ಸುದ್ದಿವಿಜಯ, ಜಗಳೂರು: ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿ ಮಿಥುನ್ ಕೀಮಾವತ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಈ ಹಿಂದೆ ಇದೇ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ವಿ.ಶ್ರೀನಿವಾಸುಲು ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಿಥುನ್ ಅವರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ರೈತರಿಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ತಲುಪಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಕೃಷಿ ಅಧಿಕಾರಿಗಳಾದ ಕೃಷ್ಣಪ್ಪ, ಹರ್ಷ, ಗಿರೀಶ್, ಜೀವಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಿಥುನ್ ಕೀಮಾವತ್ ಕಿರು ಪರಿಚಯ:
ನೂತನವಾಗಿ ಸಹಾಯಕ ಕೃಷಿ ನಿರ್ದೇಶಕರಾಗಿರುವ ಮಿಥುನ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲೂಕಿನ, ಬಬ್ಬರೂ ಗ್ರಾಮದವರು. ಬಬ್ಬೂರು ಕೃಷಿ ಫಾರ್ಮ್ ಕರ್ನಾಟಕಕ್ಕೆ ಹೆಸರುವಾಸಿಯಾಗಿದೆ. ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಅವರಿಗೆ ಬಿಎಸ್‌ಸಿ ಅಗ್ರಿ ಓದಬೇಕು ಎನ್ನುವ ಮಹಾದಾಸೆ ಹೊಂದಿ ರೈತರ ಅಭ್ಯುದಯಕ್ಕೆ ಶ್ರಮಿಸುವ ಕನಸು ಹೊತ್ತು ಶಿವಮೊಗ್ಗದ ನವಿಲೆ ಸಮೀಪದ ಕೃಷಿ ಕಾಲೇಜಿನಲ್ಲಿ ಬಿಎಸ್‌ಸಿ ಅಗ್ರಿ ಮುಗಿಸಿದರು.
ಬಿಎಸ್‌ಸಿ ಅಗ್ರಿ ಪದವಿ ನಂತರ ಸರಕಾರಿ ಅಧಿಕಾರಿಯಾಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ತಾಂತ್ರಿಕ ಕೃಷಿ ಅಧಿಕಾರಿಯಾಗಿ ಮತ್ತು ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಾಗಿ ದೇವರಹಳ್ಳಿ ಮತ್ತು ಬಸವಪಟ್ಟಣದಲ್ಲೂ ಕಾರ್ಯನಿರ್ವಹಿಸಿದ್ದರು.
ಮುಂಬಡ್ತಿಯಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದ ಮಿಥುನ್ ಅವರನ್ನು ಪ್ರಸ್ತುತ ಜಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.