ಗೋಕಾಕ್ ಚಳವಳಿ ರೀತಿ ನಂದಿನಿ ಉಳಿಸಿ:ಡಾ.ಜೆ.ಆರ್.ಷಣ್ಮುಖಪ್ಪ.

Suddivijaya
Suddivijaya April 10, 2023
Updated 2023/04/10 at 3:04 PM

Suddivijaya/ kannadanews/ 10/4/2023

ಲೇಖಕರು:ಡಾ.ಜೆ.ಆರ್.ಷಣ್ಮುಖಪ್ಪ

ನಿರ್ದೇಶಕರು.ಡಿಸಿಸಿ ಬ್ಯಾಂಕ್. ದಾವಣಗೆರೆ.

ಸುದ್ದಿವಿಜಯ, ದಾವಣಗೆರೆ(ವಿಶೇಷ):1969 ರ ಜೂನ್ 19ರಂದು ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಧಿಯವರು ಖಾಸಗಿ ಸ್ವಾಮ್ಯದಲ್ಲಿದ್ದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು.

ಆದರೆ ಈಗಿನ ನರೇಂದ್ರ ಮೋದಿ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಇದರಿಂದ ಆಡಳಿತದಲ್ಲಿ ಕೇಂದ್ರಿಕರಣವಾಯಿತು ಮತ್ತು ಆರ್ಥಿಕ ಹಿನ್ನಡೆ ಕೂಡ ಆಯಿತು. ಅಷ್ಟೇ ಅಲ್ಲದೇ ಆಡಳಿತದಲ್ಲಿ ಬಿಗಿ ಕೂಡ ಕಡಿಮೆಯಾಗಿದೆ.

ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಗಣ್ಯಮಾನ್ಯರುಗಳು ಸ್ಥಾಪಿಸಿದ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ,ಕೆನರಾ ಬ್ಯಾಂಕ್ ಇತ್ಯಾದಿ ಬ್ಯಾಂಕ್‌ಗಳು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದರು ಸಹ ವಿಲೀನದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು.

ಇವೆಲ್ಲಾ ಗುಜರಾತಿನ ಬರೋಡಾ ಬ್ಯಾಂಕಿನಲ್ಲಿ ವಿಲೀನವಾದವು. ಕರ್ನಾಟಕದ ಮೇಧಾವಿ ತಾಂತ್ರಿಕ ತಜ್ಞರು, ಆರ್ಥಿಕ ತಜ್ಞರು ದಿವಾನರು ಆಗಿದ್ದ ಶ್ರೀ ಸ‌ರ್ ಎಂ .ವಿಶ್ವೇಶ್ವರಯ್ಯನವರು ಕಟ್ಟಿದ ಸ್ಟೇಟ್ ಬ್ಯಾಂಕ್‌ ಆಫ್ ಮೈಸೂರು (1904) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗಿ ಕರ್ನಾಟಕದಲ್ಲಿ ಬ್ಯಾಂಕಿಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವ್ಯಕ್ತಿಗಳ ಅಸ್ತಿತ್ವವೇ ಕಾಣೆಯಾಯಿತು.

ಅದರಂತೆ ಈಗ ಗುಜರಾತ್ ಕೇಂದ್ರಿಕೃತವಾದ ಅಮುಲ್ ಕರ್ನಾಟಕದ ನಂದಿನಿಯನ್ನು ಆಕ್ರಮಣ ಮಾಡಲು ಬಂದಿದೆ. ಅಮುಲ್ ಗುಜರಾತ್ ರಾಜ್ಯ ಸಹಕಾರ ಸಂಸ್ಥೆಯಾಗಿರುತ್ತದೆ. ಅದೇ ರೀತಿ ನಂದಿನಿ ಸಹ ಸಹಕಾರ ಸಂಸ್ಥೆಯಾದ ಕೆ.ಎಂ.ಎಫ್‌ ಉತ್ಪತ್ತಿಯಾದ ಬ್ರಾಂಡ್ ಹಾಲು ಉತ್ಪಾದಕ ಸಂಸ್ಥೆಯಾಗಿದೆ

ಇಂದು ಕರ್ನಾಟಕದ ರೈತರು ಕೃಷಿಯಿಂದ ಎಷ್ಟು ಆದಾಯ ಪಡೆಯುತ್ತಾರೋ ಅದಕ್ಕೆ ಸರಿಸಮಾನವಾಗಿ ಹಾಲು ಉತ್ಪಾದನೆಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ ಇದರಲ್ಲಿ ಮಹಿಳೆಯರ ಶ್ರಮವೇ ಹೆಚ್ಚು ಆದರೆ ಇಂದು ಗುಜರಾತ್ ಸಂಸ್ಕೃತಿಯ ಅಮುಲ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಬಂದಿರುತ್ತದೆ.

ಆರೋಗ್ಯ ದೊಡ್ಲಾ, ಹಟ್ಸನ್ ಇತ್ಯಾದಿ ಹಾಲು ಉತ್ಪಾದಕ ಸಂಸ್ಥೆಗಳು ಖಾಸಗಿ ಒಡೆತನದವಾಗಿರುತ್ತವೆ. ಅದಕ್ಕೂ ಸಹಕಾರ ಸಂಸ್ಥೆಗಳಿಗೂ ವ್ಯತ್ಯಾಸವಿದೆ.

ಮುಂದೊಂದು ದಿನ ನಂದಿನಿ ಹಾಲು ಉತ್ಪಾದನೆಯನ್ನು ಅಮುಲ್‌ನಲ್ಲಿ ವಿಲೀನಗೊಳಿಸಿದರು ಆಶ್ಚರ್ಯವಿಲ್ಲ. ಇದಕ್ಕೆ ಪೂರಕವಾಗಿ ಇತ್ತೀಚಿಗೆ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಮಂಡ್ಯ ಮೆಗಾ ಡೇರಿ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದನ್ನು ಗಮನಿಸಬಹುದು.

ಈ ಹಿಂದೆ ನಮ್ಮ ಕನ್ನಡ ನಾಡು,ನುಡಿ, ನೆಲ,ಜಲದ ಬಗ್ಗೆ ಅನೇಕ ಹೋರಾಟಗಳು ನಡೆದಿವೆ. ಗೋಕಾಕ್ ಚಳುವಳಿಯಂತಹ ಬಹುದೊಡ್ಡ ಹೋರಾಟ ನಡೆದಿರುವುದು ನಮ್ಮೆಲ್ಲರ ಕಣ್ಣ ಮುಂದೆ ಹಸಿರಾಗಿದೆ.

ಮುಂದಿನ ದಿನಗಳಲ್ಲಿ ನಂದಿನಿ ಅಸ್ತಿತ್ವದ ಬಗ್ಗೆ ಬೀದಿಗಿಳಿದು ಹೋರಾಟ ಮಾಡದಿದ್ದರೆ ಭವಿಷ್ಯದಲ್ಲಿ ನಂದಿನಿಯನ್ನು ಅಮುಲ್ ಎಂದು ಕರೆಯುವ ಕಾಲ ಬರಲಿದೆ. ಈ ಬಗ್ಗೆ ಎಲ್ಲಾ ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!