ಸುದ್ದಿಲೋಕ, ಜಗಳೂರು: ತರಳಬಾಳು ಹುಣ್ಣಿಮೆ ಆರಂಭದ ದಿನವಾದ ಜ.28 ರಂದು ಉಜ್ಜಿನಿ ಸಮೀಪದ ಕಾಳಾಪುರದಲ್ಲಿ ನಡೆದ ಅಹಿತರ ಘಟನೆಯ ಆರೋಪಿಗಳನ್ನು ಪತ್ತೆಹಚ್ಚಲು ಆಗಮಿಸಿದ್ದ ಹೊಸಪೇಟೆಯ ಹಂಪಿ ಪೊಲೀಸ್ ಠಾಣೆಯ ಎಎಸ್‍ಐ ಶಬೀರ್ ಹುಸೇನ್ (59) ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ನಡೆದ ಅಪಘಾತದಿಂದ ನಿಧನರಾಗಿದ್ದಾರೆ.
ಘಟನೆ ವಿವರ: ಕಾಳಾಪುರದ ಅಹಿತರ ಘಟನೆಯ ಆರೋಪಿಗಳ ವಿಡಿಯೋ ಆಧರಿಸಿ ಗುರುತು ಪತ್ತೆಹಚ್ಚಲು ಆಗಮಿಸಿದ್ದ ಅವರು ಕಾಳಾಪುರ, ಉಜ್ಜಿನಿ, ಕೊಟ್ಟೂರು, ಜಗಳೂರು ವಿವಿಧ ಹಳ್ಳಿಗಳಲ್ಲಿ ಅಡಗಿರುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಬೆಳ್ಳಂಬೆಳಿಗ್ಗೆ ರೌಂಡ್ಸ್ ಬಂದಿದ್ದ ಎಎಸ್‍ಐ ಎಂ.ಶಬೀರ್ ಹುಸೇನ್ ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪಟ್ಟಣದ ಚಿನ್ನು ಡಾಬಾ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾರನ್ನು ಓವರ್ ಟೇಕ್ ಮಾಡಿಕೊಂಡು ಎದುರಿಗೆ ಬಂದ ಮತ್ತೊಂದು ಬೈಕ್ ಶಬೀರ್ ಹುಸೇನ್ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ತಲೆಗೆ ಬಲವಾದ ಏಟು ಬಿದ್ದು ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಮೂಲತ ಹೊಸಪೇಟೆಯ ಎಸ್‍ಆರ್‍ನಗರದ ಛಲವಾದಿ ಕೇರಿಯಲ್ಲಿ ನೆಲಸಿದ್ದ ಅವರು ಹಂಪಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತೊಂದು ಬೈಕ್‍ನಲ್ಲಿದ್ದ ಸವಾರನಿಗೆ ಕೈ ಮೂಳೆ ಮುರಿದಿದ್ದು ಕಣ್ಣುಗಳಿಗೆ ಬಲವಾದ ಹೊಡೆತ ಬಿದ್ದಿದೆ. ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ: ಅವರ ಮೃತದೇಹನ್ನು ಜಗಳೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಸ್ಥಳಕ್ಕೆ ಜಗಳೂರು ಪಿಐ ಎಂ.ಶ್ರೀನಿವಾಸ್, ಹಂಪಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಅಪಘಾತ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಬೀರ್ ಹುಸೇನ್ ಅವರಿಗೆ ಮೂರು ಜನ ಹೆಣ್ಣುಮಕ್ಕಳಿದ್ದು ಆಕ್ರಂದನ ಮುಗಿಲು ಮುಟ್ಟಿತ್ತು.