ಜಗಳೂರು ತಾಲೂಕಿನ ದೇವಿಕೆರೆ ಗ್ರಾಪಂ ನೂತನ ಅಧ್ಯಕ್ಷೆಯಾಗಿ ರಣದಮ್ಮ ಆಯ್ಕೆ

Suddivijaya
Suddivijaya December 8, 2022
Updated 2022/12/08 at 2:43 AM

ಸುದ್ದಿವಿಜಯ, ಜಗಳೂರು: ತಾಲೂಕಿನ ದೇವಿಕೆರೆ ಗ್ರಾಪಂ ಅಧ್ಯಕ್ಷರಾಗಿ ಎಚ್.ರಣದಮ್ಮ ಮತ್ತು ಉಪಾಧ್ಯಕ್ಷರಾಗಿ ಎಂ.ಚಂದ್ರಪ್ಪ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷ ಸದಾಶಿವಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಚುನಾವಣೆಯನ್ನು ಮಧ್ಯಾಹ್ನ 1.30ಕ್ಕೆ ನಿಗದಿಪಡಿಸಲಾಗಿತ್ತು. ಕಣದಲ್ಲಿ ರಣದಮ್ಮ, ಪಾರ್ವತಮ್ಮ ಮತ್ತು ಗುರುಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಕಣದಲ್ಲಿದ್ದ ಎಸ್‍ಸಿ ಕೆಟಗರಿಯ ಎಚ್.ರಣದಮ್ಮ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಗಳೂ ಅದ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಿಂಗರಾಜು ತಿಳಿಸಿದರು.

ಗ್ರಾಪಂ ವ್ಯಾಪ್ತಿಗೆ ಒಳಪಡುವ ಒಟ್ಟು 22 ಸದಸ್ಯರಲ್ಲಿ 8 ಜನ ಸದಸ್ಯರು ಗೈರಾಗಿದ್ದರು. ಉಳಿದ 14 ಜನ ಸದಸ್ಯರು ಸರ್ವಾನುಮತದಿಂದ ರಣದಮ್ಮ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಎಂ.ಚಂದ್ರಪ್ಪ ಅವರನ್ನೇ ಮತ್ತೊಂದು ಅವದಿಗೆ ಮುಂದುವರೆಸಲು 14 ಜನ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದರಿಂದ ಚಂದ್ರಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ರಣದಮ್ಮ, ಗ್ರಾಪಂ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಿಗೂ ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ನೀರು, ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು. ಚುನಾವಣೆ ವೇಳೆ ಅಹಿತರ ಘಟನೆಗಳು ಜರುಗದಂತೆ ಜಗಳೂರು ಹಾಗೂ ಬಿಳಿಚೋಡು ಠಾಣೆಯ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ರಣದಮ್ಮ ಅಧ್ಯಕ್ಷರಾಗುತ್ತಿದ್ದಂತೆ ಅವರ ಅಭಿಮಾನಿಗಳು, ಹಿತೈಷಿಗಳು ಬಂಧುಗಳು ಪಠಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಯುವ ಮುಖಂಡ ಪಿ.ಎಂ.ರುದ್ರೇಶ್, ಬಿಜೆಪಿ ಮುಖಂಡರಾದ ಬಿಳಿಚೋಡು ಮಹೇಶ್, ದೇವಿಕೆರೆ ದೇವೀರಯ್ಯ, ಬಂಡೇರ್ ತಿಪ್ಪಣ್ಣ, ಇಂದಿರೇಶ್, ಪಿಡಿಒ ಕೆ.ಸಿ.ಸುನಿತಾ ಸೇರಿದಂತೆ ಸರ್ವ ಸದಸ್ಯರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!