ಸುದ್ದಿವಿಜಯ, ಜಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಯವರೆಗೆ ಸಿಲಿಂಡರ್ ಹೊತ್ತು ಶನಿವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ರಾಜೇಶ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ.
ನಮ್ಮದು ಬಡವರ ರಾಷ್ಟ್ರ, ದೇಶದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಹಳ್ಳಿಯ ಜನ ಇನ್ನೂ ಮೂಲ ಸೌಕರ್ಯಗಳಿಂದ ಮುಕ್ತರಾಗಿಲ್ಲ. ಬಡಜನರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ. ಕೇಂದ್ರ ರಾಜ್ಯ ಸರಕಾರದ ಬಡವರ ವಿರೋಧಿ ಧೋರಣೆ ಖಂಡಿಸಿ ಜನಜಾಗೃತಿ ಮೂಡಿಸುತ್ತಿದ್ದೇವೆ. ತಕ್ಷಣವೇ ಬೆಲೆ ಏರಿಕೆ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕೆಪಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತದಾಳಿಯಲ್ಲಿ 8 ಕೋಟಿಗೂ ಅಧಿಕ ಹಣ ಸಿಕ್ಕಿದೆ. ಇಲ್ಲಿಯವರೆಗೆ ಕೇವಲ ಶೇ.40 ಸರಕಾರ ನೋಡಿದ್ದೆವು. ಈಗ ಶೇ.80ರಷ್ಟು ಭ್ರಷ್ಟಾಚಾರದ ಬಿಜೆಪಿ ಸರಕಾರವಾಗಿದೆ.
ಈ ಸರಕಾರ ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದಕ್ಕೆ ಇದಕ್ಕಿಂತಾ ನಿದರ್ಶನ ಬೇಕಾ ಎಂದು ಪ್ರಶ್ನಿಸಿದರು. ಮಾಡಾಳ್ ವಿರೂಪಾಕ್ಷಪ್ಪ ಅವರು ಚುನಾವಣೆಗಾಗಿ ಹಣ ಸಂಗ್ರಹಕ್ಕಾಗಿ ಇಷ್ಟೆಲ್ಲಾ ಭ್ರಷ್ಟಾಚಾರ ಮಾಡಿರುವುದು ಸಾಬೀತಾಗಿದೆ. ಕೂಡಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್ ರಾಜ್ ಮಾತನಾಡಿ, ಕೇಂದ್ರ ಸರಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 450 ರೂ ಇತ್ತು. ಇಂದು ಸಿಲಿಂಡರ್ ಬೆಲೆ 1125ಕ್ಕೆ ಏರಿಕೆ ಯಾಗಿದೆ. ಕೇವಲ ಹತ್ತು ವರ್ಷದಲ್ಲಿ ಹತ್ತುಪಟ್ಟು ಏರಿಸಿರುವ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಜನವಿರೋಧಿ ನೀತಿ ಸಾಕ್ಷಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಲೋಕೇಶ್, ಹೊನ್ನೂರ್ ಸ್ವಾಮಿ, ಬಸವಾಪುರ ರವಿಚಂದ್ರ, ಗುತ್ತಿದುರ್ಗ ರುದ್ರೇಶ್, ತಾನಾಜಿ ಗೋಸಾಯಿ, ಹಟ್ಟಿ ತಿಪ್ಪೇಸ್ವಾಮಿ, ಮರೇನಹಳ್ಳಿ ಶೇಖರಪ್ಪ, ದಾಸಪ್ಪ, ಬಂಗಾರಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಶ್ವಥ್‍ರೆಡ್ಡಿ ಬಡಾವಣೆಯಲ್ಲಿ ಗ್ಯಾರಂಟಿ ಕಾರ್ಡ್:
ಪಟ್ಟಣದ ಅಶ್ವಥ್‍ರೆಡ್ಡಿ ಬಡಾವಣೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಲಾಯಿತು. ಪ್ರತಿ ತಿಂಗಳು ಗೃಹಿಣಿಯರಿಗೆ ಎರಡು ಸಾವಿರ ಹಣ, 200 ಯುನಿಟ್ ವಿದ್ಯುತ್ ನೀಡುವ ಭರವಸೆ, ಪ್ರತಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ 10ಕೆಜಿ ಅಕಿ ಕೊಡುವ ಮೂರು ಮಹತ್ವದ ಉಚಿತ ಘೋಷಣೆಗಳ ಗ್ಯಾರಂಟಿ ಕಾರ್ಡ್ ಅನ್ನು ನಿವಾಸಿಗಳಿಗೆ ನೀಡಲಾಯಿತು.