ಜಗಳೂರು: ಕೃಷಿಯಲ್ಲಿ ಅದ್ವಿತೀಯ ಸಾಧನೆ ಗೈದ ಪಪಂ ಸದಸ್ಯ ರಮೇಶ್ ಬಿ.ಕೆ. ಅವರ ಸಾಧನೆಯನ್ನು ನೋಡ ಬನ್ನಿ!

Suddivijaya
Suddivijaya January 21, 2023
Updated 2023/01/21 at 2:09 PM

ಸುದ್ದಿವಿಜಯ, ಜಗಳೂರು: (ವಿಶೇಷ)ಆ ರೈತನ ಹೊಲಕ್ಕೆ ಕಾಲಿಡುತ್ತಿದ್ದಂತೆ ಸಮತಟ್ಟಾಗಿ ಬೆಳೆದಿರುವ 47 ಎಕರೆ ಕಡಲೆ, 22 ಸಾವಿರ ಅಡಕೆ ಮರಗಳು, 300ಕ್ಕೂ ಹೆಚ್ಚು ಮಹಾಗನಿ ಮರಗಳು, ಅಡಕೆ ಮಧ್ಯೆ ಈಗಷ್ಟೇ ಚಿಗುರುತ್ತಿರುವ ಕಾಳು ಮೆಣಸು ಸಸಿಗಳು ಕೈ ಬೀಸಿ ಕರೆಯುತ್ತವೆ.

ಹೌದು, ಜಗಳೂರು ತಾಲೂಕಿನ ಜಮೀನುದಾರ ಎಂದೇ ಹೆಸರಾಗಿರುವ ರಮೇಶ್.ಬಿ.ಕೆ ಅವರದ್ದು ಒಟ್ಟು 80 ಎಕರೆ ಜಮೀನು. ಕೇವಲ ಒಬ್ಬರೇ ಅದನ್ನು ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ ಪಟ್ಟಣ ಪಂಚಾಯಿತಿ ಸದಸ್ಯರಾಗಿ ರಾಜಕಾರಣಿಯಾಗಿ ಅವರು ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರತಿನಿತ್ಯ 15 ರಿಂದ 20 ಜನ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ರೈತಾಪಿ ವರ್ಗದವರಿಗೆ ರಮೇಶ್ ಆಸರೆಯಾಗಿದ್ದಾರೆ.

‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬ ಸಂಸ್ಕøತ ಶ್ಲೋಕದಂತೆ ಅವರು ನಿತ್ಯ ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಸಮಗ್ರ ಕೃಷಿಯಿಂದ ಮಾತ್ರ ರೈತ ಅಭಿವೃದ್ಧಿ ಎಂದು ಮನಗಂಡಿರುವ ಅವರು ಕಾಯಕವೇ ಕೈಲಾಸ ಎಂದು ನಂಬಿದ್ದಾರೆ.

ಅಪ್ಪಟ ಬಯಲು ಸೀಮೆಯಾಗಿರುವ ಕೊಂಡು ಕುರಿ ನಾಡು ಜಗಳೂರು ತಾಲೂಕಿನಲ್ಲಿ 33 ಎಕರೆ ಅಡಕೆ ತೋಟ ನಿರ್ಮಾಣ ಮಾಡುವುದು ಸುಲಭ ಸಾಧ್ಯವಲ್ಲ. ಅದರಲ್ಲೂ ಸಂಪೂರ್ಣ ಸಾವಯವ ಕೃಷಿಯಲ್ಲಿ ಅವರುತೊಡಗಿಕೊಂಡಿದ್ದಾರೆ. ಕುರಿ, ಕೋಳಿ ಮತ್ತು ದನಗಳ ಗೊಬ್ಬರವನ್ನೇ ಅವರ ತೋಟಕ್ಕೆ ಬಳಸಿ ರಾಸಾಯನಿಕ ಗೊಬ್ಬರ ಮುಕ್ತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಎಫ್‍ಪಿಒ ಮೂಲಕ ಮೌಲ್ಯವರ್ಧನೆ, ಮಾರಾಟ: ಕಡಲೆ ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಕೊಂಡು ಎಕರೆಗೆ 10 ಕ್ವಿಂಟಾಲ್ ಕಡಲೆ ಬೆಳೆಯುವ ಪ್ರಗತಿಪರ ಕೃಷಿಕರು ಎಂದರೆ ಅದು ರಮೇಶ್. ಬೆಳೆದ ಬೆಳೆಗೆ ಅವರೇ ಮೌನ್ಯವರ್ಧನೆ ಮಾಡುವ ನಿಟ್ಟಿನಲ್ಲಿ 300 ಜನ ಶೇರುದಾರರನ್ನೊಳಗೊಂಡ ‘ಸಂಕ್ಷಣಾ’ ಕಡಲೆ ರೈತ ಉತ್ಪಾದಕರ ಕಂಪನಿ ಸ್ಥಾಪಿಸಿದ್ದಾರೆ.

ಅದರಲ್ಲೂ ಅನೇಕ ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ. ತಮ್ಮದೇ ರೆಡ್ಡಿ ಸಮುದಾಯದ ರೈತರ ಅಭಿವೃದ್ಧಿಗಾಗಿ ಕಮ್ಮವಾರಿ ಕ್ಷೇಮಾಭಿವೃದ್ಧಿ ಸಂಘ ಕಟ್ಟಲು ತೀರ್ಮಾನಿಸಿದ್ದಾರೆ.

ಅತಿಹೆಚ್ಚು ಈರುಳ್ಳಿ ಬೆಳೆಯುವ ರೈತ: ಪ್ರತಿ ವರ್ಷ ಮುಂಗಾರಿನಲ್ಲಿ 35 ರಿಂದ 40 ಎಕರೆ ಈರುಳ್ಳಿ ಬಿತ್ತನೆ ಮಾಡುತ್ತಾರೆ. ಪ್ರಸ್ತುತ ಬೇಸಿಗೆ ಅವಧಿಯಲ್ಲಿ 12 ಎಕರೆ ಈರುಳ್ಳಿ ಬಿತ್ತನೆ ಮಾಡಿ ಹನಿ ನೀರಾವರಿ ಮೂಲಕವೇ ಕಡಿಮೆ ಕಾರ್ಮಿಕರನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ಬೆಳೆಯುತ್ತಿದ್ದಾರೆ.

13 ಎಕರೆ ಎಳನೀರು ತೆಂಗು ಹಾಕುವ ಚಿಂತನೆಯಲ್ಲಿದ್ದು ಅದರ ಮಧ್ಯ ಅಂತರ ಬೆಳೆಯಾಗಿ ನಿಂಬೆ ಗಿಡಗಳನ್ನು ಹಾಕಲು ಭೂಮಿ ಸಿದ್ಧ ಪಡಿಸುತ್ತಿದ್ದಾರೆ. ಒಂದೂವರೆ ಎಕರೆಯಲ್ಲಿ ಪಪ್ಪಾಯ ಸಿಸಿಗಳು ಹಣ್ಣು ಬಿಡಲು ರೆಡಿಯಾಗಿವೆ.

ಅವರ ತೋಟ ನೆರಳಿನಲ್ಲಿ ಅಪರೂಪ ಜಾತಿಯ ಪುನುಗು ಬೆಕ್ಕುಗಳು, ವಿವಿಧ ರೀತಿಯ ಪಕ್ಷಿಗಳ ವಾಸಮಾಡುತ್ತಿರುವುದು ವಿಶೇಷ. ತೋಟದಲ್ಲಿ ಕಳ್ಳರ ಕಣ್ಗಾವಲಿಗೆ ಸಿಸಿ ಟಿವಿ ಅಳವಡಿಸಿದ್ದಾರೆ. ಪ್ರಸ್ತುತ ವರ್ಷ 72 ಲಕ್ಷ ರೂಗಳಿಗೆ ಅಡಕೆ ಮಾರಾಟ ಮಾಡಿದ್ದಾರೆ. ಅಂದಾಜು 400 ಕ್ವಿಂಟಲ್ ಕಡಲೆ ಬೆಳೆ ಕಟಾವಿಗೆ ಬಂದಿದ್ದು ಅನೇಕ ಕಾರ್ಮಿಕರಿಗೆ ಉದ್ಯೋಗ ಜೊತೆಗೆ ಆರ್ಥಿಕ ಬದ್ರತೆಗೆ ಸಹಕಾರಿಯಾಗಿದೆ.

ತಂತ್ರಜ್ಞಾನ ನಿರ್ವಹಣೆ ಮಾಡುವ ಮೂಲ ಹೆಚ್ಚು ಬೆಳೆ: 
ರೈತರು ತಮ್ಮ ತಾವು ಬೆಳೆಯುವ ಬೆಳೆ ಒಂದೇ ರೀತಿಯದ್ದಾಗರಬಾರದು. ಸಮಗ್ರ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಒಂದು ಬೆಳೆ ಹಾಳಾದರೆ ಮತ್ತೊಂದು ಕೈ ಹಿಡಿಯುವಂತಿರಬೇಕು. ಧ್ಯಾನಸ್ಥ ಋಷಿಯಂತೆ ತೊಡಗಿಂಡು ನೀರು ನಿರ್ವಹಣೆ, ತಂತ್ರಜ್ಞಾನ ನಿರ್ವಹಣೆ ಮಾಡುವ ಮೂಲ ಹೆಚ್ಚು ಬೆಳೆ ಬೆಳೆಯಬಹುದು.
-ರಮೇಶ್ ಬಿ.ಕೆ.ಪ್ರಗತಿಪರ ರೈತ, ಪಪಂ ಸದಸ್ಯ

Share this Article
Leave a comment

Leave a Reply

Your email address will not be published. Required fields are marked *

error: Content is protected !!