ಸುದ್ದಿವಿಜಯ, ಹಿರೇಕೋಗಲೂರು: ದಾವಣಗೆರೆ ಐಸಿಎಆರ್ ತರಳಬಾಳ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಚನ್ನಗಿರಿ ಇವರ ಸಯೋಗದೊಂದಿಗೆ ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ವ್ಯಾಪ್ತಿಯ ಬೆಳ್ಳಿಗನೋಡು ಗ್ರಾಮದಲ್ಲಿ ‘ಪ್ರಧಾನ ರೈತ ತರಬೇತಿ ಕಾರ್ಯಕ್ರಮ’ವನ್ನು ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯ ಈಶ್ವರಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಹಾಗೂ ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್ ಮಾತನಾಡಿ, ಕೃಷಿ ವಿಜ್ಞಾನಿಗಳು ಹೇಳಿದ ಸಲಹೆಗಳನ್ನು ರೈತರು ಸರಿಯಾದ ಸಮಯಕ್ಕೆ ಪಾಲಿಸಿ ಇಳುವರಿನ್ನು ಹೆಚ್ಚಿಸಿಕೊಳ್ಳಿ. ಎಫ್‌ಪಿಓಗಳ ಮೂಲಕ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮುಂದಾರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ರೈತ ಉತ್ಪಾದಕ ಕಂಪನಿಗಳು (ಎಫ್‌ಪಿಒ) ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲಾ ಸೌಲಭ್ಯಗಳು ಸರಕಾರ ನಿಗದಿಪಡಿಸಿದ ದರಲ್ಲೇ ಸಿಗುತ್ತಿದ್ದು ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಶೇರುದಾರರು ಸಂಪನ್ಮೂಲ ಸಂಸ್ಥೆಯಾದ ಕೆವಿಕೆ ಮಾರ್ಗದರ್ಶನ ಪಡೆದರೆ ಸ್ವಾವಲಂಬನೆಯತ್ತ ಹೆಜ್ಜೆ ಹಾಕಬಹುದು ಎಂದರು.
ಕೇಂದ್ರ ತೋಟಗಾರಿಕೆ ತಜ್ಞರಾದ ಎಂ.ಜಿ. ಬಸವನಗೌಡಿ, ರೈತ ಸಂಕುಲದ ಉದ್ದಾರಕ್ಕೆ ಎಫ್‌ಪಿಗಳು ಪೂರಕವಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾದ ಅಡಕೆ ಬೆಳೆಗೆ ತಗಲುವ ರೋಗ ಬಾಧೆಗೆ ಅಗತ್ಯವಿರುವ ಔಷಧಗಳನ್ನು ಹೇಗೆ ಸಿಂಪಡಿಸಬೇಕು. ಎಷ್ಟು ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು, ಯಾವಗ ಗೊಬ್ಬರ ಮತ್ತು ಔಷಧ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ರೈತರಿಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿದರು.
ಸಸ್ಯ ಸಂರಕ್ಷಣೆ ತಜ್ಞ ಡಾ.ಅವಿನಾಶ್ ಮೆಕ್ಕೆಜೋಳದಲ್ಲಿ ಕಾಡುವ ಸೈನಿಕ ಹುಳುವಿನ ಸಮಗ್ರ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದರು.
ಕೃಷಿ ಅಧಿಕಾರಿ ಮೆಹತಾಬ್ ಅಲಿ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ಒದಗಿಸಿದರು.
ಹಿರೇಕೋಗಲೂರು ಎಫ್‌ಪಿಒ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರೇಕೋಗಲೂರು ತರಳಬಾಳು ಅಮೃತ ರೈತಾ ಉತ್ಪಾದಕ ಕಂಪನಿ ಬೆಳವಣಿಗೆಗೆ ಸಂಪನ್ಮೂಲ ಸಂಸ್ಥೆಯಾದ ಐಸಿಎಆರ್ ತಳಬಾಳು ಕೃಷಿ ವಿಜ್ಞಾನ ಕೇಂದ್ರ ಸಹಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ಕಂಪನಿ ಎಲ್ಲಾ ನಿರ್ದೇಶಕರೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತ ಕೆಲಸ ಮಾಡುತ್ತೇವೆ. ವಿಜ್ಞಾನಿಗಳ ನಿರ್ದೇಶನ ಮತ್ತು ಸಲಹೆಗಳನ್ನು ರೈತರು ಪಡೆದುಕೊಂಡರೆ ಮಾತ್ರ ಅನ್ನದಾತ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪವನ್ ಪಾಟೀಲ, ವಿನಯ್ ಕುಮಾರ್, ಭರತರಾಜ್, ರವಿ ಕುಮಾರ್ ಹಾಗೂ ಕಂಪನಿ ಇತರ ನಿರ್ದೇಶಕರು, ಪ್ರಗತಿಪರ ರೈತರು ಭಾಗವಹಿಸಿದ್ದರು.