ಸುದ್ದಿವಿಜಯ,ದಾವಣಗೆರೆ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಲೇ ಬಿಜೆಪಿ ಆಡಳಿತಾವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಎಲ್ಲ ಅಧಿಕಾರಿಗಳು ವರ್ಗಾವಣೆಗೊಂಡಿದ್ದು, ಅಂತೆಯೇ ಅಂತಿಮವಾಗಿ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್‌ರವರನ್ನು ಸರಕಾರಕ್ಕೆ ವರ್ಗಾವಣೆ ಮಾಡಿದೆ.
ಅವರ ಜಾಗಕ್ಕೆ ಚಿಕ್ಕಮಗಳೂರಿನ ಎಸ್ಪಿ ಉಮಾಪ್ರಶಾಂತ್‌ರನ್ನು ಕರೆಸಿಕೊಂಡಿದೆ. ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಪದನಾಮ ಹೊಂದಿದ್ದ ಎಸ್ಪಿ ಡಾ.ಕೆ.ಅರುಣ್ ವಿಧಾನಸಭಾ ಚುನಾವಣೆ ವೇಳೆ ಆಗಮಿಸಿದ್ದರು.
ಇವರು ಬರುತ್ತಿದ್ದಾರೆ ಎಂಬ ಸುದ್ದಿ ಬಂದ ಕೂಡಲೇ ದಾವಣಗೆರೆಯ ಕೆಲ ಖಾಕಿ ಪಡೆಯಲ್ಲಿ ನಡುಕ ಶುರುವಾಗಿತ್ತು.
ಬರ, ಬರುತ್ತಲೇ ಎಲ್ಲ ಅಧಿಕಾರಿಗಳ ಮೀಟಿಂಗ್ ಮಾಡಿದ ಎಸ್ಪಿ ಡಾ.ಕೆ.ಅರುಣ್ ರಾತ್ರಿ 10ರೊಳಗೆ ಬಾರ್ ಆ್ಯಂಡ್ ರೆಸ್ಟೋರೆಂಟ್, ಅಂಗಡಿ, ಮುಗ್ಗಟ್ಟುಗಳು ಮುಚ್ಚಿಸಿದ್ದರು. ಇಡೀ ದಾವಣಗೆರೆ ಖಾಲಿ ಹೊಡೆಯುತ್ತಿತ್ತು.
ಇನ್ನು ಇಸ್ಪೀಟ್, ಓಸಿ, ಅಕ್ರಮ ಮರಳುಸಾಗಣೆ ಹೀಗೆ ಎಲ್ಲ ಧೋ ನಂಬರ್ ದಂಧೆಗಳಿಗೆ ಕಡಿವಾಣ ಹಾಕಿದ್ದರು. ಇದು ರಾಜಕಾರಣಿಗಳಿಗೆ ಮುಳುವಾಗಿತ್ತು.
ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು ಎಸ್ಪಿ ಡಾ.ಕೆ.ಅರುಣ್ ವರ್ಗಾವಣೆಗೆ ಸರಕಾರದ ಮೇಲೆ ಒತ್ತಡ ತಂದಿದ್ದರು.
ಇದರ ಮೊದಲ ಭಾಗವಾಗಿ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಶಾಂತನಗೌಡ ಈಗಿನ ಎಸ್ಪಿ ಡಾ.ಕೆ.ಅರುಣ್ ಮರಳು ಎತ್ತಲು ಬಿಡುತ್ತಿಲ್ಲ, ಅವರನ್ನು ಟ್ರಾನ್ಸರ್ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಒತ್ತಾಯಿಸಿದ್ದರು.
ತದನಂತರ ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ಭಾಷಣದಲ್ಲಿ ಶಾಂತನಗೌಡ್ರು ಕೇಳೋದು ಒಂದೇ ಎಸ್ ಪಿ ಟ್ರಾನ್ಸರ್ ಮಾಡ್ರಿ ಅಂತಾ, ಅವರೊಬ್ಬರೆ ಅಲ್ಲಾ ಎಲ್ಲಾ ಶಾಸಕರು ಕೇಳಿದ್ದಾರೆ ಎಂದಿದ್ದರು.
ಹಾಗೇನೆ ಎಸ್ ಪಿ ಒಳ್ಳೆಯವರು ಇದ್ದಾರೆ, ಬಿಗಿನೂ ಇದ್ದಾರೆ, ಒಳ್ಳೆ ಅಧಿಕಾರಿಗಳು ಇರಬೇಕು ಎಂದಿದ್ದರು.
ಅಲ್ಲದೇ ನಾನು ಯಾರ ಮಾತಿಗೂ ಬಗ್ಗೋದಿಲ್ಲ, ಎಸ್ಪಿ ವರ್ಗಾವಣೆಗೆ ನಾನು ಒತ್ತಡ ತಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನು ಶಕ್ತಿಯೋಜನೆ ವೇಳೆ ಎಸ್ಪಿ ಡಾ.ಕೆ.ಅರುಣ್ ಸೇರಿದಂತೆ ಡಿಸಿ ಬಾರದೇ ಇದ್ದ ಕಾರಣ ಸ್ವತಃ ಎಸ್‌ಎಸ್ ಮಲ್ಲಿಕಾರ್ಜುನ್ ಎಸ್ಪಿ ಮೇಲೆ ಆಕ್ರೋಶಗೊಂಡಿದ್ದರು. ಹೊನ್ನಾಳಿ, ಹರಿಹರದಲ್ಲಿ ಮೊದಲಿನಿಂದಲೂ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದು,
ಪೊಲೀಸ್ ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಎಲ್ಲ ಕಡೆ ಎಸ್ಪಿ ಡಾ.ಕೆ.ಅರುಣ್ ಬಿಗಿ ಮಾಡಿದ್ದರು.
ಇದು ಆಡಳಿತ ನಡೆಸೋರಿಗೆ ಒಂದಿಷ್ಟು ಕಷ್ಟವಾಗಿತ್ತುಘಿ. ಅಲ್ಲದೇ ಸ್ವತಃ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿತ್ತು.
ಒಟ್ಟಾರೆ ಸರಕಾರದಿಂದ ಎಸ್‌ಪಿ ಡಾ, ಅರುಣ್ ಅವರನ್ನು ವರ್ಗಾವಣೆಗೊಳಿಸಿರುವುದರಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರುಗಳಿಗೂ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂಬುದು ಜನರ ಅಭಿಪ್ರಾಯ.
ಖಡಕ್ ಐಪಿಎಸ್ ಅಧಿಕಾರಿ ಅರುಣ್
2014 ರ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿ ಡಾ. ಅರುಣ್, ಈ ಹಿಂದೆ ಚಿತ್ರದುರ್ಗ, ವಿಜಯನಗರ, ಕಲಬುರ್ಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಏಪ್ರಿಲ್ ಅಂತ್ಯದಲ್ಲಿ ದಾವಣಗೆರೆ ಎಸ್‌ಪಿಯಾಗಿ ವರ್ಗಾವಣೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಮತ್ತೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ ಅರುಣ್ ಚುನಾವಣಾ ಸಮಯದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಎಸ್‌ಪಿ ಆಗಿ ನೇಮಕಗೊಂಡಿದ್ದರು.
ಡಾ. ಅರುಣ್ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ದಾವಣಗೆರೆ ಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಕೇವಲ 5 ತಿಂಗಳಿಗೆ ಎಸ್ ಪಿ ಅರುಣ್ ಅವರನ್ನು ಸರಕಾರ ಕಲಬುರ್ಗಿ ಜಿಲ್ಲೆಯ ಪೊಲೀಸ್ ತರಬೇತಿ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದೆ.
ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಬಂದ ಕೂಡಲೇ ಆಡಳಿತ ಸುಧಾರಣೆಗಾಗಿ ಪೊಲೀಸ್ ಠಾಣೆಯಲ್ಲಿ ಬಹುದಿನಗಳಿಂದ ಇದ್ದ ಪಿಸಿ, ಡ್ರೈವರ್‌ಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದರು.
ಅಲ್ಲದೇ ಬೆಳಗ್ಗೆ 10 ಕ್ಕೆ ಕಚೇರಿಗೆ ಆಗಮಿಸುತ್ತಿದ್ದ ಎಸ್ಪಿ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಹೋಗುತ್ತಿರಲಿಲ್ಲ.
ಇಲಾಖಾ ಕರ್ತವ್ಯವನ್ನು ಬಿಟ್ಟು ಎಲ್ಲೂ ಕೂಡ ಎಸ್ಪಿ ಡಾ.ಕೆ.ಅರುಣ್ ಕಾಣಿಸುತ್ತಿರಲಿಲ್ಲ.
ಒಟ್ಟಾರೆ ದಾವಣಗೆರೆ ಜಿಲ್ಲೆಯಲ್ಲಿ ರೌಡಿಗಳಿಗೆ, ಅಕ್ರಮ ದಂಧೆಕೋರರಿಗೆ, ಭ್ರಷ್ಟ ಇಲಾಖಾಧಿಕಾರಿಗಳಿಗೆ ತಲೆ ನೋವಾಗಿದ್ದ ದಕ್ಷ ಅಧಿಕಾರಿ ಬೆಣ್ಣೆ ನಗರಿಗೆ ಗುಡ್‌ಬೈ ಹೇಳಿದ್ದಾರೆ.