ಸುದ್ದಿವಿಜಯ, ಜಗಳೂರು: ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಗತಿಕರಿಗೆ ಮತ್ತು ವಸತಿ ರಹಿತರಿಗೆ ಹಂಚಿಕೆ ಮಾಡಿ. ಹಣಕ್ಕಾಗಿ ಮನೆ ಮಾರಾಟ ಮಾಡಿಕೊಂಡರೆ ಅಂತಹವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳುತ್ತೇವೆ ಎಂದು ಶಾಸಕ ಎಸ್.ವಿ ರಾಮಚಂದ್ರ ಎಚ್ಚರಿಕೆ ನೀಡಿದರು.
ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಸವ ವಸತಿ 647, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ 213, ಅಲೆ ಮಾರಿ ಜನಾಂಗಕ್ಕೂ 1743 ಮನೆಗಳು ಮಂಜೂರಾಗಿದ್ದು, ಕಾಮಗಾರಿ ಆದೇಶ ಪ್ರತಿಗಳನ್ನು ನೀಡಲಾಗುವುದು.
ಹೆಚ್ಚುವರಿಯಾಗಿ ಪ್ರತಿ ಗ್ರಾ.ಪಂ ಗೂ ತಲಾ 60 ಮನೆಗಳನ್ನು ಕೊಡಲಾಗುವುದು. ಇದರಲ್ಲಿ ಸಾಮಾನ್ಯ ವರ್ಗ 30 ಮೀಸಲಿಟ್ಟು ಉಳಿದ ಮನೆಗಳನ್ನು ಎಸ್ಸಿ,ಎಸ್ಟಿ, ವಿಧವೆ, ದೇವದಾಸಿಯರಿಗೆ ಹಂಚಿಕೆ ಮಾಡುವಂತೆ ಪಿಡಿಗಳಿಗೆ ಶಾಸಕರು ಸೂಚನೆ ನೀಡಿದರು.
ಮನೆ ಹಂಚಿಕೆ ಮಾಡುವ ಮೊದಲು ಗ್ರಾಮ ಸಭೆ, ವಾರ್ಡ್ ಸಭೆ ನಡೆಸಿ ಜನರಿಂದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು, ಯಾರಿಂದಲೂ ಒಂದು ನಯಪೈಸೆ ಹಣ ಪಡೆಯದೇ ಕೊಡಬೇಕು, ಅವರಿಂದ ಹಣ ಪಡೆದಿದ್ದು ದೂರು ಬಂದರೆ ಮುಲಾಜಿಲ್ಲದೇ ಶಿಸ್ತುಕ್ರಮಕ್ಕೆ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಕೆಲಸ ಮಾಡದವರು ಮನೆಗೆ ಹೋಗಿ:
ಜಿ.ಪಂ ಸಿಇಒ ಡಾ. ಚನ್ನಪ್ಪ ಮಾತನಾಡಿ, ತಾಲೂಕಿನ ಗ್ರಾ.ಪಂಗಳಲ್ಲಿ ಪಿಡಿಒಗಳ ಕೊರತೆ ಇದೆ, ಹಾಗಾಗಿ ಒಬ್ಬೊಬ್ಬರಿಗೆ ಎರಡ್ಮೂರು ಪಂಚಾಯಿತಿಗಳ ಅಧಿಕಾರ ನೀಡಿದೆ. ಪ್ರತಿ ಹಳ್ಳಿಗಳ ಸಂಪೂರ್ಣ ಮಾಹಿತಿ ಬಿಲ್‍ಕಲೆಕ್ಟರ್ ಮತ್ತು ಡಾಟ ಎಂಟ್ರಿ ಆಪರೇಟರ್‍ಗೆ ಗೊತ್ತಿರುತ್ತದೆ. ಹಾಗಾಗಿ ಇನ್ನು ಮುಂದೆ ನಿತ್ಯ 5ಗಂಟೆಯವರೆಗೂ ಪಂಚಾಯಿತಿಯಲ್ಲಿದ್ದು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮಗಳಲ್ಲಿ ಮನೆಗಳೆಷ್ಟಿವೆ, ಶೌಚಗೃಹಳೆಷ್ಟು ಎಂಬುವುದರ ಬಗ್ಗೆ ಮನೆ ಮನೆ ಸರ್ವೇ ಮಾಡಿದ್ದರೂ ತಪ್ಪು ಮಾಹಿತಿ ನೀಡಿರುವುದು ಎಷ್ಟು ಸರಿ, ಈ ಎಲ್ಲಾ ವರದಿಗಳನ್ನು ನೋಡಿದರೆ ತಮ್ಮ ಮೇಲೆ ಅನುಮಾನ ಮೂಡುತ್ತದೆ, ಪಂಚಾಯಿತಿ ವ್ಯಾಪ್ತಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸಾದ್ಯವಾಗಿಲ್ಲವೆಂದರೆ ಏನ್ ಕೆಲಸ ಮಾಡುತ್ತೀರಾ, ನಿಮ್ಮನ್ನು ಯಾವಾಗಬೇಕಾದರೂ ತೆಗೆದಾಕುವ ಅಧಿಕಾರವಿದೆ ಎಚ್ಚರವಹಿಸಿ ಕೆಲಸ ಮಾಡಿದರೆ ಸರಿ ಇಲ್ಲವೆ ದಂಡನೆ ಅನುಭವಿಸುವುದು ಸತ್ಯ ಎಂದು ಸಿಇಒ ಎಚ್ಚರಿಕೆ ನೀಡಿದರು.
ಸಿಇಒ ಗರಂ:
ಜಗಳೂರು ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ ಎಂಬುವುದರ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಇಂಜಿನಿಯರ್‍ಗಳಿಗೆ ಮಾಹಿತಿ ಇಲ್ಲ. ಇವರು ಹೇಗೆ ಕೆರೆ ಸಂರಕ್ಷಣೆ ಮಾಡುತ್ತಾರೆ, ಬಹುತೇಕ ಕೆರೆಗಳು ಒತ್ತುವರಿಯಾಗಿವೆ, ಕೆಲವು ಹಾಳಾಗಿವೆ, ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಆಯೋಜಿಸುವಂತೆ ಅಧಿಕಾರಿಗೆ ತಾಕೀತು ಮಾಡಿದರು.
ಸಹಾಯಕ ಇಂಜಿನಿಯರ್‍ಗಳಿಗೆ ತರಾಟೆ:
ನರೇಗಾ ಯೋಜನೆಯ ಸಹಾಯಕ ಇಂಜಿನಿಯರ್‍ಗಳು ನೀಡಿರುವ ಟಾರ್ಗೇಟ್ ತಲುಪುವಲ್ಲಿ ವಿಫಲರಾಗಿದ್ದು, ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವೇ ಬಿಟ್ಟು ಹೋಗಿ, ಅನೇಕ ಯುವಕರು ಕೆಲಸಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ, ಕೊನೆ ಅವಕಾಶ ಕೊಟ್ಟಿದ್ದೇನೆ ಎಚ್ಚರವಹಿಸಿ ಕೆಲಸ ಮಾಡಿ ಎಂದು ಸಿಇಒ ತರಾಟೆಗೆ ತೆಗೆದುಕೊಂಡರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮಾತನಾಡಿ, ತಾಲೂಕಿನ ದೊಣೆಹಳ್ಳಿ, ದಿದ್ದಿಗಿ, ದೇವಿಕೆರೆ, ಅಣಬೂರು, ಸೊಕ್ಕೆ, ಬಸವನಕೋಟೆ, ಮುಸ್ಟೂರು ಗ್ರಾ.ಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಳಿಸದೇ ಮೀನಾಮೇಷ ಎಣಿಸುತ್ತಿದ್ದಾರೆ, ಕೂಡಲೇ ಎರಡು ತಿಂಗಳೊಳಗೆ ಉದ್ಘಾಟಿಸಿಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಲಕ್ಷ್ಮೀಪತಿ, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ನರೇಗಾ ಎಡಿ ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು.