ಸುದ್ದಿವಿಜಯ, ವಿಜಯನಗರ (ಅರಸೀಕರೆ)ಹೋಬಳಿಯ ಬೇವಿನಹಳ್ಳಿ ದೊಡ್ಡ ತಾಂಡದ ಬಳಿ ನಡೆದಿದ್ದ ದಾವಣಗೆರೆಯ ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಅಲಿಯಾಸ್ ಧನು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ.27 ರಂದು ಧನ್ಯಕುಮಾರ್ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ತೋಪಿಗೆ ಊಟಕ್ಕೆ ಬಂದಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆ ನಡೆದ ಎರಡು ದಿನಗಳಲ್ಲಿ ಆರೋಪಿಗಳಾದ ರವಿ ಜಿ, ಮಲ್ಲಿಕಾರ್ಜುನ್, ಸುದೀಪ್ ಸೇರಿ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಪ್ರಮುಖ ಆರೋಪಿ ದಾವಣಗೆರೆ ಸಂತೋಷ್ ಕುಮಾರ್ ಅಲಿಯಾಸ್ ಕಣುಮನ ಕುರಿತು ಮಾಹಿತಿ ನೀಡಿದ್ದರು.
ಆರೋಪಿಗಳ ಹೇಳಿಕೆ ಆಧರಿಸಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳದಲ್ಲಿ ಬಂಧಿಸಿಲಾಗಿದೆ. ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಸಂತೋಷ್ ರೌಡಿ ಶೀಟರ್ ಆಗಿದ್ದಾನೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.