ಸುದ್ದಿವಿಜಯ, ದಾವಣಗೆರೆ : ಸದ್ಯ ಬಿಜೆಪಿಗರು ನಿರುದ್ಯೋಗಿಗಳು ಆಗಿದ್ದು, ಬೇರೆ ಕೆಲಸವಿಲ್ಲದೇ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಮತಾಂತರ ನಿಷೇಧ ಕಾಯಿದೆ ವಾಪಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯಿದೆ ವಾಪಸ್ ವಿಚಾರವನ್ನುಸಮರ್ಥಿಸಿಕೊಂಡರು. ಬಿಜೆಪಿಯವರು ಜಾತಿ-ಜಾತಿಗಳನಡುವೆ ಜಗಳ ಹಚ್ಚಿ ಸಮಾಜದ ಶಾಂತಿಗೆ ಧಕ್ಕೆ ಬರುವಂತೆ ನಡೆದು ಕೊಳ್ಳುತ್ತಿದ್ದನ್ನು ನಾವು ಈಗ ಸರಿ ಮಾಡುತ್ತಿದ್ದೇವೆ.
ಈ ಬಗ್ಗೆ ಯಾವುದೇ ವಿರೋಧ ವಿಲ್ಲ. ಸದ್ಯ ಬಿಜೆಪಿಯವರು ಈಗ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಮಲ ಪಾಳಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಾದ ಬಗ್ಗೆ ಚರ್ಚೆಗಳು ನಡೆಯತ್ತಿದೆ, ಈ ವಿದ್ಯುತ್ ಬಿಲ್ ಹೆಚ್ಚಿಸಿದ್ದೇ ಬಿಜೆಪಿಯವರೇ. ಆಗಸ್ಟ್ ಒಂದರಿಂದ ನಾವು ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಆಗಸ್ಟ್‍ನಿಂದ 95% ಹೆಚ್ಚು ಗ್ರಾಹಕರಿದ್ದಾರೆ. 200 ಯೂನಿಟ್ ಒಳಗೆ ಉಪಯೋಗ ಮಾಡುವವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಬಗರ್ ಹುಕುಂ ಬಗ್ಗೆ ಈಗಾಗಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ್ರು ನಮ್ಮ ಅರಣ್ಯ ಇಲಾಖೆಗೆ ಸುತ್ತೋಲೆ ಕಳುಹಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡ ಬಡವರಿಗೆ ಅನುಕೂಲ ಮಾಡಲಾಗುವುದು. ಇದಕ್ಕಾಗಿ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಪರಿಶೀಲನೆ ಮಾಡಿ ಯಾರು ಬಡವರು ಇದ್ದಾರೆ ಎನ್ನುವುದನ್ನು ನೋಡಲಾಗುತ್ತದೆ. ಅವರಿಗೆ ಕಾಲಮಿತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರ ಕೇಸ್‍ಗಳನ್ನು ಕ್ಲಿಯರ್ ಮಾಡುತ್ತೇವೆ ಎಂದರು.
ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ದೂರುಗಳಿದ್ದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ ಚಿಕ್ಕ ಗುಡಿಸಲುಗಳನ್ನು ಕಟ್ಟಿಕೊಂಡು ಅಥವಾ ತುಂಡು ಭೂಮಿಯಲ್ಲಿ ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವ ವಿಚಾರದಲ್ಲಿ ಮಾನವೀಯತೆ ತೋರಿಸುವುದು ಅನಿವಾರ್ಯ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ ಕಂಡಿಷನ್ ಹಾಕಿದ್ದೇವೆ. ಆದರೆ ಅವು ರಾಜ್ಯದವರಿಗೆ ಸೌಲಭ್ಯ ಸಿಗಬೇಕು ಎಂಬ ಉದ್ದೇಶ ಹೊಂದಿದೆ. ಕೆಲವು ಗ್ಯಾರಂಟಿಗಳಿಗೆ ಮಾತ್ರ ಕಂಡಿಷನ್ ಅನ್ವಯ. ಇದರಿಂದ 90% ಜನರಿಗೆ ಲಾಭವಾಗುತ್ತದೆ ಎಂದರು.
ಸದ್ಯ ನಾನು ಶಾಮನೂರು ಶಿವಶಂಕರಪ್ಪನವರು ಹುಟ್ಟುಹಬ್ಬದ ಸಂಭ್ರದಲ್ಲಿದ್ದು ನಮ್ಮ ಹಿರಿಯ ನಾಯಕರಿಗೆ ಶುಭಾಶಯ ತಿಳಿಸಲು ಬಂದಿದ್ದೇನೆ. ಅವರ ಜೀವನದ ಆದರ್ಶಗಳನ್ನು ನಾವೆಲ್ಲರೂ ಕೈಗೂಡಿಸಿಕೊಳ್ಳಬೇಕು. ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶತಾಯುಷಿಗಳಾಗಿ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಆಶಿಸಿದರು.