ಸುದ್ದಿವಿಜಯ, ದಾವಣಗೆರೆ : ನನ್ನ ಫೋಟೋವನ್ನು ವಿಡಿಯೋ ಎಡಿಟಿಂಗ್ ಮಾಡಿ ಕಾಂಗ್ರೆಸ್ ಮುಖಂಡರಿಗೆ ಆ ಚಿತ್ರಗಳನ್ನು ತೋರಿಸಿ ನನಗೆ ಕೈ ಟಿಕೆಟ್ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸವಿತಾಬಾಯಿ ಮಾಯಕೊಂಡದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಬಂಜಾರ ಸಮುದಾಯವೇ ಇಲ್ಲಿ ಹೆಚ್ಚಿನದ್ದಾಗಿದ್ದು, ಮೊದಲು ಆ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಸದ್ಯ ಮಾಯಕೊಂಡದ ಪಕ್ಷೇತರಾಗಿ ಸ್ಪರ್ಧಿಸಿರುವ ಸವಿತಾಬಾಯಿಗೆ ಚುನಾವಣಾ ಆಯೋಗ ಬೀಸೋಕಲ್ಲು ಗುರುತನ್ನು ನೀಡಿದೆ. ಈ ಗುರುತನ್ನು ಹಿಡಿದು ಮಹಿಳೆಯರ ಬಳಿ ಮತಪ್ರಚಾರಕ್ಕೆ ಇಳಿದಿದ್ದಾರೆ. ಈಗಾಗಲೇ ಎಲ್ಲ ಹಳ್ಳಿಗಳಿಗೆ ಓಡಾಡುವ ಮೂಲಕ ಮತದಾರರ ಮನ ಗೆಲ್ಲುತ್ತಿದ್ದಾರೆ. ನನಗೆ ಕಾಂಗ್ರೆಸ್ ಮೋಸ ಮಾಡಿದೆ, ನನ್ನನ್ನು ತೇಜೋವಧೆ ಮಾಡಿದ್ದಾರೆ. ಕೈ ಹಿಡಿಯಿರಿ, ನಾನು ನಿಮ್ಮ ಮನೆಮಗಳು ಮಾಯಕೊಂಡದ ಅಭಿವೃದ್ಧಿಗೆ ಶ್ರಮಿಸಿ ಎಂದು ಸವಿತಾಬಾಯಿ ಮಹಿಳಾ ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.
ಸದ್ಯ ಮಾಯಕೊಂಡದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕರಾಗಿದ್ದು, ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪರನ್ನು ಕರೆಸಿ ಮತ ಪ್ರಚಾರ ಮಾಡುತ್ತಿದೆ. ಅತ್ತ ಕಾಂಗ್ರೆಸ್‍ನಿಂದ ಬಸವಂತಪ್ಪ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೆಂಬಲದಡಿ ಮತಪ್ರಚಾರ ಮಾಡುತ್ತಿದ್ದಾರೆ.
ಇನ್ನೂ ಜೆಡಿಎಸ್ ಕುಮಾರಸ್ವಾಮಿ ಬೆಂಬಲದೊಂದಿಗೆ ಮತ ಬೇಟೆ ಶುರುಮಾಡಿದ್ದಾರೆ. ಆದರೆ ಸವಿತಾಬಾಯಿ ಏಕಾಂಗಿಯಾಗಿ ಜನರ ಬಳಿ ಹೋಗುತ್ತಿದ್ದಾರೆ. ಅವರಿಗೆ ಆಗಿರುವ ಅನ್ಯಾಯವನ್ನು ಜನರಿಗೆ ತಿಳಿಸುವ ಮೂಲಕ ಒನ್ ಮ್ಯಾನ್ ಆರ್ಮಿಯಾಗಿ ಕೆಲಸ ಮಾಡುತ್ತಿದ್ದಾರೆ.
ಮಾಯಕೊಂಡ ಕ್ಷೇತ್ರದಲ್ಲಿ ಮಹಿಳಾಮತದಾರರು ಹೆಚ್ಚಿದ್ದು, ನೀರಾವರಿ ಪ್ರದೇಶ, ಬರಡು ಭೂಮಿ ಇದ್ದು, ಒಂದು ಭಾಗ ಶ್ರೀಮಂತರು ಕಾಣುತ್ತಿದ್ದರೇ, ಇನ್ನೊಂದು ಭಾಗದಲ್ಲಿ ಬಡ ವರ್ಗ ವಾಸಿಸುತ್ತಿದೆ. ಈ ಎರಡೂ ವರ್ಗದಲ್ಲಿ ಬಡವರ ಬಳಿ ಹೋಗುತ್ತಿರುವ ಸವಿತಾಬಾಯಿ ಕೇತ್ರವನ್ನು ತಾಲೂಕು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಹಲವು ದಿನಗಳಿಂದ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ಆಸೆಯಲ್ಲಿದ್ದ ಸವಿತಾಬಾಯಿ, ಟಿಕೆಟ್ ಸಿಗದ ಬಳಿಕ ಜೆಡಿಎಸ್‍ಗೆ ಹೋಗಿದ್ದರು. ಆದರೆ ಅಲ್ಲಿಯೂ ಅವರಿಗೆ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಮತ ಕೊಯ್ಲು ನಡೆಸುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷಗಳಿಗೆ ನಡುಕ ಉಂಟು ಮಾಡಿಸಿದೆ. ಸದ್ಯ ಮೂವರು ಮಹಿಳಾಮಣಿಗಳು ಕಣದಲ್ಲಿದ್ದು, ಸವಿತಾಬಾಯಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಜೆಎಚ್ ಪಟೇಲ್ ಅವರ ಊರು ಕಾರಿಗನೂರು ಸವಿತಾಬಾಯಿ ಊರಾಗಿದ್ದು, ನಿಮ್ಮ ಮನೆಮಗಳಿಗೆ ಮತ ನೀಡಿ ಎಂದು ಮನೆಮನೆ ಮತಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈಫೋಟೋಗಳನ್ನು ಎಡಿಟ್ ಮಾಡಿ ಬಿಡಲಾಗಿದೆ.
ಅವುಗಳು ನನ್ನ ಫೋಟೋ ಅಲ್ಲ. ಅವು ಎಡಿಟೆಡ್ ಫೋಟೋಗಳು, ನಾನು ಮಾಯಕೊಂಡ ಕ್ಷೇತ್ರದಲ್ಲಿ ಹೆಚ್ಚು ಬೆಳೆಯುತ್ತಿದ್ದೇನೆ. ಮೂರೇ ವರ್ಷದಲ್ಲಿ ಹೆಚ್ಚು ಜನಪ್ರಿಯವಾಗಿದ್ದೇನೆ ಎಂಬ ಹೊಟ್ಟೆಕಿಚ್ಚು ಕೆಲವರಿಗಿದೆ. ಇಂತಹ ಕೆಟ್ಟ ಮನಸ್ಥಿತಿವುಳ್ಳ ರಾಜಕಾರಣಿಗಳ ನಡುವೆ ಇದ್ದು ಜನರ ಮನಸ್ಸು ಗೆಲ್ಲುತ್ತೇನೆ ಎಂದು ಸವಿತಾಬಾಯಿ ಸ್ಪಷ್ಟಪಡಿಸಿದ್ದಾರೆ.