suddivijayanews13/07/2024
ಸುದ್ದಿವಿಜಯ, ಜಗಳೂರು: ಸರಕಾರದ ಏನೇ ಯೋಜನೆಗಳು ಬಂದರೂ ಅದಕ್ಕೆ ಆಶಾ ಕಾರ್ಯಕರ್ತೆಯರು ಬೇಕು. ಆದರೆ ನಮ್ಮ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ಸರಕಾರ ನಡೆಸಿಕೊಳ್ಳುತ್ತಿಲ್ಲ.
ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಬಳಕೆ ಮಾಡಿಕೊಂಡು ನಿರ್ಲಕ್ಷ್ಯಿಸುತ್ತಿದೆ ಎಂದು ತಾಲೂಕು ಆಶಾ ಕಾರ್ಯಕರ್ತೆಯರ ಸಂಯೋಜಕ ಮಧು ತೊಗಲೇರಿ ಸರಕಾರದ ವಿರುದ್ಧ ಸಿಡಿದೆದ್ದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಎಐಯುಟಿಯುಸಿ ವತಿಯಿಂದ ತಾಲೂಕು ಆಶಾಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಕಾರ್ಮಿಕ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ತಿಂಗಳಿಗೆ 21 ಸಾವಿರ ವೇತನ ಪಡೆಯಬೇಕು. ಆದರೆ ಆಶಾ ಕಾರ್ಯಕತೆಯರನ್ನು ದುಡಿಸಿಕೊಳ್ಳುವ ಸರಕಾರ ಕಾರ್ಮಿಕ ನಿಯಮಗಳಿಗೆ ವಿರುದ್ಧವಾಗಿ ವೇತನ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೂ ಕಾರ್ಮಿಕರೆಂದು ಪರಿಗಣಿಸಿ ಶಾಸನ ಬದ್ಧ ಸೌಲಭ್ಯಗಳನ್ನು ಒದಗಿಸಬೇಕು.
ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ತಿಪ್ಪಕ್ಕ, ಇಂದ್ರಮ್ಮ, ರೀತಮ್ಮ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಇದ್ದರು.