ಸುದ್ದಿವಿಜಯ, ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಜನ ಬಿಸಿಲಿನ ತಾಪಕ್ಕೆ ಕರಗಿ ಹೋಗುತ್ತಿದ್ದು, ರೈತ ಹೊಲ ಉಳುಮೆ ಮಾಡಿ ಮುಗಿಲು ನೋಡುತ್ತಿದ್ದಾನೆ.
ಜಿಲ್ಲಾದ್ಯಂತ ಜಲ ಕ್ಷಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಜನರು ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಿ ಮೊರೆ ಹೋಗಿದ್ದು, ಎಡೆ ಜಾತ್ರೆ ಕೈಗೊಂಡಿದ್ದಾರೆ. ದಾವಣಗೆರೆ ನಗರ ಹಾಗೂ ಸುತ್ತಮುತ್ತಲಿನ ಜನರು ಬೆಳ್ಳಂ, ಬೆಳ್ಳಗ್ಗೆ ಹೋಳಿಗೆ, ಬುತ್ತಿ ಮಾಡಿಕೊಂಡು ದೇವಿಗೆ ನೀಡಿದರು. ವರುಣನ ಕರುಣಿಸು ತಾಯಿ, ಮನೆಗೆ ಜಿಲ್ಲೆಗೆ ಒಳ್ಳೆಯದನ್ನು ಮಾಡು ತಾಯಿ, ಧರೆಗೆ ಹನಿಯ ಉದುರಿಸಿ ತಾಪಗೊಂಡಿರುವ ಭೂಮಿಯನ್ನು ಶಾಂತಿಗೊಳಿಸು ಎಂದು ಬೇಡಿಕೊಂಡರು.
ಸಾಲಿನಲ್ಲಿ ಬಂದ ಭಕ್ತರು, ಕೈಯಲ್ಲಿ ಬುತ್ತಿ ಹಿಡಿದು ದೇವರಿಗೆ ಅರ್ಪಿಸಿದರು. ಕಳೆದ ಬಾರಿ ಇಷ್ಟೋತ್ತಿಗಾಗಲೇ ವರುಣ ಕಣ್ಣು ಬಿಟ್ಟಿದ್ದು, ಜನರು ಮಳೆ ನೋಡಿ ಸಂಭ್ರಮ ಪಟ್ಟಿದ್ದರು. ಆದರೀಗ ಜೂನ್ ಮುಗಿಯುತ್ತಾ ಬಂದರೂ ಮಳೆ ಬರುತ್ತಿಲ್ಲ. ಈ ಕಾರಣದಿಂದ ದುರ್ಬಲವಾಗಿರುವ ಮುಂಗಾರು ಮಳೆ ಸಮೃದ್ಧವಾಗಲಿ ಎಂದು ಪ್ರಾರ್ಥಿಸಿ ನಗರ ದೇವತೆ ಶ್ರೀ ದುಗ್ಗಮ್ಮನಿಗೆ ಎಡೆ ಪೂಜೆ ಜಾತ್ರೆ ಕೈಗೊಳ್ಳಲಾಗಿತ್ತು.
ಮಳೆ ಕ್ಷೀಣಿಸಿದಾಗಲೆಲ್ಲ ದುಗ್ಗಮ್ಮನಿಗೆ ಎಡೆ ಪೂಜೆ ಸಲ್ಲಿಸಿದರೆ ಸಮೃದ್ಧವಾದ ಮಳೆಯಾಗಿ ರೈತರ ಬದುಕು ಹಸನಾಗುವುದು ಎಂಬ ನಂಬಿಕೆ ಇದ್ದು, ಆದ್ದರಿಂದ ದೇವರಿಗೆ ಎಡೆ ಜಾತ್ರೆ ಆಚರಣೆ ಮಾಡಲಾಗಿದೆ ಎಂದು ದುಗ್ಗಮ್ಮ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿ ಬಾರಿ ಮಳೆ ಆಗದ ಕಾರಣ ಎಡೆ ಜಾತ್ರೆ ಆಚರಣೆ ಮಾಡಲಾಗುತ್ತದೆ. ಮಳೆ ಬಾರದೇ ರೈತರು ಬಿತ್ತನೆಗೆ ಪರಿತಪಿಸುತ್ತಿದ್ದು, ವ್ಯಾಪಾರಸ್ಥರು, ಸಾರ್ವಜನಿಕರು ಬಿಸಿಲಿನ ಬೇಗೆ ತಡೆಯಲಾರದೇ ಕಂಗಲಾಗಿದ್ದಾರೆ.
ಆದಕಾರಣ ದೇವಿಗೆ ಮೊಸರು ಬುತ್ತಿ ಹಾಗೂ ಹೋಳಿಗೆ ನೀಡುವ ಮೂಲಕ ದೇವಿಗೆ ಸಮರ್ಪಣೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ವರುಣ ದೇವನ ಕೃಪೆಗಾಗಿ ಜಾತ್ರೆ ನಡೆಸಲಾಗುತ್ತದೆ.ಇದಕ್ಕೂ ಸಹ ಮಳೆ ಬಾರದೆ ಹೋದರೆ ದೇವಸ್ಥಾನದ ಸುತ್ತ ಐದು ದಿನಗಳ ಕಾಲ ಸಂತೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.