ಸುದ್ದಿವಿಜಯ,ದಾವಣಗೆರೆ : ಸಾಮಾನ್ಯ ಶಿಕ್ಷಕರನ್ನು ಎಲ್ಲರೂ ಸನ್ಮಾನಿಸುತ್ತಾರೆ ಆದರೆ ಉದ್ಯಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ.ಶ್ರೀನಿವಾಸಮೂರ್ತಿ ವಿಶೇಷಚೇತನರನ್ನು ಸಂಭಾಳಿಸುವ ಶಿಕ್ಷಕರನ್ನು ತಮ್ಮ ಹುಟ್ಟು ಹಬ್ಬದ ನಿಮಿತ್ತ ಗೌರವಿಸುವುದು ಸಂತಸ ತಂದಿದೆ ಎಂದು ಎಸ್‍ಎಸ್ ಕೇರ್ ಟ್ರಸ್ಟ್ ಸಂಸ್ಥಾಪಕರು, ಬಾಪೂಜಿ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ದೇವರಾಜ್ ಅರಸ್ ಬಡಾವಣೆಯ ಎ ಬ್ಲಾಕ್‍ನಲ್ಲಿರುವ ಲಯನ್ಸ್ ಕ್ಲಬ್‍ನಲ್ಲಿ ಇತ್ತೀಚೆಗೆ ಉದ್ಯಮಿ ಆರ್.ಜಿ.ಶ್ರೀನಿವಾಸಮೂರ್ತಿ 63ನೇ ಹುಟ್ಟುಹಬ್ಬ ಆಚರಣೆ ನಿಮಿತ್ತ ವಿಶೇಷಚೇತನರಿಗೆ ಪಾಠ ಹೇಳಿಕೊಡುವ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಆದರೆ ಉದ್ಯಮಿ ಶ್ರೀನಿವಾಸ ಮೂರ್ತಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷಚೇತನರ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಶಿಕ್ಷಕರಿಗೆ ಪ್ರೊತ್ಸಾಹ ನೀಡಲು ಇಂತಹ ಸನ್ಮಾನ ಕಾರ್ಯಕ್ರಮಗಳು ಅಗತ್ಯವಾಗಿದೆ.
ಶಿಕ್ಷಕ ವೃತ್ತಿ ಒಂದು ಪವಿತ್ರ ವೃತ್ತಿ, ಅದರಲ್ಲೂ ಸ್ಪರ್ಧಾತ್ಮಕ ಸಮಾಜದಲ್ಲಿ ವಿಕಲಚೇತನ ಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಬಾಳಲು ವಿದ್ಯಾ ದಾನ ಮಾಡುವ ಮೂಲಕ ಪ್ರೇರೇಪಿಸುತ್ತಿರುವ ನಿಮಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು ಎಂದ ಅವರು ಶಿಕ್ಷಕರಿಗೆ ಸನ್ಮಾನ ಮಾಡುವುದರಿಂದ ಅವರಿಗೆ ಕೂಡ ಹೆಚ್ಚಿನದಾಗಿ ಕೆಲಸ ಮಾಡಲು ಪ್ರೊತ್ಸಾಹ ಸಿಕ್ಕಿದಂತಾಗುತ್ತದೆ. ಇನ್ನು ಶಿಕ್ಷಕರು ದೇಶದ ಪ್ರಗತಿಗೆ ಪೂರಕ ಕೆಲಸ ಮಾಡುತ್ತಿದ್ದು, ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ನಡೆಸಲಿ ಎಂದು ಆಶಿಸಿದರು.ಉದ್ಯಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಕಳೆದ 13 ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಯಾವುದೇ ಅದ್ದೂರಿಯಾಗಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋದಿಲ್ಲ.
ಶಿಕ್ಷಕರಿಗೆ ಸನ್ಮಾನ ಮಾಡುವುದನ್ನು ನನ್ನ 50ನೇ ವರ್ಷದ ಹುಟ್ಟು ಹಬ್ಬದಿಂದಲೂ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ಈ ಬಾರಿ ವಿಶೇಷ ಚೇತನರಿಗೆ ಬೋಧನೆ ಮಾಡುವ ಶಿಕ್ಷಕರನ್ನು ಸನ್ಮಾನಿಸುವುದು ಸಂತಸ ತಂದಿದೆ. ಇದುವರೆಗೂ 1250 ಶಿಕ್ಷಕರನ್ನು ಸನ್ಮಾನಿಸಿದ್ದೇನೆ. ಈ ಬಾರಿ 69 ಶಿಕ್ಷಕರನ್ನು ಗೌರವಿಸಲಾಗಿದೆ. ಪ್ರತಿಯೊಬ್ಬ ಸಾಧಕನ ಹಿಂದೆ ಶಿಕ್ಷಕರು ಇರುವ ಕಾರಣ ಅವರನ್ನು ಗೌರವಿಸುವುದು ನನ್ನ ಮೊದಲ ಕರ್ತವ್ಯ. ಇಂತಹ ವಿಶಿಷ್ಠ ಕಾರ್ಯಕ್ರಮಗಳನ್ನು ಕೊನೆ ತನಕ ನಡೆಸಿಕೊಂಡು ಹೋಗುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಡಾ.ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಲಯನ್ಸ್‍ಕ್ಲಬ್‍ನಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದ ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ಸೆಪ್ಟೆಂಬರ್ 5 ಕ್ಕೆ ಶಿಕ್ಷಕರ ದಿನಾಚರಣೆ ಇದ್ದರೂ, ವರ್ಷಪೂರ್ತಿ ಶಿಕ್ಷಕರನ್ನು ಗೌರವಿಸುವುದು ಉತ್ತಮ ಕಾರ್ಯ.
ಅದರಲ್ಲೂ ಲಕ್ಷ್ಮೀ ಕಳೆಯನ್ನು ಹೊಂದಿರುವ, ದಾವಣಗೆರೆಗೆ ತನ್ನದೇ ಆದ ಕೊಡುಗೆ ನೀಡಿರುವ ಶಾಸಕ ಶಾಮನೂರು ಶಿವಶಂಕರಪ್ಪ ಮನೆತನದ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಶಿಕ್ಷಕರನ್ನು ಸನ್ಮಾನಿಸುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಮೆರಗು ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೇಮಾ ಶ್ರೀನಿವಾಸಮೂರ್ತಿ, ಲಯನ್ಸ್ ಕ್ಲಬ್‍ನ ಅಧ್ಯಕ್ಷ ನೀಲಿಉಮೇಶ್, ಮಹಮ್ಮದ್ ಹನೀಪ್, ಡಿಡಿಪಿಐ ಜಿ.ಕೊಟ್ರೇಶ್, ಪ್ರಮುಖರಾದ ಬಿ.ಎಸ್.ನಾಗಪ್ರಕಾಶ್, ಆರ್‍ಎಲ್ ಪ್ರಭಾಕರ್, ಎಸ್.ಓಂಕಾರಪ್ಪ, ಎನ್‍ಆರ್.ನಾಗಭೂಷಣ್‍ರಾವ್, ಬಿ.ಎಂ.ಶಿವಣ್ಣ, ಎಸ್.ಶಿವಮೂರ್ತಿ ಇದ್ದರು. ಈ ಸಂದರ್ಭದಲ್ಲಿ ವೌನೇಶ್ವರ ಕಿವುಡ ಮತ್ತು ಮೂಕರ ವಸತಿಯುತ ಶಾಲೆ, ಆರ್‍ವಿಜಿಕೆ ಕನ್ನಡ ಶಾಲೆ, ವಿಕಲಚೇತರ ಆಶಾಕಿರಣ್ ಟ್ರಸ್ಟ್, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು.