ಚುನಾವಣಾ ಸಂತೆ, ಇಂದಿನಿಂದಲೇ ನೀತಿ ಸಂಹಿತೆ, ಏನೆಲ್ಲಾ ನಿಯಮಗಳ ಕಂತೆ!

Suddivijaya
Suddivijaya March 29, 2023
Updated 2023/03/29 at 9:24 AM

ಸುದ್ದಿವಿಜಯ, ಬೆಂಗಳೂರು: 2023ನೇ ಸಾಲಿನ 16ನೇ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಸಂತೆ ಆರಂಭವಾಗಿದ್ದು, ನಿಯಮಗಳ ಕಂತೆಯನ್ನು ಚುನಾವಣಾ ಆಯೋಗ ಹೇರಿದೆ.

ಹೌದು, ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ನೀತಿ ಸಂಹಿತೆಯ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ಫಲಿತಾಂಶ ಬಂದು ಹೊಸ ಸರ್ಕಾರ ರಚನೆಯಾಗುವವರೆಗೆ ಈ ಸಂಹಿತೆಗಳು ಜಾರಿಯಲ್ಲಿರಲಿವೆ.

ಸಾಮಾನ್ಯ ಸಂಹಿತೆಗಳು

* ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳು ಧರ್ಮ, ಜಾತಿ, ಭಾಷೆ ಹಾಗೂ ಸಮುಯದಾಯಗಳ ನಡುವೆ ದ್ವೇಷ ಉಂಟು ಮಾಡುವಂಥ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗುವಂತಿಲ್ಲ.

* ವಿರುದ್ಧ ಪಕ್ಷಗಳ ನೀತಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾತ್ರ ಟೀಕೆ ಮಾಡಬೇಕು. ವೈಯಕ್ತಿಕ ಟೀಕೆ ಸಲ್ಲ.

* ಜಾತಿ, ಧರ್ಮದ ಆಧಾರದಲ್ಲಿ ಮತ ಪಡೆಯುವ ಮನವಿ ಮಾಡಬಾರದು. ಮಂದಿರ, ಮಸೀದಿ, ಇಗರ್ಜ್‌ ಸೇರಿ ಧಾರ್ಮಿಕ ಸ್ಥಳಗಳನ್ನು ಪ್ರಚಾರಕ್ಕೆ ಬಳಸಕೂಡದು.

*ಭ್ರಷ್ಟ ಚಟುವಟಿಕೆಯಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳು ತೊಡಗಿಸಿಕೊಳ್ಳುವಂತಿಲ್ಲ.

*ಅನುಮತಿ ಇಲ್ಲದೆ ಯಾರದೇ ವೈಯಕ್ತಿಕ ಸ್ವತ್ತುಗಳನ್ನು ಬಳಕೆ ಮಾಡುವಂತಿಲ್ಲ.

*ಒಂದು ಪಕ್ಷದ ಕಾರ್ಯಕ್ರಮಕ್ಕೆ ಇನ್ನೊಂದು ಪಕ್ಷಗಳ ಕಾರ್ಯಕರ್ತರು ಅಡ್ಡಿಪಡಿಸುವಂತಿಲ್ಲ.

ಸಭೆ ನಡಾವಳಿಗ ಬಗ್ಗೆ ಎಚ್ಚರವಿರಲಿ

1. ಸಭೆ ನಡೆಸಲು ಉದ್ದೇಶಿಸರುವ ಸ್ಥಳದಲ್ಲಿ ಯಾವುದೇ ನಿರ್ಬಂಧಕ ಆಜ್ಞೆಗಳು ಇಲ್ಲ ಎನ್ನುವುದನ್ನು ಅಭ್ಯರ್ಥಿ ಯಾ ಪಕ್ಷ ಖಚಿತ ಪಡಿಸಿಕೊಳ್ಳುವುದು.

2. ಸಭೆ ನಡೆಸುವುದಕ್ಕೂ ಮುನ್ನ ಸಭೆಯ ಸಮಯ ಹಾಗೂ ಸ್ಥಳವನ್ನು ಸ್ಥಳೀಯ ಪೊಲೀಸರಿಗೆ ಅಭ್ಯರ್ಥಿ ಅಥವಾ ಪಕ್ಷ ತಿಳಿಸತಕ್ಕದ್ದು.

3. ಒಂದು ವೇಳೆ ಸಭೆಯಲ್ಲಿ ಲೌಡ್‌ ಸ್ಪೀಕರ್‌ ಬಳಸುವುದಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆದುಕೊಳ್ಳುವುದು.

4. ಸಭೆಯ ಸ್ಥಳದಲ್ಲಿ ಯಾರಾದರೂ ತೊಂದರೆ ಕೊಡುತ್ತಿದ್ದರೆ, ಸ್ಥಳದಲ್ಲಿರುವ ಪೊಲೀಸರ ಸಹಾಯ ಪಡೆಯುವುದು.

ಮೆರವಣಿಗೆ

1. ಮೆರವಣಿಗೆ ಆಯೋಜಿಸುವ ಪಕ್ಷ ಯಾ ಅಭ್ಯರ್ಥಿ, ಮೆರವಣಿಗೆ ಆರಂಭವಾಗುವ ಸ್ಥಳ, ಸಮಯ, ಸಾಗುವ ಹಾದಿ, ಕೊನೆಗೊಳ್ಳುವ ಸಮಯದ ಬಗ್ಗೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿ, ಅನುಮತಿ ಪಡೆಯವುದು.

2. ಮೆರವಣಿಗೆ ಸಾಗುವಾಗ ಸ್ಥಳೀಯ ನೀತಿ ನಿಯಮಗಳನ್ನು ಪಾಲಿಸುವುದು. ಸಂಚಾರ ನಿಯಮಗಳನ್ನು ಪಾಲಿಸುವುದು.

3. ರಸ್ತೆಯ ಬಲಭಾಗದಲ್ಲಿ ಮೆರವಣಿಗೆ ನಡೆಸುವುದು. ಪೊಲೀಸ್‌ ಸೂಚನೆಗಳನ್ನು ಪಾಲಿಸುವುದು.

4. ಒಂದು ವೇಳೆ ಎರಡು ಪಕ್ಷಗಳು ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ ಮೆರವಣಿಗೆ ಮಾಡುವುದಿದ್ದರೆ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿ ಬೇಗನೇ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸುವುದು.

5. ಮೆರವಣಿಗೆ ವೇಳೆ ಅನಪೇಕ್ಷಿತ ಉಪಕರಣಗಳನ್ನು ಬಳಕೆ ಮಾಡದಿರುವುದು.

6. ಇತರ ರಾಜಕೀಯ ಸದಸ್ಯರನ್ನು ಪ್ರತಿನಿಧಿಸುವ ಪ್ರತಿಮೆಗಳನ್ನು ಒಯ್ಯುವುದು, ಪಕ್ಷಗಳು ಅಥವಾ ಅವರ ನಾಯಕರು, ಅಂತಹ ಪ್ರತಿಕೃತಿಗಳನ್ನು ಸಾರ್ವಜನಿಕವಾಗಿ ಮತ್ತು ಇತರ ರೂಪಗಳಲ್ಲಿ ಸುಡುವುದು ಮಾಡಕೂಡದು.

Share this Article
Leave a comment

Leave a Reply

Your email address will not be published. Required fields are marked *

error: Content is protected !!