ಸುದ್ದಿವಿಜಯ, ದಾವಣಗೆರೆ: ಇಂದಿಗೆ ಸರಿಯಾಗಿ 8 ದಿನಗಳಲ್ಲಿ (ಜೂನ್-4 ರಂದು) ಮಧ್ಯಾಹ್ನದ ಹೊತ್ತಿಗೆ ದಾವಣಗೆರೆ ಕ್ಷೇತ್ರದ ಲೋಕಸಭೆ ಸದಸ್ಯರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸಲಿದೆ.
ಈ ಬಾರಿ ಚುನಾವಣೆಯಲ್ಲಿ ಯಾರು ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ. ಮೇ 7ರಂದು ಕ್ಷೇತ್ರದಲ್ಲಿ ಶೇ 76.99ರಷ್ಟು ಮತದಾನವಾಗಿತ್ತು. ವಿದ್ಯಾಕಾಶಿ, ಬೆಣ್ಣೆನಗರಿ, ಮಧ್ಯಕರ್ನಾಟಕ ಎಂದೇ ಕರೆಯಲಾಗುವ ದಾವಣಗೆರೆಯ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್‍ನಿಂದ ಪ್ರಭಾ ಮಲ್ಲಿಕಾರ್ಜುನ್ ಅಭ್ಯ ಅಭ್ಯರ್ಥಿ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಸಿದ್ದರಾಮಯ್ಯ ಆಪ್ತರಾದ ಜಿ. ಬಿ. ವಿನಯ್ ಕುಮಾರ್ ಸೇರಿ 30 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ದಾವಣಗೆರೆಯ ಲೋಕಸಭಾ ಚುನಾವಣೆ ಎಂದರೆ ಅದು ಜಿಎಂ ಕುಟುಂಬ ಮತ್ತು ಶಾಮನೂರು ಕುಟುಂಬದ ನಡುವಿನ ಸೆಣೆಸಾಟ. ಪ್ರಸ್ತುತ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಇತ್ತ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಚುನಾವಣೆಯಲ್ಲಿ ಯಾರೂ ಕಮ್ಮಿಯಿಲ್ಲದಂತೆ ಮತಬೇಟೆಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದಾವಣಗೆರೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ್ದರೂ ಸಹ ತುಪ್ಪ ಚಲ್ಲಿದರೂ ಪಾತ್ರೆಯಲ್ಲೆ ಇರಲಿ ಎಂಬಂತೆ ಹಾಲಿ ಸಂಸದರು ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್‍ಗೆ ನೀಡಲಾಗಿದೆ.
ಇನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು ತಮ್ಮ ಅದೃಷ್ಟವನ್ನು ಪರೀಕ್ಷೆಗಿಳಿದಿದ್ದಾರೆ.ಹೀಗಾಗಿ ಎರಡು ಪ್ರಬಲ ಕುಟುಂಬಗಳು ಮತ್ತು ಸಂಬಂಧಗಳ ನಡುವಿ ಸೆಣಸಾಟದಲ್ಲಿ ಯಾರು ಗೆದ್ದರೂ ಸಹ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ದಾವಣಗೆರೆಯಿಂದ ಮಹಿಳಾ ಸಂಸದರು ಆಯ್ಕೆಯಾಗಲಿದ್ದಾರೆ.
ಕುಟುಂಬಗಳ ಕದನ: ದಾವಣಗೆರೆ ಕ್ಷೇತ್ರದ ಚುನಾವಣೆ ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಹೋರಾಟ, ಪ್ರತಿಷ್ಠೆ. 2004, 2009, 2014ರಲ್ಲಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಜಿ. ಎಂ. ಸಿದ್ದೇಶ್ವರ ವಿರುದ್ಧ ಸೋತಿದ್ದಾರೆ. 2019ರಲ್ಲಿ ಕಾಂಗ್ರೆಸ್ ಹೆಚ್. ಬಿ. ಮಂಜಪ್ಪ ಕಣಕ್ಕಿಳಿಸಿದರೂ ಅವರು ಸಹ ಸೋಲು ಕಂಡರು.
2014ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಬದಲಾವಣೆ ಮಾಡಿವೆ. ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಎದುರಾಳಿಯಾಗಿದ್ದಾರೆ.
ದಾವಣಗೆರೆ ಕ್ಷೇತ್ರದ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಶಾಮನೂರು ಕುಟುಂಬದವರೇ ಶಾಸಕರು. ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ ಬೆಂಬಲಿಸುತ್ತಾರೆ. ಹರಿಹರ ಶಾಸಕರು ಬಿ. ಪಿ. ಹರೀಶ್ (ಬಿಜೆಪಿ).
ಶಾಮನೂರು ಶಿವಶಂಕರಪ್ಪ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಭಾವ ಕಡಿಮೆ ಏನಿಲ್ಲ. ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು.
ಶಾಮನೂರು ಶಿವಶಂಕರಪ್ಪ ಸಹ ಹಾಲಿ ಶಾಸಕರು. ಶಾಮನೂರು ಕುಟುಂಬದ ಪ್ರಭಾವ, ಪ್ರಭಾ ಮಲ್ಲಿಕಾರ್ಜುನ್ ಮಾಡುವ ಸಮಾಜ ಸೇವಾ ಚಟುವಟಿಕೆಗಳು ಗೆಲುವು ಸುಲಭವಾಗಿಸಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಸಂಸದರಾಗಿ ಜಿ. ಎಂ. ಸಿದ್ದೇಶ್ವರ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಮುಂತಾದ ಅಂಶಗಳು ಗಾಯತ್ರಿ ಸಿದ್ದೇಶ್ವರ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹಾಲುಮತ ಸಮಯದಾಯಕ್ಕೆ ಸೇರಿದ ಜಿ. ಬಿ. ವಿನಯ್ ಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಶಾಮನೂರು ಕುಟುಂಬದ ಪಾಲಾದ ಬಳಿಕ ಜಿ. ಬಿ. ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು.
ಆದರೆ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರೇ ವಿನಯ್ ಕುಮಾರ್ ಗೆ ಮತ ಹಾಕಿದರೆ ಅದು ಬಿಜೆಪಿಗೆ ಹೋಗುತ್ತದೆ. ಅವರಿಗೆ ಮತ ಹಾಕಬೇಡಿ ಎಂದು ಕರೆ ನೀಡಿದರು. ಯಾರು ಗೆಲುವು ಸಾಧಿಸುತ್ತಾರೆ? ಎಂದು ಜೂನ್ 4ರಂದು ತಿಳಿಯಲಿದೆ.
ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕರ್ನಾಟಕದ ಏಕೈಕ ಕ್ಷೇತ್ರ ದಾವಣಗೆರೆಯಾಗಿದೆ. ಆದ್ದರಿಂದ ಯಾರು ಗೆದ್ದರೂ ರಾಜ್ಯದಿಂದ ಒಬ್ಬರು ಮಹಿಳಾ ಸಂಸದರು ಆಯ್ಕೆಯಾಗಲಿದ್ದಾರೆ.