ಸುದ್ದಿವಿಜಯ, ಜಗಳೂರು: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡರು ಪಟ್ಟಣದ ಮಹಾತ್ಮಾಗಾಂಧಿ ಬಸ್ ನಿಲ್ದಾಣದಲ್ಲಿ ಶನಿವಾರ ಕಸ ಗುಡಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜಗಳೂರು ವಿಧಾನಸಭೆ ಟಿಕೆಟ್ ಆಕಾಂಕ್ಷಿ ಗೋವಿಂದ ರಾಜು ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಪೊರಕೆಯೊಂದೇ ಪರಿಹಾರವಾಗಿದೆ. ನಮ್ಮ ಸಿದ್ಧಾಂತ ಸಮಾಜದಲ್ಲಿ ವ್ಯಾಪಕವಾಗಿರುವ ಹಬ್ಬಿರುವ ಭ್ರಷ್ಟಾಚಾರಕ್ಕೆ ನಮ್ಮನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳೇ ಕಾರಣ. ಅವರು ಮಾಡಿರುವ ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಕಾರ್ಯಕರ್ತರು ಪಣ ತೊಟ್ಟಿದ್ದಾರೆ.
ಹೀಗಾಗಿ ಇದು ಕೇವಲ ಸ್ವಚ್ಛತೆಯ ಮಾನದಂಡವಲ್ಲ. ಸಮಾಜದಲ್ಲಿ ಅಂಟಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಸಾವಿರಾರು ಎಎಪಿ ಕಾರ್ಯಕರ್ತರು ತೊಟ್ಟಿರುವ ಪಣ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಬೆಂಬಲಿಸಿದರೆ ಸಮಾಜ ಶುದ್ಧವಾಗಿರುತ್ತದೆ ಎಂಬುದು ಇದರ ಪ್ರತೀಕವಾಗಿದೆ ಎಂದರು.
ಜಿಲ್ಲಾ ಆಪ್ ಅಧ್ಯಕ್ಷ ಚಂದ್ರುಬಸವಂತಪ್ಪ, ಮಾತನಾಡಿ, ಕರ್ನಾಟಕದಲ್ಲಿ ಎಎಪಿಯಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪೊರಕೆ ಪರಿಹಾರ ಹಮ್ಮಿಕೊಂಡಿದ್ದೇವೆ. ಹಾಗೆ ಜಗಳೂರಿನಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸದ ಭ್ರಷ್ಟ ಸರಕಾರ ಮತ್ತು ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟವಾಗಿದೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ವ್ಯವಸ್ಥೆ ಸ್ವಚ್ಛವಾಗಬೇಕಾದರೆ ಎಎಪಿ ಇಂದ ಸಾಧ್ಯ. ಈಗಾಗಲೇ ಪಂಜಾಬ್, ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ವ್ಯವಸ್ಥೆ ಹಳಿಗೆ ತರಲು ಶ್ರಮಿಸುತ್ತಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬರುವ ಮಾ.4 ರಂದು ಅರವಿಂದ್ ಕೇಜ್ರಿವಾಲ್ ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟದ ಕಾರ್ಯಕರ್ತರು ಅಧ್ಯಕ್ಷರು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪೊರಕೆ ಪರಿಹಾರ ಕಾರ್ಯಕ್ರಮದಲ್ಲಿ ತಾಲೂಕು ಎಎಪಿ ಪ್ರಧಾನ ಕಾರ್ಯದರ್ಶಿ ಕಲ್ಲೇಶ್, ತಾಲೂಕು ಅಧ್ಯಕ್ಷ ನಾಗರಾಜ್, ಅಲ್ಪ ಸಂಖ್ಯಾತ ಘಟದ ಅಧ್ಯಕ್ಷರಾದ ಇಬ್ರಾಹಿಂ ಸೇರಿ 100ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.