ಸುದ್ದಿವಿಜಯ, ಜಗಳೂರು: ವೀರಶೈವ ಲಿಂಗಾಯತ ಪಂಥದ ಅಡಿ ಬರುವ ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಜಾತಿ ಬೇಡಜಂಗಮ ಎಂದು ಬದಲಿಸಿ ಸಂವಿಧಾನಿಕ ಹಕ್ಕು ನೀಡಬೇಕು ಎಂದು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಗಳೂರು ತಾಲೂಕು ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ಶಿವಕುಮಾರಸ್ವಾಮಿ, ಸ್ವಾತಂತ್ರ ಪೂರ್ವದ 1921ರಲ್ಲೇ ದುರ್ಬಲ ವರ್ಗದಲ್ಲಿ ಇದ್ದ ಪಟ್ಟಿಯನ್ನು 1935ರ ಭಾರತ ಸರಕಾರದ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಎಂದು ನಮ್ಮ ಸಮುದಾಯವನ್ನು ನಮೂದಿಸಲಾಗಿದೆ.
ಆದರೆ ಅಖಿಲ ಭಾರತ ವೀರಶೈವ ಮಹಾಸಭಾವು ಒಳಪಂಗಡಗಳನ್ನು ಶಾಲಾ ದಾಖಲಾತಿಗಳಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸುತ್ತಾ ಬಂದೆವು. ಮಾಹಿತಿ ಹಕ್ಕುನಲ್ಲಿ ಪಡೆದ ದಾಖಲೆಗಳಲ್ಲೂ ಸ್ಪಷ್ಟವಾಗಿದೆ. ಜೊತೆಗೆ ಸೂರ್ಯನಾಥ್ ಕಾಮತ್ ವರದಿಯಲ್ಲಿ ಪರಿಶಿಷ್ಟ ಜಾತಿ ಎಂದು ಉಪ ಬಂಧವಿದೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶವಿದ್ದರೂ ಸಹ ಸರಕಾರ ಬೇಡ ಜಂಗಮರಿಗೆ ಪ್ರಮಾಣಪತ್ರ ನೀಡುತ್ತಿಲ್ಲ. ಬೇಡ ಜಂಗಮರ ಮೂಲಭೂತ ಹಕ್ಕನ್ನು ಪಡೆಯುವ ಹಿನ್ನೆಲೆಯಲ್ಲಿ ಜೂ.30 ರಂದು ಜಂಗಮ ಸಮಾಜದ ಹಿರಿಯ ಹೋರಾಟಗಾರರಾದ ಬಿ.ಡಿ ಹಿರೇಮಠ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗಿತ್ತು.
ಹೋರಾಟದಲ್ಲಿ ಭಾಗವಹಿಸಿದ್ದ ಸಮಾಜ ಕಲ್ಯಾಣ ಸಚಿವ ಕೋಠ ಶ್ರೀನಿವಾಸ ಪೂಜಾರಿ ಜುಲೈ1 ರಂದು ಸಂಜೆಯೊಳಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡುವುದಾಗಿ ಭರವಸೆ ನೀಡಿದ್ದರು.
ಆದರೆ ದಿನಗಳು ಕಳೆಯುತ್ತಾ ಬಂದರೂ ಸಚಿವರು ಇನ್ನೂ ಆದೇಶ ನೀಡಿಲ್ಲ. ಅವರು 2018ರ ಸುತ್ತೊಲೆಯನ್ನು ಹೊರಡಿಸಿರುವುದು ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸುರೇಶ್ ಐಯ್ಯ, ನಂಜುಂಡ ಸ್ವಾಮಿ, ವಿರೂಪಾಕ್ಷಯ್ಯ, ನಾಗಭೂಷಣ, ಶಿವಯ್ಯ, ಮಲ್ಲಯ್ಯ, ರಾಜು, ಮಂಜುನಾಥ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಮನವಿ ಸಲ್ಲಿಸಿದ್ದರು.