ಜಗಳೂರು ಗದ್ದುಗೆಯ ಗುದ್ದಾಟದಲ್ಲಿ ಈ ಮೂವರಲ್ಲಿ ಯಾರಿಗೆ ಅದೃಷ್ಟ?

Suddivijaya
Suddivijaya May 8, 2023
Updated 2023/05/08 at 2:57 AM

ಸುದ್ದಿವಿಜಯ, ಜಗಳೂರು(ವಿಶೇಷ): ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರವಾದ ಜಗಳೂರಿನಲ್ಲಿ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಜಗಳೂರು ಆರಂಭದಿಂದಲೂ ಕಾಂಗ್ರೆಸ್‍ನ ಭದ್ರ ಕೋಟೆ. 2004ರಲ್ಲಿ ಟಿ.ಗುರುಸಿದ್ದನಗೌಡ ಬಿಜೆಪಿಯಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‍ನ ಭದ್ರಕೋಟೆ ಛೀದ್ರ ಮಾಡಿದರು. ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಕಾಯ್ದುಕೊಂಡಿವೆ.

ಪ್ರಸ್ತುತ ಮೇ.10 ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಜೊತೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದು, ಮೂವರ ನಡುವೆ ಗೆಲುವಿಗಾಗಿ ಕದನ ಏರ್ಪಟ್ಟಿದೆ.
ಬಿಜೆಪಿಯಿಂದ ಶಾಸಕ ಎಸ್.ವಿ.ರಾಮಚಂದ್ರ ಕಣದಲ್ಲಿದ್ದಾರೆ.

ಕಳೆದ ಭಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಪರಭವಗೊಂಡಿದ್ದ ಬಿ.ದೇವೇಂದ್ರಪ್ಪ ಈ ಸಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದಾರೆ. ಕೈ ಟಿಕೆಟ್ ತಪ್ಪಿದ್ದರಿಂದ ಪಕ್ಷೇತರಾಗಿ ಎಚ್.ಪಿ.ರಾಜೇಶ್ ಕಣದಲ್ಲಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಯಿದೆ.

ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಮಲ್ಲಾಪುರ ದೇವರಾಜ್ ಕಣದಲ್ಲಿದ್ದಾರೆ. ಜೆಡಿಎಸ್ ಹೊರತುಪಡಿಸಿ ಮೂವರು ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿ ಶಾಸಕನಾದರೆ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸುವುದಾಗಿ ಎಸ್‍ವಿಆರ್ ಹೇಳಿದ್ದಾರೆ. ಆದರೆ ಇದೇ ವಿಷಯ ಉಳಿದ ಇಬ್ಬರು ಸ್ಪರ್ಧಿಗಳಿಗೂ ಅಸ್ತ್ರವಾಗಿದೆ.

ಕಾಂಗ್ರೆಸ್ ಟಿಕೆಟ್ ಘೋಷಣೆ ತಡವಾಗಿದ್ದರಿಂದ ಕೈ ಹುರಿಯಾಳು ಪ್ರಚಾರ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ಟಿಕೆಟ್ ಸಿಕ್ಕ ತಕ್ಷಣ ರಾಕೇಟ್ ವೇಗದಲ್ಲಿ ಪ್ರತಿಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮುಖಂಡರು ಬಿರುಸಿನ ಪ್ರಚಾರ ಮಾಡಿದ್ದಾರೆ. ಜೊತೆಗೆ ಸಾಂಪ್ರದಾಯಕ ಮತಗಳು ಕಾಂಗ್ರೆಸ್ ಪಾಲಾಗಲಿವೆ.

ಬಿಜೆಪಿಗೆ ಆಡಳಿತ ವಿರೋಧಿ ಅಲೆ ಜೊತೆಗೆ 2018ರಲ್ಲಿ ಘೋಷಣೆಯಾದ 57 ಕೆರೆ ತುಂಬಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗದೇ ಇರುವುದು ಬಿಜೆಪಿಯ ಮತ ಬುಟ್ಟಿ ಭರ್ತಿಗೆ ಕೊಂಚ ಹಿನ್ನಡೆ ತರಬಹುದು.

ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್, ‘ಕಾಂಗ್ರೆಸ್ ನನಗೆ ಮೋಸ ಮಾಡಿದೆ’ ಎಂಬ ಅನುಕಂಪದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನನ್ನನ್ನು ಕಡೆಗಣಿಸಿ, ಪಕ್ಷ ವಂಚನೆ ಮಾಡಿದೆ ಎಂದು ಸ್ವಾಭಿಮಾನ ಪಣಕ್ಕಿಟ್ಟು ಪ್ರಚಾರದ ವೇಳೆ ಆರೋಪಿಸುತ್ತಿದ್ದಾರೆ.

ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಈಗಾಗಲೇ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳಿಬ್ಬರಿಗೂ ಮತ ನೀಡಿ ಗೆಲ್ಲಿಸಿದ್ದೀರಿ. ಈ ಬಾರಿ ನನಗೆ ಅವಕಾಶ ಕೊಟ್ಟುನೋಡಿ, ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆಂದು ಭರವಸೆ ನೀಡುತ್ತಾ ಮತ ಯಾಚಿಸುತ್ತಿದ್ದಾರೆ.

ಸ್ಟಾರ್ ಪ್ರಚಾರ ಮತವಾಗಿ ಪರಿಣಮಿಸುತ್ತಾ?

ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ನಟ ಕಿಚ್ಚಸುದೀಪ್ ಪ್ರಚಾರ ನಡೆಸಿ ಸಂಚಲನ ಸೃಷ್ಟಿಸಿದ್ದಾರೆ. ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷದ ಅಭ್ಯರ್ಥಿ ಪರವಾಗಿ ರೋಡ್ ಶೋ ನಡೆಸಿದ್ದಾರೆ.

ಅಷ್ಟೇ ಅಲ್ಲ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾದಿಗ ಸಮುದಾಯದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಬಹಿರಂಗ ಸಮಾವೇಶ ಮಾಡಿ ಮತ ಬುಟ್ಟಿಗೆ ಕೈ ಹಾಕಿದ್ದಾರೆ.

ಅಲ್ಲದೇ ಮೂರು ದಿನಗಳ ಹಿಂದಷ್ಟೇ ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಿ.ದೇವೇಂದ್ರಪ್ಪ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರಿಗೆ ಮತದಾರರೇ ಸ್ಟಾರ್ ಪ್ರಚಾರಕರು ಎಂದು ಕ್ಷೇತ್ರ ಪ್ರದಕ್ಷಿಣೆ ಹಾಕುವ ಮೂಲಕ ಗದ್ದುಗೆ ಗುದ್ದಾಟದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

2018ರಲ್ಲಿ ಪಕ್ಷಗಳು ಪಡೆದ ಮತ ಪ್ರಮಾಣ

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ.ರಾಮಚಂದ್ರ 78,948 ಸಾವಿರ ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಪಿ.ರಾಜೇಶ್ ಅವರು 49,728 ಸಾವಿರ ಮತಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು 13.401 ಮತಗಳನ್ನು ಪಡೆದಿದ್ದರು.

ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ

ಕ್ಷೇತ್ರದಲ್ಲಿ 193,028 ಒಟ್ಟು ಮತದಾರರು
ಪುರುಷರು: 97690
ಮಹಿಳೆಯರು: 95257
ಇತರೆ:81

ಲಿಂಗಾಯತರು: 39,000

ಎಸ್‍ಸಿ: 47,000

(ಲಂಬಾಣಿ-11,000, ಛಲವಾದಿ-4000, ಮಾದಿಗ ಸಮುದಾಯ-19,000, ಬೋವಿ-13,500)

ಎಸ್‍ಟಿ(ನಾಯಕ): 41,000

ಕುರುಬ: 12,000

ಮುಸ್ಲಿಂ: 18,600

ಉಪ್ಪಾರ: 3000

ಯಾದವ: 14,609

ರೆಡ್ಡಿ: 3000

ಸವಿತಾಸಮಾಜ: 2000

ಮಡಿವಾಳ: 3000

ಇತರೆ:5000

Share this Article
Leave a comment

Leave a Reply

Your email address will not be published. Required fields are marked *

error: Content is protected !!