ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಹಾಲೇಕಲ್ಲು ಮೂಲದ ಟೆಕ್ಕಿ ದಂಪತಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್‍ನಲ್ಲಿ ನಡೆದಿದೆ.
ಮೃತರನ್ನು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಯಶ್(6) ಎಂದು ಗುರುತಿಸಲಾಗಿದೆ. ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದ ಯೋಗೇಶ್ ಹಾಗೂ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಒಂದೇ ಕುಟುಂಬದ ಮೂವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಸಾವಿಗೆ ನಿಖರ ಕಾರಣ ತಿಳಿಸುವಂತೆ ಮತ್ತು ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ಕುಟುಂಬ ಸರಕಾರಕ್ಕೆ ಮನವಿ ಮಾಡಿದೆ.
ಎಂಜಿನಿಯರ್ ಆಗಿದ್ದ ದಂಪತಿ ಸಂಪಾದನೆ ಮಾಡಬೇಕು. ಎಲ್ಲರಂತೆ ಬದುಕಬೇಕು ಎಂಬ ಕನಸು ಕಂಡಿದ್ದವರು. ಅಮೆರಿಕಾಕ್ಕೆ ಹೋಗಿ ನೆಲೆಸಿದ್ದರು. ತುಂಬು ಕುಟುಂಬಕ್ಕೆ ಒಂದು ಮುದ್ದಾದ ಮಗು ಇತ್ತು. ಕುಟುಂಬವೂ ಚೆನ್ನಾಗಿಯೇ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕುಟುಂಬಸ್ಥರು ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿದೆ.
ಹಾಲೆಕಲ್ಲು ಗ್ರಾಮದ ನಾಗರಾಜಪ್ಪ ಎಂಬುವವರ ಪುತ್ರರಾದ ಯೋಗೇಶ್ ಹೊನ್ನಾಳ ಅವರು ಎಂಜಿನಿಯರ್ ಆಗಿದ್ದವರು. ಅವರ ಪತ್ನಿ ಪ್ರತಿಭಾ ಹೊನ್ನಾಳ್ ಸಹ ಎಂಜಿನಿಯರ್ ಪದವಿ ಮುಗಿಸಿ ಪತಿ ಜೊತೆ ಅಮೆರಿಕಾಕ್ಕೆ ತೆರಳಿದ್ದರು.
ಈ ದಂಪತಿಗೆ ಕಳೆದ ಆರು ವರ್ಷಗಳ ಹಿಂದೆ ಜನಿಸಿದ್ದ ಪುತ್ರನೊಟ್ಟಿಗೆ ವಾಸವಾಗಿದ್ದವರು. ಇಬ್ಬರಿಗೆ ಉತ್ತಮ ಸಂಬಳ ಇತ್ತು. ದಂಪತಿ ಅನೋನ್ಯವಾಗಿದ್ದರು. ಆದರೆ ಅಮೆರಿಕಾದಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ ಆದರೆ ಮೂವರ ಸಾವು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಯೋಗೇಶ್ ಅವರ ತಂದೆ ತಹಶೀಲ್ದಾರ್ ಹುದ್ದೆಗೆ ರಾಜೀನಾಮೆ ನೀಡಿ ಸ್ವಯಂ ನಿವೃತ್ತರಾಗಿದ್ದರು. ತಾಯಿ ಶೋಭಾ ಹಾಗೂ ತಮ್ಮ ಪುನೀತ್ ಅವರು ದಾವಣಗೆರೆ ಯಲ್ಲಿ ಸದ್ಯ ವಾಸವಾಗಿದ್ದಾರೆ.
ಪುನಿತ್ ಸಹ ಬೆಂಗಳೂರಿನಲ್ಲಿ ಎಂಜಿನಿಯರ್ ಎಂದು ತಿಳಿದು ಬಂದಿದೆ. ಯೋಗೀಶ್, ಪತ್ನಿ ಪ್ರತಿಭಾ ಹಾಗೂ ಯಶ್ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾವಿನ ನಿಖರ ಕಾರಣ ತಿಳಿಸಬೇಕು ಹಾಗೂ ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ:
ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಶೋಭಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ಮಗ ಯೋಗೇಶ್, ಸೊಸೆ ಪ್ರತಿಭಾ ಹಾಗೂ ಮೊಮ್ಮಗ ಯಶ್ ಇನ್ನಿಲ್ಲ ಎಂಬುದನ್ನು ಕೇಳಿ ತಡೆದುಕೊಳ್ಳಲು ಆಗಿಲ್ಲ.
ಯೋಗೇಶ್ ಅಮೆರಿಕಾಕ್ಕೆ ಹೋದ ಬಳಿಕ ಆಗಾಗ್ಗೆ ಫೋನ್ ಮಾಡುತ್ತಿದ್ದ. ಆರೋಗ್ಯ ವಿಚಾರಿಸುತ್ತಿದ್ದ. ಸೊಸೆ ಸಹ ಚೆನ್ನಾಗಿಯೇ ಮಾತನಾಡಿಸುತ್ತಿದ್ದಳು. ಮೊಮ್ಮಗನೂ ಸಹ ವಿಚಾರಿಸುತ್ತಿದ್ದ. ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತ ಆಗಿದೆ. ಹೇಗಾಯ್ತು ಅನ್ನೋದು ಗೊತ್ತಾಗುತ್ತಿಲ್ಲ. ಚೆನ್ನಾಗಿದ್ದ ಸಂಸಾರ ಇಲ್ಲ ಎಂದರೆ ಹೇಗೆ ಅರಗಿಸಿಕೊಳ್ಳುವುದು ಎಂದು ಕಣ್ಣೀರಿಟ್ಟರು.
ಮೃತದೇಹ ತವರಿಗೆ ತನ್ನಿ ಎಂದು ಒತ್ತಡ:
ಯೋಗೇಶ್, ಪ್ರತಿಭಾ ಹಾಗೂ ಯಶ್ ರ ಮೃತದೇಹ ದಾವಣಗೆರೆಗೆ ತರಿಸುವಂತೆ ಕುಟುಂಬಸ್ಥರು, ಸ್ನೇಹಿತರು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಮೂವರ ಸಾವಿನ ಕುರಿತಂತೆ ತನಿಖೆ ಆಗಬೇಕು.
ಯಾಕೆ ಈ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಅವರಿಗೇನಾಯ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಗೃಹ ಸಚಿವ ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸರಕಾರಕ್ಕೆ ಮೃತದೇಹ ತರಿಸಿಕೊಡಲು ಕ್ರಮ ಕೈಗೊಳ್ಳಬೇಕು. ಸಾವಿಗೆ ನಿಖರತೆ ಗೊತ್ತಾಗಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.