ಸುದ್ದಿವಿಜಯ, ಜಗಳೂರು: ಇದೇ ನ.23 ರಂದು ಬಿಜೆಪಿಯ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿಂತೆ ಸಂಪುಟದ ಅನೇಕ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.
ಪಟ್ಟಣದ ಪಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಪತ್ರಕರ್ತರಿಗೆ ಬಿಜೆಪಿ ಜನ ಸಂಕಲ್ಪ ಯಾತ್ರೆಯ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಇದು ಪಕ್ಷದ ಕಾರ್ಯಕ್ರಮವಾಗಿದ್ದು ಪಟ್ಟಣದ ಬಯಲು ರಂಗ ಮಂದಿರದಲ್ಲಿ 35 ಸಾವಿರ ಜನ ಕೂರಲು ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಬೆಂಗಳೂರಿನಿಂದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‍ಸಿ ರವಿಕುಮಾರ್ ನೇತೃತ್ವದ ತಂಡ ಸಿದ್ಧತೆಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದರು.
ತಾಲೂಕು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣ, ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ, ಪಟ್ಟಣದ ಸ್ವಚ್ಛತೆ ಸೇರಿದಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದೇವೆ. ಪ್ರವಾಸಿ ಮಂದಿರದಲ್ಲಿ ಗಣ್ಯರು ತಂಗು ಸ್ಥಳದ ಸ್ವಚ್ಛತೆ ಸೇರಿದಂತೆ ಯಾವುದೇ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಹಾತ್ವಾಕಾಕ್ಷಿಯ 1336 ಕೋಟಿ ರೂ ಭದ್ರಾ ಮೇಲ್ದಂಡೆ ಯೋಜನೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತರಳಬಾಳು ಶ್ರೀಗಳ ನೇತೃತ್ವದಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈಗಾಗಲೇ ಭರದಿಂದ ಸಾಗುತ್ತಿದೆ. ಜನವರಿಗೆ ಬಹುತೇಕ ಯೋಜನೆ ಪೂರ್ಣಗೊಳ್ಳುವ ವಿಶ್ವಸವಿದೆ. ಫ್ಲೋರೈಡ್ ಮುಕ್ತ ತಾಲೂಕು ಮಾಡುವ ಉದ್ದೇಶಶದಿಂದ 164 ಹಳ್ಳಿಗಳಿಗೆ 428 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಅಂದೇ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದರು.
ಈ ಬೃಹತ್ ಯೋಜನೆ ಸೇರಿದಂತೆ ರಸ್ತೆ, ನೀರು, ಮೂಲ ಸೌಕರ್ಯಕ್ಕೆ ಮೂರು ಸಾವಿರ ಕೋಟಿ ಹಣ ನೀಡಿರುವ ಸಿಎಂ ಹಾಗೂ ಮಾಜಿ ಸಿಎಂ ಬಿಎಸ್‍ವೈ ಅವರಿಗೆ ಅಭಿನಂದಿಸುವ ಕಾರ್ಯ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಸಚಿವರಾದ ಗೋವಿಂದ ಕಾರಜೋಳ, ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶ್ರೀರಾಮುಲು ಸೇರಿದಂತೆ ಅನೇಕ ಸಚಿವರು ಶಾಸಕರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳು ಮೊದಲಿಗೆ ಜಗಳೂರಿಗೆ ಬಂದು ನಂತರ ಹರಿಹರ ಕ್ಷೇತ್ರಕ್ಕೆ ತೆರಳಿದ್ದಾರೆ. ಸಿಎಂ ಬಂದಾಗ ಕ್ಷೇತ್ರಕ್ಕೆ ಮತ್ತೊಂದು ನೂತನ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದರು.
ಕೆಲಸ ಮಾಡದ ಅಧಿಕಾರಿಗಳಿಗೆ ಗೇಟ್‍ಪಾಸ್: ಕ್ಷೇತ್ರದಲ್ಲಿ ಅನೇಕ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕಳ್ಳತನ ಪ್ರಕರಣಗಳು ಜಾಸ್ತಿಯಾಗ್ತಿವೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಲಸ ಮಾಡದ ಅಧಿಕಾರಿಗಳಿಗೆ ಗೇಟ್‍ಪಾಸ್ ನೀಡುತ್ತೇನೆ. ಮೊದಲು ಅಧಿಕಾರಿಗಳು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಸ್ಥಳವಿಲ್ಲ ಶಾಸಕರು ಅಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು.
ಅಭಿವೃದ್ಧಿಯ ಗಾಳಿ ಬೀಸಿದೆ ಕಾಂಗ್ರೆಸ್ ಟಿಕೆಟ್ ಫೈಟ್ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಪಕ್ಷದ ವಿಚಾರ. ಶಾಸಕ ರಾಮಚಂದ್ರ ಮಾಡಿದ ಕೆಲಸದಿಂದ ಜನ ಮುಂದೆಯೂ ನನ್ನನ್ನೇ ಶಾಸಕರನ್ನಾಗಿ ನೋಡುವ ಆಸೆಯಿದೆ. ರಾಮಚಂದ್ರ ಶಾಸಕರಾದ ಮೇಲೆ ಜಗಳೂರಿನಲ್ಲಿ ಅಭಿವೃದ್ಧಿಯ ಗಾಳಿ ಬೀಸಿದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಓ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕೃಷಿ ಇಲಾಖೆ ಎಡಿ ಮಿಥುನ್ ಕಿಮಾವತ್, ಪಿಡ್ಲ್ಯೂಡಿ ಎಇಇ ಯು.ರುದ್ರಪ್ಪ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.