ಸುದ್ದಿವಿಜಯ,ದಾವಣಗೆರೆ: ಸ್ಥಳೀಯ ಆವರಗೆರೆಯ ಶ್ರೀನಿವಾಸ ಮಂದಿರದಲ್ಲಿ ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅದರಲ್ಲೂ ಏಳುಬೆಟ್ಟಗಳ ನಡುವೆ ಇದ್ದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಇದ್ದಲ್ಲಿಯೇ ಪಡೆಯಲಾಯಿತು.
ಕನ್ನಿಕಾ ಪರಮೇಶ್ವರಿ ಬ್ಯಾಂಕ್‍ನ ಅಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ ಹಾಗೂ ಹೇಮಾ ನೇತೃತ್ವದಲ್ಲಿ ಸುಮಾರು 30 ಮಹಿಳೆಯರು ಏಳು ಬೆಟ್ಟಗಳನ್ನು ನಿರ್ಮಾಣ ಮಾಡಿ ಅದರಲ್ಲಿ ತಿಮ್ಮಪ್ಪನ ಮೂರ್ತಿ ಇಟ್ಟಿದ್ದರು. ಅದರಲ್ಲೂ ತಿಮ್ಮಪ್ಪನಿಗೆ ಮಾಡಿದ ದೀಪಾಧಾರತಿ ನೋಡುಗರ ಮನ ಸೆಳೆಯಿತು.
ಗರುಡಾದ್ರಿ ಬೆಟ್ಟ, ವೃಷಾಭದ್ರಿ ಬೆಟ್ಟ, ನೀಲಾದ್ರಿ ಬೆಟ್ಟ, ಶೇಷಾದ್ರಿ ಬೆಟ್ಟ, ಚುಂಚಾದ್ರಿ ಬೆಟ್ಟಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಬೆಟ್ಟಗಳಿಗೆ ಹೆಂಗಳೆಯರು ವಿಶೇಷ ಪೂಜೆ ನಡೆಸಿದರು. ಈ ಬಾರಿ ಹೊಸ ವರ್ಷದಂದೇ ವೈಕುಂಠ ಏಕಾದಶಿಯೂ ಬಂದಿದ್ದು ವೆಂಕಟೇಶ್ವರ ದೇವಾಲಯದಲ್ಲಿ ಸ್ವರ್ಗದ ಬಾಗಿಲು ತೆರೆಯುವುದರಿಂದ ಭಕ್ತರ ಸಂಖ್ಯೆ ಡಬಲ್ ಆಗಿತ್ತು. ಭಕ್ತರು ವೈಕುಂಠ ದ್ವಾರ ಹಾದು ಹೊಸ ವರ್ಷದ ಸಂಕಲ್ಪ ಮಾಡುವ ವಿಶೇಷ ಅವಕಾಶ ಈ ಬಾರಿ ಲಭ್ಯವಾಗಿತ್ತು.
ಈ ಬಾರಿ ವೈಕುಂಠ ಏಕಾದಶಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ನೆರೆದಿತ್ತು. ದೇವಾಲಯದ ಮುಂದಿನ ರಸ್ತೆ ತುಂಬಿ ಜನ ಪಕ್ಕದ ಪಾರ್ಕ್ ರಸ್ತೆಯವರೆಗೂ ಜನರ ಸರತಿ ಸಾಲು ಇತ್ತು. ಮಧ್ಯಾಹ್ನದ ಬಿಸಿಲಲ್ಲೂ ಸರತಿ ಕರಗಲಿಲ್ಲ, ಮುಂಜಾನೆಯಿಂದ ಸಂಜೆವರೆಗೂ ಇದೇ ರೀತಿ ಸರದಿ ಸಾಲು ಇರುವುದು ಕಂಡು ಬಂತು.
ಸಂಜೆ ಮೇಲೆ ತೆಗೆದ ಸ್ವರ್ಗದ ಬಾಗಿಲು: ತಿರುಪತಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ತಳಿರು, ತೋರಣ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮುಂಜಾನೆ 5.30ಕ್ಕೆ ವೈಕುಂಠ ಏಕಾದಶಿಯ ಪೂಜಾ ಕೈಂಕರ್ಯಗಳು ಆರಂಭವಾದವು, ಬೆಳಗ್ಗೆ 6ಕ್ಕೆ ಪೂಜೆ ಸಲ್ಲಿಸಿ ವೈಕುಂಠದ ಬಾಗಿಲು ತೆರೆಯಲಾಯಿತು. ಮೂರ್ತಿಗೆ ಆಕರ್ಷಕ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಆ ಹೊತ್ತಿಗಾಗಲೇ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಳ ಪ್ರವೇಶಿಸಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ವೈಕುಂಠದ ದ್ವಾರ ಪ್ರವೇಶಿಸಿ ಭಕ್ತಿ ಪ್ರದರ್ಶಿಸಿದರು, ಹೊಸ ಆರಂಭದ ದಿನಗಳಾದ್ದರಿಂದ ನೂತನ ಸಂಕಲ್ಪ ಮಾಡಿದರು. ವೃದ್ಧರು, ಮಕ್ಕಳು ಸೇರಿದಂತೆ ವಿಐಪಿಗಳಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರನಿಗೆ ಪ್ರಿಯವಾದ 10 ಸಾವಿರ ಲಡ್ಡು ತಯಾರು ಮಾಡಲಾಗಿತ್ತು. ಭಕ್ತರು ಪೂಜೆ ಸಲ್ಲಿಸಿ ಲಡ್ಡು ಖರೀದಿ ಮಾಡಿದರು. ಭಕ್ತರು ಬಾಳೆಹಣ್ಣು, ತುಳಸಿ ಹಾಗೂ ತೆಂಗಿನ ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಷಣ್ಮುಖಪ್ಪ ಸೇರಿದಂತೆ ಇತರರು ದೇವರ ದರ್ಶನ ಪಡೆದರು.