ಮುಗಿಯಿತು ಚುನಾವಣೆ, ಚುನಾವಣೋತ್ತರ ಸಮೀಕ್ಷೆಯತ್ತ ಎಲ್ಲರ ಚಿತ್ತ!

Suddivijaya
Suddivijaya May 10, 2023
Updated 2023/05/10 at 12:47 PM

ಸುದ್ದಿವಿಜಯ, ಬೆಂಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ತೂಕ ಒಂದೆಡೆಯಾದರೆ, ಮತದಾನ ಮುಗಿದ ತಕ್ಷಣ ಬರುವ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ತೂಕವೇ ಮತ್ತೊಂದು. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿ ಸಿಕ್ಕಿಬಿಡುತ್ತದೆ.

ಕರ್ನಾಟಕದಲ್ಲಿ 16ನೇ ಅಸೆಂಬ್ಲಿಗೆ ಚುನಾವಣೆ ಇಂದು, ಮೇ 10ರಂದು ನಡೆಯುತ್ತಿದ್ದು, ಮೇ 13ರ ಶನಿವಾರದಂದು ಫಲಿತಾಂಶ ಹೊರಬೀಳಲಿದೆ. 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯದ ಜನತೆ ನೋಡಬೇಕಾಯಿತು.

ಈ ಬಾರಿಯೂ ಅದೇ ಸ್ಥಿತಿ ನಿರ್ಮಾಣವಾಗುವುದಾ ಅಥವಾ ಒಂದೇ ಪಕ್ಷಕ್ಕೆ ಅಧಿಕಾರವನ್ನು ಕರ್ನಾಟಕದ ಜನತೆ ದಯಪಾಲಿಸುತ್ತಾರಾ ಎಂಬ ಸಂಗತಿ, ಮೇ 13ರ ಫಲಿತಾಂಶದ ದಿನದಂದು ಅಲ್ಲ, ಇಂದೇ ಮೇ 10ರ ಸಂಜೆ 6 ಗಂಟೆಯ ನಂತರ ತಿಳಿದುಬರಲಿದೆ. ಬೆಳಿಗ್ಗೆ 7ಕ್ಕೆ ಆರಂಭವಾಗಿರುವ ಮತದಾನ ಸಂಜೆ 6ಕ್ಕೆ ಕೊನೆಗೊಳ್ಳಲಿದೆ.

ಚುನಾವಣೋತ್ತರ ಸಮೀಕ್ಷೆಗೆ ಯಾಕೆ ಇಷ್ಟು ಮಹತ್ವ?

ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆಗಳಿಗೆ ಯಾಕೆ ಇಷ್ಟು ಮಹತ್ವವೆಂದರೆ, ಕೆಲವೊಂದು ಸಮೀಕ್ಷೆಗಳು ಅತ್ತಿತ್ತ ಆದರೂ, ಪಕ್ಷಗಳು ಗಳಿಸಲಿರುವ ಸಂಖ್ಯೆಗಳು ಸ್ವಲ್ಪ ಆಚೆ ಈಚೆ ಆದರೂ ಬಹುತೇಕ ಸಮೀಕ್ಷೆಗಳು ನಿಖರವಾಗಿರುತ್ತವೆ. ಚುನಾವಣೋತ್ತರ ಸಮೀಕ್ಷೆ ತೀರ ಉಲ್ಟಾಪಲ್ಟಾ ಆಗಿದ್ದು ಕಡಿಮೆಯೆಂದೇ ಹೇಳಬಹುದು.

ಹಲವಾರು ಏಜೆನ್ಸಿಗಳು ಮಾಧ್ಯಮ ಸಂಸ್ಥೆಗಳ ಜೊತೆ ಕೈಜೋಡಿಸಿ ಈಗಾಗಲೆ ಚುನಾವಣಾಪೂರ್ವ ಸಮೀಕ್ಷೆಗಳನ್ನು ನಡೆಸಿವೆ. ಆದರೆ, ಈ ಸಮೀಕ್ಷೆಗಳು ಮತದಾರರಲ್ಲಿ ಮತ್ತಷ್ಟು ಗೊಂದಲಗಳನ್ನು ಮೂಡಿಸಿವೆ. ಕೆಲವೊಂದು ಕಾಂಗ್ರೆಸ್ ಪರವಾಗಿದ್ದರೆ, ಕೆಲವೊಂದು ಬಿಜೆಪಿ ಪರ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಗೊಂದಲಕ್ಕೆ ತೆರೆ ಎಳೆಯಲಿವೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುತ್ತವೆ ಮತ್ತು ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಯಾರ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರಗಳು ಶುರುವಾಗುತ್ತವೆ. ರೆಸಾರ್ಟ್ ರಾಜಕೀಯ, ಕುದುರೆ ವ್ಯಾಪಾರ, ಕಿಂಗ್ ಮೇಕರ್ ಗಳಿಗೆ ಭರ್ಜರಿ ಬೇಡಿಕೆ ಇತ್ಯಾದಿ ಚಟುವಟಿಕೆಗಳು ಗರಿಗೆದರುತ್ತವೆ. ಹೆಚ್ಚು ಸ್ಥಾನ ಗಳಿಸಿದ ಪಕ್ಷದ ಒಬ್ಬೇ ಒಬ್ಬ ಶಾಸಕನೂ ಸಂಪರ್ಕಕ್ಕೆ ಸಿಗುವುದಿಲ್ಲ.

ಅಥವಾ ಇಂಥ ಪಕ್ಷಕ್ಕೆ ಬಹುಮತ ದೊರೆಯುತ್ತದೆ ಎಂಬ ಸೂಚನೆ ಈ ಎಕ್ಸಿಟ್ ಪೋಲ್ ನಲ್ಲಿ ಸಿಕ್ಕ ಕೂಡಲೆ, ಯಾರು ಮುಖ್ಯಮಂತ್ರಿಯಾಗಬೇಕು, ಯಾರ್ಯಾರು ಸಂಪುಟ ಸೇರಬೇಕು, ಯಾರಿಗೆ ಯಾವ ಖಾತೆ ಸಿಗಬೇಕು ಇತ್ಯಾದಿಗಳ ಚರ್ಚೆ ಶುರುವಾಗುತ್ತದೆ. ಜೊತೆಗೆ, ಬಟ್ಟೆ ವ್ಯಾಪಾರಿಗಳಿಗೆ ಭರ್ಜರಿ ಬೇಡಿಕೆ. ಜುಬ್ಬಾ, ಪಂಚೆ, ಸೂಟು ಬೂಟು… ಯಾರಿಗುಂಟು ಯಾರಿಗಿಲ್ಲ?

ಕಳೆದ ಚುನಾವಣೆಯಲ್ಲಿ ಏನಾಗಿತ್ತು?

2018ರಲ್ಲಿ ನಡೆದಿದ್ದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶದ ಪ್ರಕಾರ, ಟೈಮ್ಸ್ ನೌ-ಟುಡೇಸ್ ಚಾಣಕ್ಯ ನೀಡಿದ ಸಮೀಕ್ಷೆ ಮಾತ್ರ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಅಂತ ಹೇಳಿತ್ತು. ಉಳಿದೆಲ್ಲ ಸಿವೋಟರ್, ವಿಎಂಆರ್, ಆಕ್ಸಿಸ್ ಮೈ ಇಂಡಿಯಾ ಮುಂತಾದ ಏಜೆನ್ಸಿಗಳು ನಡೆಸಿದ ಸಮೀಕ್ಷೆ ಅತ್ಯಂತ ನಿಖರವಾಗಿದ್ದವು ಮತ್ತು ಅತಂತ್ರ ಸ್ಥಿತಿಯೇ ನಿರ್ಮಾಣವಾಗಿತ್ತು.

ಈ ಬಾರಿ ಏನಾಗುವುದು? ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಬಹುಮತವೋ ಅಥವಾ ಅತಂತ್ರ ಸ್ಥಿತಿ ನಿರ್ಮಾಣವಾಗಿ ಜೆಡಿಎಸ್ ಕಿಂಗ್ ಮೇಕರ್ ಆಗುವುದೋ? ಅಥವಾ ಆಪ್ ನಂಥ ಪಕ್ಷ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಜಯಭೇರಿ ಬಾರಿಸುವುದೋ? ಸಂಜೆ 6 ಗಂಟೆಯ ನಂತರ ತಿಳಿಯಲಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!