ಸುದ್ದಿವಿಜಯ ಜಗಳೂರು: ತಾಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗಾಯಿತ್ರಿಬಾಯಿ ಲಾಟರಿ ಮೂಲಕ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎ. ಬಸವನಗೌಡ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು ೧೬ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿತ್ತು.
ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೆದಗಿನಕೆರೆ ಎಂ.ವಿ ಅರ್ಜುನ್ ಹಾಗೂ ಗಾಯಿತ್ರಿಬಾಯಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು, ಎರಡು ನಾಮಪತ್ರಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ ಡಾ. ಲಿಂಗರಾಜ್ ಮತದಾನ ಮಾಡಿಸಿದರು.
ಇಬ್ಬರು ತಲಾ ೮ ಮತಗಳನ್ನು ಪಡೆದ ಡ್ರಾ ಗೊಂಡಿತು. ಕೊನೆಗೆ ಚುನಾವಣಾಧಿಕಾರಿ ಎರಡು ನಾಮಪತ್ರಗಳನ್ನು ಡಬ್ಬಿಯಲ್ಲಿ ಹಾಕಿ ಲಾಟರಿ ಮಾಡಿದರು. ಚೀಟಿ ಎತ್ತಿದಾಗ ಗಾಯಿತ್ರಿಬಾಯಿ ಹೆಸರು ಬಂದಿತು.
ಚುನಾವಣೆಯಲ್ಲಿ ಇಬ್ಬರು ಸಮಬಲ ಮತ ಪಡೆದು ಡ್ರಾಗೊಂಡರೆ ಲಾಟರಿ ಮೂಲಕ ಆಯ್ಕೆ ಮಾಡುವುದು ಸಾಮಾನ್ಯ, ಲಾಟರಿ ಎತ್ತುವಾಗ ಮಕ್ಕಳಿಂದ ಅಥವಾ ಇತರೆಯವರಿಂದ ಚೀಟಿ ಮೇಲೆತ್ತಿಸಬೇಕು. ಆದರೆ ಚುನಾವಣಾಧಿಕಾರಿಯೇ ಲಾಟರಿ ಚೀಟಿ ಎತ್ತುವುದು ಎಷ್ಟು ಸರಿ? ಎಂದು ಪಶ್ನಿಸಿದ ಪರಾಭವಗೊಂಡ ಅಭ್ಯರ್ಥಿ ಎಂ.ವಿ ಅರ್ಜುನ್ ಈ ಆಯ್ಕೆ ಸರಿಯಾಗಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು.
ಅಧ್ಯಕ್ಷರ ಆಯ್ಕೆಯ ವಿರುದ್ದ ಸೋತ ಅಭ್ಯರ್ಥಿ ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಚುನಾವಣೆ ಅಧಿಕಾರಿ ಗೆದ್ದ ಅಭ್ಯರ್ಥಿಗೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರು. ಇದರಿಂದ ಅಸಮಾಧಾನಗೊಂಡ ಗೆದ್ದ ಅಭ್ಯರ್ಥಿಯ ಬೆಂಬಲಿಗರು ಪಂಚಾಯಿತಿಯ ಮುಂದೆ ಪ್ರತಿಭಟನೆಗೆ ಮುಂದಾದರು,.
ಕೊನೆಗೆ ಸರ್ವ ಸದಸ್ಯರನ್ನು ಕರೆದು ಸಭೆ ನಡೆಸಿ ಗಾಯಿತ್ರಿಬಾಯಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆಂದು ಚುಣಾವಣಾಧಿಕಾರಿ ಡಾ. ಲಿಂಗರಾಜ್ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಿದರು. ಚುನಾವಣೆ ಹಿನ್ನೆಲೆ ಸಿಪಿಐ ಮಂಜುನಾಥ್ ಪಂಡಿತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನ್ಯಾಯಾಲಯದ ಮೊರೆ ಹೋಗಲು ಸಿದ್ದತೆ:
ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮೋಸ ನಡೆದಿದೆ, ಚುನಾವಣಾಧಿಕಾರಿಗಳು ಎರಡು ಚೀಟಿಗಳಿಗೆ ರಬ್ಬರ್ ಹಾಕಬಾರದಿತ್ತು. ಅಲ್ಲದೇ ಡ್ರಾ ಚೀಟಿಗಳನ್ನು ತಾವೇ ಎತ್ತಿ ಲೋಪವೆಸಗಿದ್ದಾರೆ. ಹಾಗಾಗಿ ನಮಗೆ ಅನ್ಯಾಯವಾಗಿದ್ದು, ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು. ಅಧ್ಯಕ್ಷರ ಆಯ್ಕೆಯ ವಿರುದ್ದ ತಡೆಯಾಜ್ಞೆ ನೀಡಲು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಪರಾಜಿತ ಅಭ್ಯರ್ಥಿ ಎಂ.ವಿ ಅರ್ಜುನ್ ಹೇಳಿದರು.
‘ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ ೮ ಮತಗಳನ್ನು ಪಡೆದಿದ್ದರಿಂದ ಲಾಟರಿಯಿಂದ ಆಯ್ಕೆ ಮಾಡಲಾಯಿತು, ಆಗ ಗಾಯಿತ್ರಿಬಾಯಿ ಅವರ ಚೀಟಿ ಕೈಗೆ ಬಂದಿದ್ದರಿAದ ಅವರ ಆಯ್ಕೆಯನ್ನು ಘೋಷಣೆ ಮಾಡಲಾಗಿದೆ, ಸೋತ ಅಭ್ಯರ್ಥಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ, ಹಾಗೇನಾದರೂ ಅನುಮಾನವಿದ್ದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲೀ”
-ಡಾ.ಲಿಂಗರಾಜ್, ಚುನಾವಣಾಧಿಕಾರಿ.