ಸುದ್ದಿವಿಜಯ, ಜಗಳೂರು: ಬಿಜೆಪಿ ‘ಜನ ಸಂಕಲ್ಪ ಯಾತ್ರೆ’ ಜಗಳೂರು ಪಟ್ಟಣದಲ್ಲಿ ನ.22 ರಂದು ಮಂಗಳವಾರ ನಡೆಯಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಪಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇಡೀ ಸಚಿವ ಸಂಪುಟದ ಎಲ್ಲ ಸಚಿವರು ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಕ್ಷದ ಸಂಘಟನಾ ದೃಷ್ಟಿಯಿಂದ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಜನ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕಾರ್ಯಗಳು, ಯೋಜನೆಗಳನ್ನ ಜನರಿಗೆ ತಲುಪಿಸುವ ಕಾರ್ಯಕ್ರಮ ಉದ್ದೇಶವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಕಾಯಕ್ರಮಕ್ಕೆ ಆಗಮಿಸಲಿದ್ದಾರೆ.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಬೃಹತ್ ಕಾಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಮತ್ತು ವಿವಿಧ ಇಲಾಖೆಗಳ ಸಚಿವರು, ಶಾಸಕರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅಂದಾಜು 30 ರಿಂದ 35 ಸಾವಿರ ಜನರು ಬರುವ ನಿರೀಕ್ಷೆಯಿದೆ ಎಂದರು.
ಇದು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದ್ದರೂ ಸಹ ಮುಖ್ಯಮಂತ್ರಿಗಳು ಬರುತ್ತಿರುವುದರಿಂದ ಶಿಷ್ಟಾಚಾರ ಪಾಲಿಸಬೇಕು. ಪಟ್ಟಣದಲ್ಲಿ ಮೂಲಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ರಿಪೇರಿ ಮತ್ತು ಭದ್ರತಾ ದೃಷ್ಟಿಯಿಂದ ಆಯಾ ಇಲಾಖೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ತಾಲೂಕು ಕ್ರಿಡಾಂಗಣದಲ್ಲಿ ಗಣ್ಯರ ಹೆಲಿಕಾಪ್ಟರ್‍ಗಳನ್ನು ಸುರಕ್ಷಿತವಾಗಿ ಇಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಿಎಂ ಬರುವ ರಸ್ತೆಯಲ್ಲಿ ಗುಂಡಿಗಳು ಬಿದ್ದಲ್ಲಿ ಅವುಗಳಿಗೆ ಮಣ್ಣು ತುಂಬಿ, ಡಾಂಬರ್ ಹಾಕಿ ಭರ್ತಿ ಮಾಡಬೇಕು.
ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಪ್ರತಿಯೊಂದು ಕಾರ್ಯಕ್ರಮದ ಜವಾಬ್ದಾರಿಯನ್ನು ನೀಡಲಾಗಿದ್ದು ವೇದಿಕೆ ನಿರ್ಮಾಣ ಮತ್ತು ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾಮಿಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ ಅವರಿಗೆ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಎಇಇ ಯು.ರುದ್ರಪ್ಪ ಅವರಿಗೆ ಗುಂಡಿ ಬಿದ್ದ ರಸ್ತೆಗಳ ರಿಪೇರಿ ಮತ್ತು ಡಾಂಬರ್ ಹಾಕಲು ಸೂಚನೆ ನೀಡಿದರು. ಗಣ್ಯರು ಉಳಿದುಕೊಳ್ಳುವ ವಿಐಪಿ ವಸತಿ ಗೃಹಗಳ ಸುವ್ಯವಸ್ಥೆ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ನೀರಿನ ಸಮಸ್ಯೆ ಬಗೆ ಹರಿಸಿ:
ಪಟ್ಟಣದಲ್ಲಿ ನೀರಿನ ಸಮಸ್ಯೆಯಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಎಲ್ಲೆಲ್ಲಿ ನೀರಿನ ಸಮಸ್ಯೆಯಿದೆ ಅಂತಹ ಬಡಾವಣೆಗಳನ್ನು ಗುರುತಿಸಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಬಗೆ ಹರಿಸಿ. ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ. ನೈರ್ಮಲ್ಯ ಕಾಪಾಡುವುದು ಪಪಂ ಜವಾಬ್ದಾರಿಯಾಗಿದೆ ಎಂದು ಶಾಸಕ ಎಸ್‍ವಿ.ರಾಮಚಂದ್ರ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ ಅವರಿಗೆ ಸೂಚನೆ ನೀಡಿದರು.
ಡಿಸೆಂಬರ್ ನಲ್ಲಿ ರಾಜ್ಯ ಮಟ್ಟದ ಕಬಡ್ಡಿ:
ಮುಂಬರುವ ಡಿಸೆಂಬರ್ 14,15 ಮತ್ತು 16 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಮೆಂಟ್ ನಡೆಯಲಿದೆ. ರಾಜ್ಯದಿಂದ ಸುಮಾರು 40ಕ್ಕೂ ಹೆಚ್ಚು ತಂಡಗಳು ಆಗಮಿಸಲಿವೆ ಎಂದು ಶಾಸಕ ಎಸ್.ವಿ.ರಾಮಂಚಂದ್ರ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ತಾಪಂ ಇಒ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಪಿಡ್ಲ್ಯೂಡಿ ಎಇ ಪುರುಷೋತ್ತಮ ರೆಡ್ಡಿ, ಪಪಂ ಅಧ್ಯಕ್ಷರಾದ ವಿಶಾಲಾಕ್ಷೀ ಓಬಳೇಶ್, ಉಪಾಧ್ಯಕ್ಷರಾದ ನಿರ್ಮಲಾಕುಮಾರಿ ಹನುಮಂತಪ್ಪ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಪಪಂ ಚೀಫ್ ಆಫೀಸರ್ ಲೋಕ್ಯಾ ನಾಯ್ಕ, ಪಿಎಸ್‍ಐ ಬಸವರಾಜ್, ಬೆಸ್ಕಾಂ ಎಇಇ ಗಿರೀಶ್ ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಪಶುಸಂಗೋಪನೆ ಇಲಾಖೆ ಅಧಿಕಾರಿ ಲಿಂಗರಾಜ್, ಸಿಡಿಪಿಒ ಬೀರೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಮುಖಂಡರು ಸಭೆಯಲ್ಲಿ ಇದ್ದರು.