗಣೇಶ!

Suddivijaya
Suddivijaya May 7, 2023
Updated 2023/05/07 at 3:09 PM

ಸುದ್ದಿವಿಜಯ, ದಾವಣಗೆರೆ:ಸಾಮಾನ್ಯವಾಗಿ ಸಂಕಷ್ಟಿ ಬಂತೆಂದರೆ ಗಣಪನನ್ನು ನೆನೆಸಿಕೊಂಡು ಉಪವಾಸ ಮಾಡಿ ಚಂದ್ರನನ್ನು ನೋಡಿ ಸಂಕಷ್ಟಹರನನ್ನು ನೆನೆದು ಇಷ್ಟಾರ್ಥನೆರವೆರೇಸು ವಿಘ್ನನಿವಾರಕ ಎಂದು ಹಲವರು ಬೇಡಿಕೊಳ್ಳುತ್ತಾರೆ..ಆದರೀಗ ವಿಘ್ನನಿವಾರಕ ಚುನಾವಣಾ ಕಣದ ಒಂದು ಭಾಗವಾಗಿದ್ದಾನೆ.

ಚುನಾವಣೆ ಬಂತೆಂದರೆ ಸಾಕು ಒಂದು ಕಾಲದಲ್ಲಿ ಎಣ್ಣೆ, ಹಣ ಹಂಚುತ್ತಿದ್ದವರು ಈಗ ಸೀರೆ, ಕುಕ್ಕರ್ ಹಂಚುತ್ತಿರುವ ಆರೋಪವಿದೆ. ಇದೇನೂ ಹೊಸ ಸುದ್ದಿನಾ ಅಂತ ನೀವು ಕೇಳಬಹುದು.

ಇದು ಹಳೆ ಸುದ್ದಿ ಕೂಡ ಹೌದು..ಹೊಸದೇನೆಪ್ಪ ಎಂದು ನೀವು ಕೇಳಬಹುದು..ಅದಕ್ಕೂ ಉತ್ತರವಿದೆ.ಹಿಂದೂ ಸಂಪ್ರದಾಯದಲ್ಲಿ ಗಣಪತಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಪಕ್ಷವೊಂದರ ಅಭ್ಯರ್ಥಿ ಜನರಿಗೆ ಬೆಳ್ಳಿ ಗಣಪತಿ ನೀಡಲು ಮುಂದಾಗಿದೆ.

ದಾವಣಗೆರೆ ದಕ್ಷಿಣದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಸಮುದಾಯವೇ ಹೆಚ್ಚಿದ್ದು, ಹಿಂದೂಗಳು ಕೂಡ ಇವರ ಸರಿಸಮಾನವಾಗಿ ಇದ್ದಾರೆ.

ಬಿಜೆಪಿಯಿಂದ ಮಾಜಿಮೇಯರ್ ಅಜೇಯ್‌ಕುಮಾರ್ ಸ್ಫರ್ಧಿಸಿದರೆ, ಇತ್ತ ಮಾಜಿ ಸಚಿವ 92 ವರ್ಷದ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾಖಾನ್ ಇರುವುದರಿಂದ ಬಿಜೆಪಿಗೆ ಫ್ಲಸ್ ಆಗಿದೆ.

ದಾವಣಗೆರೆ ದಕ್ಷಿಣದಲ್ಲಿ ಅಂದಾಜು ಎರಡು ಲಕ್ಷದ ಹತ್ತು ಸಾವಿರ ಮತದಾರರು ಇದ್ದು, ಮುಸ್ಲಿಂ ಮತದಾರರು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳಾಗಿದ್ದು, ಬಿಜೆಪಿಯತ್ತ ವಾಲುವುದಿಲ್ಲ.

ಇನ್ನೂ ಜೆಡಿಎಸ್‌ಗೆ ಮುಸ್ಲಿಂಮತಗಳು ಬೀಳಿಸುವ ಕೆಲಸವನ್ನು ಹಿಂಬಾಗಿಲಿನಿಂದ ಬಿಜೆಪಿ ಕೈಗೊಂಡಿದೆ ಎಂಬ ಆರೋಪವು ಇದೆ.

ಮುಸ್ಲಿಂ ಮತಗಳು ವಿಭಾಗವಾದರೆ, ಬಿಜೆಪಿಗೆ ಫ್ಲಸ್ ಆಗುವ ಕಾರಣ, ಹಿಂದೂ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಕಮಲ ಪಾಳ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಎರಡು ಪಕ್ಷಗಳು ಮತದಾರರನ್ನು ಸೆಳೆಯಲು ಮುಂದಾಗಿವೆ.

ಈ ಹಿಂದೆ ಕಾಂಗ್ರೆಸ್ ಕುಕ್ಕರ್ ಹಂಚಿದೆ, ಈಗ ಬಿಜೆಪಿ ಗಣೇಶ್ ವಿಗ್ರಹ ಹಂಚುತ್ತಿದೆ ಎಂಬ ಮಾತನ್ನು ಪ್ರಜ್ಞಾವಂತರು ಹೇಳುತ್ತಿದ್ದಾರೆ.

ಅದಕ್ಕೆ ತಾಜಾ ಉದಾಹರಣೆಯಂತೆ ಪ್ರಕರಣವೊಂದು ನಡೆದಿದೆ. ನಗರದ ಭಾರತ್ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ಬೆಳ್ಳಿ ಗಣೇಶನ ಮೂರ್ತಿ ನೀಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಬೆಳಗಿನ ಜಾವ ಐದು ಗಂಟೆ ವೇಳೆಗೆ ಭಾರತ್ ಕಾಲೋನಿಯಲ್ಲಿ ಬೆಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಭಾವಚಿತ್ರದ ಬ್ಯಾಲೆಟ್ ಪೇಪರ್ ಜೊತೆ ಬೆಳ್ಳಿ ಗಣೇಶನ ಮೂರ್ತಿ ಹಂಚಲಾಗಿದೆ.

ಸುದ್ದಿ ತಿಳಿದು ಕಾಂಗ್ರೆಸ್ ಕಾರ್ಯಕರ್ತರು ಹೋಗುವ ವೇಳೆಗೆ ಬಿಜೆಪಿ ಕಾರ್ಯಕರ್ತರು ಓಡಿ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಷ್ಟಕ್ಕೆ ಸುಮ್ಮನಾಗಾದ ಕಾಂಗ್ರೆಸ್ ಬೆಳ್ಳಿ ಗಣಪತಿಯನ್ನು ಬಂಗಾರದ ಅಂಗಡಿಗೆ ಹೋಗಿ ಚೆಕ್ ಮಾಡಿಸಿದೆ. ಇದರಲ್ಲಿ ಶೇಕಡಾವಾರು ಬೆಳ್ಳಿ ಇಲ್ಲ, ಮತದಾರರು ಆಮಿಷಕ್ಕೆ ಒಳಗಾಗಬೇಡಿ ಎಂದು ವಿಡಿಯೋ ಮೂಲಕ ಹೇಳಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ದೇವರ ಮನೆಯಲ್ಲಿ ಇರಬೇಕಾಗಿದ್ದ ಗಣಪ ಗಲ್ಲಿಗಲ್ಲಿ ತಿರುಗುತ್ತಿದ್ದು, ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಣ ರಂಗೇರುತ್ತಿದ್ದು, ಇನ್ನೇರಡು ದಿನದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಇನ್ನೇನೂ ಕೊಡುತ್ತಾರೆಂದು ಕಾದು ನೋಡಬೇಕಿದೆ‌.

Share this Article
Leave a comment

Leave a Reply

Your email address will not be published. Required fields are marked *

error: Content is protected !!