ಸುದ್ದಿವಿಜಯ, ಜಗಳೂರು: ಬಸವಣ್ಣನ ಆದರ್ಶ ಪಾಲನೆಯಲ್ಲಿ ಕಾನಮಡುಗು ದಾಸೋಹಿ ಮಠ ನಡೆಯುತ್ತಿರುವುದು ಶ್ಲಾಘನೀಯ ಎಂದು ಸಂಡೂರು ಮಠದ ಶ್ರೀ ಮು,ನಿ,ಪ ಪ್ರಭು ಸ್ವಾಮೀ ಅಭಿಪ್ರಾಯಪಟ್ಟರು.
ತಾಲೂಕಿನ ಗಡಿ ಭಾಗದ ಕಾನಮಡುಗು ದಾಸೋಹಿ ಮಠದ ಆವರಣದಲ್ಲಿ ಶುಕ್ರವಾರ ಮಾತಾ ಶ್ರೀಮತಿ ಪಾರ್ವತಮ್ಮ ನಾಲ್ವಡಿ ಶರಣಾರ್ಯರು ಇವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಡಾ. ಮೃತ್ಯುಂಜಯರು ಮಾಲೆ ಅವರ ಸಂಕೀರ್ಣ ಬಳ್ಳಾರಿ ಕೃತಿ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಅಕ್ಷರ ಹಾಗೂ ಅನ್ನದಾಸೋಹದ ಮೂಲಕ ಮಠ ಸಾವಿರಾರು ಮಕ್ಕಳ ಬದುಕು ರೂಪಿಸಿದೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತನ್ನದೇಯಾದ ಕೊಡುಗೆ ನೀಡಿ ತನ್ನ ಹಿರಿಮೆ ಮೆರೆದಿದೆ, ದೇಶ ಸೇವೆಯೇ ಈಶ ಸೇವೆ ಎಂಬ ಮಾತಿನಂತೆ ಕಷ್ಟದ ದಿನಗಳಲ್ಲೂ ಅನ್ನದಾಸೋಹ ನಿಲ್ಲಿಸದೇ ಭಕ್ತರ ಸಂಕಷ್ಟವನ್ನು ನೀಗಿಸಿದೆ, ಇಂತಹ ಮಠಗಳು ಮತ್ತಷ್ಟು ಬೆಳೆದು ದೇಶದ ಲಕ್ಷಾಂತರ ಮಕ್ಕಳಿಗೆ ದಾರಿ ದೀಪವಾಗಬೇಕಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಿ.ವಿ ವಸಂತ್‌ಕುಮಾರ್ ಮಾತನಾಡಿ, ಧರ್ಮ ಯಾವುದೇ ಹಿಂಸೆಯನ್ನು ಪ್ರತಿಪಾದಿಸುವುದಲ್ಲ, ಸರ್ವಹಿತ ಕಾಯುವುದೇ ಮೂಲ ಉದ್ದೇಶವಾಗಿರುತ್ತದೆ, ಧರ್ಮ ಕೇವಲ ಮತ,ಪಂಥವಲ್ಲಾ, ಅದೊಂದು ಸಾತ್ವಿಕ ಸೇವಮನೋಭಾವವಾಗಿರಬೇಕು ಎಂದು ಸಲಹೆ ನೀಡಿದರು.
ಮನೆ ಮತ್ತು ಮಠ ಎಂಬ ಭಾವನೆಯನ್ನ ಒಂದು ಗೂಡಿಸುವಲ್ಲಿ ದಾಸೋಹಿ ಮಠ ಶ್ರಮಿಸುತ್ತ ಬಂದಿದೆ ಅವರ ಪ್ರಕಾಶನದಲ್ಲಿ ಮೂಡಿ ಬಂದ ಸಂಕೀರ್ಣ ಬಳ್ಳಾರಿ ಎಂಬ ಕೃತಿ ಬಳ್ಳಾರಿಯ ಸಾಹಿತ್ಯ ,ಶಿಕ್ಷಣ, ಸಂಸ್ಕಾರದ ರಸಮಾಲೆಯನ್ನ ಬಿತ್ತರಿಸಿದೆ ಎಂದು ಬಣ್ಣಿಸಿದರು.
ಹಂಪಿ ವಿ.ವಿ.ಕನ್ನಡ ವಿಭಾಗ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಕನ್ನಡ ನಾಡಿನಲ್ಲಿ ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ರಾಯಬಾರಿಯಾಗಿ ಕೊಡುಗೆ ನೀಡಿದ ಬಳ್ಳಾರಿ ಜಿಲ್ಲೆಯನ್ನು ಪರಿಚಯಿಸಬೇಕಿದೆ, ಅಖಂಡ ಬಳ್ಳಾರಿಯಲ್ಲಿ ನಾಡಿಗಾಗಿ ಕೊಟ್ಟಂತಹ ಮಹಾನ್ ಸಾಧಕರ ಬಗ್ಗೆ ಎಳೆ ಎಳೆಯಾಗಿ ಬಿತ್ತರಿಸಲಾಗಿದೆ.
ರಾಜಕೀಯವಾಗಿ ಆಡಳಿತಾತ್ಮಕವಾಗಿ ಬಳ್ಳಾರಿ ಹಿಬ್ಬಾಗವಾದರು ಸಹ ಕೃತಿಯ ಲೇಖಕರು ಅಖಂಡ ಬಳ್ಳಾರಿಯನ್ನ ಬೆಸೆಯುವ ಮೂಲಕ ರುಮಾಲೆಯವರು ಉತ್ತಮಕೊಡುಗೆ ನೀಡಿದ್ದಾರೆ ಎಂದರು.
ಕಾನಮಡುಗು ಐಮಡಿ ಶರಣಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಟ್ಟೂರು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿದ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಅಡವಿಹಳ್ಳಿ ಹಾಲ ಸಿದ್ದೇಶ್ವರ ಸ್ವಾಮಿ, ಕೂಡ್ಲಿಗಿ ಪ್ರಶಾಂತಸಾಗರ ಸ್ವಾಮಿ, ಹಾಲಸಿದ್ದೇಶ್ವರ ಸ್ವಾವಿ ಲೇಖಕರು ಮೃತ್ಯುಂಜಯ ರುಮಾಲೆ, ಶಾಂತಮೂರ್ತಿ ಗವಾಯಿಗಳು, ಜಗಳೂರು ಹಿರಿಯ ಪತ್ರಕರ್ತರು ಡಿ.ಶ್ರೀನಿವಾಸ್ , ಹರಪನಹಳ್ಳಿ ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ, ಸರಸ್ವತಿ ಬಸಪ್ಪ ಸೇರಿದಂತೆ ಮತ್ತಿತರಿದ್ದರು.