ಜಗಳೂರು: ರೈತರಿಗೆ ಭವಿಷ್ಯದಲ್ಲಿ ಎಫ್‍ಪಿಓಗಳೆ ಆಧಾರಸ್ತಂಭ:ಕೃಷಿ ವಿಜ್ಞಾನಿ ಡಾ.ಬಿ.ಓ.ಮಲ್ಲಿಕಾರ್ಜುನ ಅಭಿಮತ!

Suddivijaya
Suddivijaya September 29, 2022
Updated 2022/09/29 at 1:01 PM

ಸುದ್ದಿವಿಜಯ,ಜಗಳೂರು: ರೈತರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಧ್ಯವರ್ತಿಗಳ ಕಾಟದಿಂದ ಮುಕ್ತರಾಗಿ ಆರ್ಥಿಕವಾಗಿ ಸಬಲರಾಗಬೇಕಾದರೆ ರೈತ ಉತ್ಪಾದಕ ಕಂಪನಿಗಳಿಂದ ಮಾತ್ರ ಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ.ಬಿ.ಓ.ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಐತಿಹಾಸಿಕ ಕೊಣಚಗಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬಿದರಕೆರೆ ಅಮೃತ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ದೂರದೃಷ್ಟಿಯ ಫಲವಾಗಿ ದಾವಣಗೆರೆ ಜಿಲ್ಲೆಯಲ್ಲಿ 18 ಕಂಪನಿಗಳು ಸ್ಥಾಪನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ ಬಂದು 75 ವರ್ಷ ತುಂಬಿದ ಹಿನ್ನೆಲೆ ಈ ಕಂಪನಿಗಳಿಗೆ ಕಳೆದ ವರ್ಷ ಚಾಲನೆ ನೀಡಿದರು.

ಈ ಕಂಪನಿಗಳ ಮೂಲ ಉದ್ದೇಶವೇ ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡುವುದಾಗಿದೆ. ರೈತರು ಬೆಳೆದ ಬೆಳೆಗಳನ್ನು ಬಿದರಕೆರೆ ಎಫ್‍ಪಿಓ ಮೂಲಕ ನೇರವಾಗಿ ಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿದೆ. ಮೆಕ್ಕೆಜೋಳ ಖರೀದಿಸಲು ಕಾರ್ಗಿಲ್ ಕಂಪನಿ ಮುಂದೆ ಬಂದಿದೆ. ರೈತರು ನೇರವಾಗಿ ನಿಮ್ಮ ಕಂಪನಿಯ ಮೂಲಕವೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

 ಜಗಳೂರು ತಾಲೂಕಿನ ಕೊಣಚಗಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿದರಕೆರೆ ಎಫ್‍ಪಿಒ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಜಗಳೂರು ತಾಲೂಕಿನ ಕೊಣಚಗಲ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿದರಕೆರೆ ಎಫ್‍ಪಿಒ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ರೈತರು ಬೆಳೆದ ರಾಗಿ ದರ ಕೇವಲ ಕೆಜಿಗೆ 25 ರಷ್ಟು ಮಾರಾಟ ಮಾಡುತ್ತಾರೆ. ಆದರೆ ಬೃಹತ್ ಮಾಲ್‍ಗಳಲ್ಲಿ ಒಂದು ಕೆಜಿ ರಾಗಿ ಹಿಟ್ಟಿಗೆ 65 ರೂ ಬೆಲೆಯಿದೆ. ಇದರಿಂದ ಮಾಲ್‍ಗಳ ಮಾಲೀಕರಿಗೆ ಲಾಭವಾಗುತ್ತದೆ. ಆ ಕೆಲಸವನ್ನು ರೈತರು ಎಫ್‍ಪಿಗಳ ಮೂಲಕ ಮಾರಾಟ ಮಾಡಬೇಕು.

ದೇಶದಲ್ಲಿ ಮತ್ತು ರಾಜ್ಯದಲ್ಲಿ ಎಫ್‍ಪಿಓಗಳ ಯುಗ ಆರಂಭವಾಗಿದೆ. ಇದಕ್ಕೆ ಚನ್ನಗಿರಿಯ ತುಮ್ಕೋಸ್ ಉದಾಹರಣೆಯಾಗಿದೆ. ರೈತರು ನಿಮ್ಮ ಎಫ್‍ಪಿಓ ಮೂಲಕ ಮಾರಾಟ ಮಾಡಿದರೆ ಕಂಪನಿ ಬೆಳೆಸಲು ಸಾಧ್ಯವಾಗುತ್ತದೆ. ನಿಮ್ಮ ಕನಸುಗಳ ಸಾಹಕಾರಗೊಳಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಬದ್ಧವಾಗಿವೆ. ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದು ಕೃಷಿ ಇಲಾಖೆಯು ಎಫ್‍ಪಿಗಳ ಬಲವರ್ಧನೆಗೆ ಬೆನ್ನೆಲುಬಾಗಿ ನಿಂತಿರುವುದ ನಿಜಕ್ಕೂ ಸಂತೋಷದ ವಿಷಯ ಎಂದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್

ತೋಟಗಾರಿಕೆ ತಜ್ಞ ಡಾ.ಎಂ.ಜಿ.ಬಸವನಗೌಡ, ರೈತರು ಸ್ಥಳೀಯವಾಗಿ ಉತ್ಪಾದಿಸುವ ಈರುಳ್ಳಿ ಬೀಜಗಳನ್ನೇ ಬಿತ್ತುವುದರಿಂದ ಕೊಳೆ ರೋಗ ಹೆಚ್ಚಾಗಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರು ಸುಧಾರಿತ ಭೀಮಾ ಸೂಪರ್ ಹೆಸರಿನ ಈರುಳ್ಳಿ ಬೀಜಗಳನ್ನು ಬೀಜೋಪಚಾರ ಮಾಡಿ ಬತ್ತನೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ವೆಂಕಟೇಶ್ ನಾಯ್ಕ ಮಾತನಾಡಿ, ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಿದರಕೆರೆ ಎಫ್‍ಪಿಒ ಸಿಇಓ ಮನೋಜ್ ಕುಮಾರ್ ವಾರ್ಷಿಕ ವರದಿ ಮಂಡಿಸಿ ಕಂಪನಿಯು ಪ್ರಸ್ತುತ 61ಲಕ್ಷ ವ್ಯವಹಾರ ಮಾಡಿರುವುದರ ಬಗ್ಗೆ ಶೇರುದಾರರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಫ್‍ಪಿಒ ಅಧ್ಯಕ್ಷ ಎಂ.ಎಚ್.ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕರಾದ ಎಚ್.ಜಿ.ಉಮಾಪತಿ, ಎನ್.ಎಚ್.ನಾಗರಾಜ್, ಕೆ.ಎಸ್.ರೇವಣಸಿದ್ದಪ್ಪ, ಎಚ್.ಜಿ.ನಾಗರಾಜಪ್ಪ, ಕೆ.ಎಂ. ಕವಿತಾಸ್ವಾಮಿ, ಜಿ.ಎಸ್.ಬಸವನಗೌಡ, ಕೆ.ಕೃಷ್ಣ ಮೂರ್ತಿ ಮತ್ತು ಡಿಇಒ ಎಂ.ತೇಜಸ್ವಿನಿ ಹಾಗೂ ಕಂಪನಿಯ 750 ಜನ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!