ಸುದ್ದಿವಿಜಯ, ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಮೂಲಕ ಜಿಲ್ಲೆಯನ್ನು ಮಾದರಿಯಾಗಿ ಮಾಡುವ ಕನಸು ಕಟ್ಟಿರುವುದಾಗಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ತಾವೂ ಕೂಡ ಬಿಜೆಪಿ ಟಿಕೇಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಸಂಬಂಧ ಈಗಾಗಲೇ ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವುದಾಗಿ ಹೇಳಿದರು.
ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ನಾನು ಪರಿಸರ ಇಲಾಖೆಯಿಂದ ನಿವೃತ್ತಿ ಹೊಂದಿದ ಮೇಲೆ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ.
ಜನಪರ ಕಾಳಜಿಯ ಭಾಗವಾಗಿ ದಾವಣಗೆರೆ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡುವ ತುಡಿತ ನನ್ನಲ್ಲಿದೆ. ಇದಕ್ಕಾಗಿ ಪಕ್ಷ ಒಂದು ಬಾರಿ ಅವಕಾಶ ನೀಡಬೇಕೆಂದು ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಜಿಲ್ಲೆಯ ಜನರಿಗೆ ಉದ್ಯೋಗ ನೀಡುವುದು, ಕೃಷಿ ಪ್ರಧಾನವಾದ ಜಿಲ್ಲೆಯ ರೈತರು ಬೆಳೆಯುವ ಬೆಳೆಗಳನ್ನು ತಾವೇ ಮಾರಾಟಮಾಡುವುದು.
ಇದಕ್ಕಾಗಿ ರಾಜ್ಯ ಅಥವಾ ಹೊರರಾಜ್ಯಗಳಲ್ಲಿ ಮಾರುಕಟ್ಟೆ ಒದಗಿಸುವುದು, ಇದರೊಂದಿಗೆ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉತ್ತಮವಾದ ಆಸ್ಪತ್ರೆ ನಿರ್ಮಾಣ ಮಾಡುವುದು ಕೂಡ ಅತೀ ಜರೂರಾಗಿದೆ ಎಂದರು.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾವಣಗೆರೆ ಜಿಲ್ಲೆಯ ಜನ ದೂರದ ಬೆಂಗಳೂರು ಅಥವಾ ಮಣಿಪಾಲ್‌ಗೆ ಹೋಗಬೇಕಿದೆ. ಅದೇ ಮಾದರಿಯ ಆಸ್ಪತ್ರೆಗಳನ್ನು ದಾವಣಗೆರೆಯಲ್ಲಿ ಆರಂಭಿಸಿ ಜನರ ಆರೋಗ್ಯವನ್ನು ಉತ್ತಮಪಡಿಸುವುದು ನನ್ನ ದೊಡ್ಡ ಕನಸಾಗಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ನಮ್ಮ ನಾಯಕರೇ:
ಸಂಸದ ಸಿದ್ದೇಶ್ವರ ಸತತ 4 ಬಾರಿ ಆರಿಸಿ ಬಂದಿದ್ದಾರೆ. ಅವರಿಗೆ ಟಿಕೇಟ್ ಕೊಟ್ಟರೆ ನಾವು ಬೇಡ ಎನ್ನುವುದಿಲ್ಲ. ಆದರೆ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
ಹಾಗಾಗಿ ಒಂದು ಬಾರಿ ಅವಕಾಶ ಮಾಡಿಕೊಟ್ಟರೆ ಸಮಾಜಕ್ಕೆ ನಾನೇನು ಮಾಡಲು ಸಾಧ್ಯ ಎನ್ನುವುದನ್ನು ಮಾಡಿ ತೋರಿಸುತ್ತೇನೆ. ಪರಿಸರ ಅಧಿಕಾರಿಯಾದ ವೇಳೆ ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಈ ಬಾರಿ ಟಿಕೆಟ್ ಕೇಳುತ್ತಿದ್ದೇನೆ.
ಈಗಾಗಲೇ ರಾಜ್ಯ ಮತ್ತು ಕೇಂದ್ರ ನಾಯಕರ ಗಮನಕ್ಕೆ ಈ ವಿಚಾರವನ್ನು ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.