ಸುದ್ದಿವಿಜಯ, ಜಗಳೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮಾಡಿರುವ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮತದಾರರ ಜಾಗೃತಿಗಾಗಿ ಎಎಪಿ ಪಕ್ಷದಿಂದ ಫೆ.25 ರಂದು ಶನಿವಾರ ಪಟ್ಟಣದ ಬಸ್‍ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರಿಂದ ಪೊರಕೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಆಕಾಂಕ್ಷಿ ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಸಿಕೆರೆ ಹೋಬಳಿಯ 78 ಹಳ್ಳಿಗಳ ಸ್ಥಿತಿ ಹೀನಾಯವಾಗಿದೆ. ವೋಟ್ ಬ್ಯಾಂಕ್ ಮಾಡಿಕೊಂಡಿರುವ ಜನಪ್ರತಿನಿಧಿಗಳು ಅಲ್ಲಿನ ದರಿದ್ರ ವ್ಯವಸ್ಥೆಯ ಬಗ್ಗೆ ಮಾತನಾಡುವುದಿಲ್ಲ. ನೀರಿಲ್ಲ, ಸೂರಿಲ್ಲ, ಶುದ್ಧಕುಡಿಯುವ ನೀರಿಗೂ ಅಲ್ಲಿನ ಜನ ಪರದಾಡುತ್ತಿದ್ದಾರೆ.
ರಸ್ತೆಗಳೆಲ್ಲವೂ ಕಿತ್ತುಹೋಗಿವೆ. ವಿದ್ಯುತ್ ಇಲ್ಲದ ಕೆಟ್ಟ ಪರಿಸ್ಥಿತಿಯಿದೆ. ನೈರ್ಮಲ್ಯ ಮರೀಚಿಕೆಯಾಗಿದೆ. ದೀನ ದಲಿತರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಶೇ.40 ಪರ್ಸೆಂಟೇಜ್ ತೆಗೆದುಕೊಂಡು ಅವರನ್ನು ಕಡೆಗಣಿಸಿ ಅವರ ಅಭಿವೃದ್ಧಿ ಹೆಸರಲ್ಲಿ ಲೂಟಿ ಹೊಡೆಯಲಾಗಿದೆ. ಅರಸಿಕೆರೆ ಹೋಬಳಿಗೆ ಸೇರಿದ ಪುಣಭಗಟ್ಟ, ಉಚ್ಚಂಗಿದುರ್ಗ, ಅರಸಿಕೆರೆ, ಅಣಜೀಗೆರೆ ಸೇರಿ ಎಲ್ಲ ಏಳು ಗ್ರಾಪಂಗಳ ಸ್ಥಿತಿ ಅಯೋಮಯವಾಗಿದೆ.
ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮೂಲ ಸೌಕರ್ಯಗಳ ಕೊರತೆಯಿಂದ ನಲುಗಿರುವ ಗ್ರಾಮಗಳಿಗೆ ಸರಕಾರದಿಂದ ಸರಿಯಾದ ಅನುದಾನ ಬಿಡುಗಡೆಯಾಗಿಲ್ಲ ಎಂದು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವ್ಯವಸ್ಥೆ ಬದಲಾಗಬೇಕು ಎನ್ನುವ ಕಾರಣಕ್ಕೆ ಎಎಪಿ ಸೈದ್ಧಾಂತಿಕವಾಗಿ ಚುನಾವಣೆಗೆ ತಯಾರಾಗುತ್ತಿದ್ದೇವೆ. ನಾವು ಸೋಲಲಿ ಅಥವಾ ಗೆಲ್ಲಲಿ ನಾವು ಕ್ಷೇತ್ರದಲ್ಲಿ ಇದ್ದು ನಮ್ಮ ಹೋರಾಟವನ್ನು ನಿರಂತರವಾಗಿ ನಡೆಸುತ್ತೇವೆ. ನಮಗೊಂದು ಅವಕಾಶವನ್ನು ಕೇಳುತ್ತೇವೆ. ನಮ್ಮ ಕ್ಷೇತ್ರದಲ್ಲಿ ಸಾವಿರ ಕಾರ್ಯಕರ್ತರು ಸ್ವಯುಂ ಪ್ರೇರಿತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಉದ್ದೇಶ ಪಾರದರ್ಶಕವಾಗಿದೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಕಲ್ಲೇಶ್ ಮಾತನಾಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ಅಹಿಂದ ವರ್ಗವನ್ನು ಅರಸಿಕೆರೆ ಹೋಬಳಿಯ ಅನೇಕ ಹಳ್ಳಿಗಳಲ್ಲಿ ಸತ್ತುಬದುಕಿರುವ ಸ್ಥಿತಿ ನಿರ್ಮಾಣವಾಗಿದೆ. ಶಾಸಕ ಎಸ್.ವಿ.ರಾಮಚಂದ್ರ ಅವರು ಯಾವ ಜನಾಂಗದವರನ್ನು ಮುಂದೆ ತಂದಿಲ್ಲ. ಹಾಹಾಕಾರವಿದೆ, ಜನರನ್ನು ವೋಟ್ ಬ್ಯಾಂಕ್‍ಗಾಗಿ ಬಳಸಿಕೊಳ್ಳಲಾಗುತ್ತಿದೆ.
ಗ್ರಾಮೀಣ ಸಾರಿಗೆ ವ್ಯವಸ್ಥೆ ಜೊತೆಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ದೆಹಲಿಯ ಮಾದರಿಯ ಅಭಿವೃದ್ಧಿಯ ಕನಸನ್ನು ನಾವು ಕಂಡಿದ್ದೇವೆ. ಸಹಕಾರ ಮಾಡಲು ಪಣತೊಟ್ಟಿದ್ದೇವೆ. ಜನರು ಆಪ್ ಮೂಲಕ ಜನರ ಭರವಸೆಗಳನ್ನು ಈಡೇರುತ್ತೇವೆ. ಈ ಬಾರಿ ಅಭ್ಯರ್ಥಿ ಗೋವಿಂದರಾಜು ಅವರನ್ನು ಜನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಎಎಪಿ ತಾಲೂಕು ಘಟಕದ ಅಧ್ಯಕ್ಷ ಚಿಕ್ಕಅರಕೆರೆ ನಾಗರಾಜ್, ಎಎಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಬ್ರಾಹಿಂ ಇದ್ದರು.
ದಾವಣಗೆರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಬರುವ ಮಾರ್ಚ್ 4 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆ ನಗರದಲ್ಲಿ ನಡೆಯಲಿರುವ ಎಎಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಪಂಜಾಬ್ ಸಿಎಂ ಭಗವಾನ್ ಮಾನ್, ರಾಜ್ಯ ಎಎಪಿ ಅಧ್ಯಕ್ಷ ಪೃಥ್ವಿರೆಡ್ಡಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್‍ರಾವ್, ಕಾರ್ಯಾಧ್ಯಕ್ಷ ಜಾಫರ್ ಮೋಹಿದ್ದೀನ್, ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ರಾಜ್ಯಮಟ್ಟದ ದೊಡ್ಡ ದೊಡ್ಡ ನಾಯಕರು ಭಾಗವಹಿಸಲಿದ್ದಾರೆ. ಅಂದು ಬ್ಲಾಕ್ ಮಟ್ಟದ ಅಧ್ಯಕ್ಷರಿಗೆ ಪಕ್ಷದ ಸಿದ್ಧಾಂತದ ಪ್ರತಿಜ್ಞಾವಿಧಿಯನ್ನು ಸಿಎಂ ಕೇಜ್ರಿವಾಲ್ ಬೋಧಿಸಲಿದ್ದಾರೆ ಎಂದರು.