ಸುದ್ದಿವಿಜಯ, ದಾವಣಗೆರೆ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ದಾವಣಗೆರೆಯಿಂದ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದೆ.
ಈ ರೈಲು ಯಶವಂತಪುರ ಮತ್ತು ಬೆಳಗಾವಿ ನಿಲ್ದಾಣಗಳ ನಡುವೆ ಸಂಚಾರ ಮಾಡಲಿದೆ. ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಯಶವಂತಪುರ- ಬೆಳಗಾವಿ ಎಕ್ಸೆಪ್ರೆಸ್ ರೈಲು ಸೆ. 15ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮೂಲಕ ಸೆ.16ರಂದು ಬೆಳಿಗ್ಗೆ 6ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.
ಸೆ. 16ರಂದು ಸಂಜೆ 6.30ಕ್ಕೆ ಬೆಳಗಾವಿಯಿಂದ ಈ ರೈಲು ವಾಪಸ್ ಹೊರಡಲಿದ್ದು, ಸೆ.17ರಂದು ಬೆಳಿಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಸೆ.17ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಮತ್ತೆ ಹೊರಡಲಿದ್ದು, ಸೆ.18ರಂದು ಬೆಳಿಗ್ಗೆ 6ಕ್ಕೆ ಬೆಳಗಾವಿ ನಿಲ್ದಾಣಕ್ಕೆ ತಲುಪಲಿದೆ.
ಅಂದು ಸಂಜೆ 6.30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 5.25ಕ್ಕೆ ಯಶವಂತಪುರಕ್ಕೆ ಬರಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ನೀಡಿದೆ.