ಸುದ್ದಿವಿಜಯ, ಜಗಳೂರು: ದೆಹಲಿ, ಪಂಜಾಬ್‍ನಲ್ಲಿ ಅಧಿಕಾರ ಹಿಡಿದಿರುವ ಆಪ್ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯುವ ಮತದಾರರು ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷ ಕಟ್ಟಲು ಸ್ವಯಂ ಸೇವಕರಾಗಿ ಬರುತ್ತಿದ್ದಾರೆ ಎಂದು ಎಎಪಿ ಮುಖಂಡ ಹಾಗೂ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಗೋವಿಂದರಾಜು ಹೇಳಿದರು.
ಇಲ್ಲಿನ ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಮುಖಂಡರ ಜಿಲ್ಲಾ ಮಟ್ಟದ ಸಭೆ ಮತ್ತು ಬೈಕ್ ರ್ಯಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ದಿಯ ಪರ್ವ ಶುರುವಾಗಬೇಕಾದರೆ ಮುಂಬರುವ ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷ ಅಧಿಕಾರಕ್ಕೆ ತರಲು ವೇದಿಕೆ ಸಿದ್ದವಾಗಿದೆ ಎಂದು ಎಎಪಿ ಮುಖಂಡ ಗೋವಿಂದ್‍ರಾಜ್ ಹೇಳಿದರು.
ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಜನರ ನಿರೀಕ್ಷೆಯಂತೆ ಆಡಳಿತ ನಡೆಸದೇ ಭ್ರಷ್ಟಚಾರದ ಮೂಲಕ ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ಆರ್ಥಿಕ ದಿವಾಳಿತನವಾಗಿದೆ. ಈಗಲೂ ಕೂಡ ರೈತರು ನೆಮ್ಮದಿಯಿಂದ ಬದುಕಲು ಸಾದ್ಯವಾಗುತ್ತಿಲ್ಲ.
ಬೆಳೆದ ಬೆಳೆಗಳಿಗೆ ಉತ್ತಮ ಲಾಭ ಸಿಗದೇ ಅನೇಕ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ಮತ ಹಾಕುವ ಮುನ್ನ ಒಮ್ಮೆ ಆಲೋಚಿಸಿ ಭ್ರಷ್ಟಮುಕ್ತ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಎಎಪಿ ಪಕ್ಷದ ಸಂಘಟನೆಯೂ ತಳಮಟ್ಟದಿಂದ ನಡೆಯುತ್ತಿದ್ದು ಸಾವಿರಾರು ಜನರು ಪಕ್ಷಕ್ಕೆ ನೋಂದಾಣಿ ಮಾಡಿಕೊಂಡಿದ್ದಾರೆ. ಅನೇಕ ಮುಖಂಡರು ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಎಎಪಿ ಸೇರುತ್ತಿದ್ದಾರೆ. ಮುಂದೊಂದು ದಿನ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾರ್ಯಕ್ರಮಕ್ಕೂ ಮುನ್ನ ಎಎಪಿ ಪಕ್ಷದ ಕಚೇರಿಯಿಂದ ಬಾಬು ರಾಜೇಂದ್ರ ಪ್ರಸಾದ್, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ನೆಹರು ರಸ್ತೆ, ಭುವನೇಶ್ವರಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಲಾಯಿತು.
ತಾಲೂಕು ಎಎಪಿ ಪ್ರಧಾನ ಕಾರ್ಯದರ್ಶಿ ಕಲ್ಲೇಶ್ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕೆಜ್ರಿವಾಲ್ ಮಾಡಿರುವ ಅಭಿವೃದ್ಧಿ ಕೆಲಸಗಳು ಇಡೀ ದೇಶಕ್ಕೆ ಮಾದರಿ. ಯುವಜನತೆ ಎಎಪಿ ಕಡೆ ವಾಲುತ್ತಿರುವುದು ನೋಡಿದರೆ ನಿಜಕ್ಕೂ ಎಎಪಿಗೆ ದೊಡ್ಡ ಮಟ್ಟದ ಜನ ಬೆಂಬಲ ವ್ಯಕ್ತವಾಗುತ್ತದೆ. ಫೆ.25ಕ್ಕೆ ಎಲ್ಲಾ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳು ಮತ್ತು ಬೃಹತ್ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಎಎಪಿ ರಾಜ್ಯ ವೀಕ್ಷಕ ಗುರುಮೂರ್ತಿ, ಜಿಲ್ಲಾ ವೀಕ್ಷಕ ರವೀಂದ್ರ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹರೀಶ್, ತಾಲೂಕು ಉಸ್ತುವಾರಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಿ.ಟಿ ಕಲ್ಲೇಶ್, ತಾಲೂಕು ಮಹಿಳಾ ಅಧ್ಯಕ್ಷ ಗುರು ಶಾಂತಮ್ಮ, ಮಹಿಳಾ ಪ್ರದಾನ ಕಾರ್ಯದರ್ಶಿ ಶೋಭಾ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ, ಯುವ ಘಟಕ ಸತೀಶ್ ಸೇರಿದಂತೆ ಮತ್ತಿತರಿದ್ದರು.