ಸುದ್ದಿವಿಜಯ, ಜಗಳೂರು:ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ಹೇಳುತ್ತವೆ. ಆದರೆ ಎಲ್ಲ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ನಮ್ಮ ಸಂವಿಧಾನ ಮಾತ್ರ ಹೇಳುತ್ತದೆ ಎಂದು ಪ್ರಗತಿಪರ ಚಿಂತಕ ಹಾಗೂ ಪ್ರಾಂಶುಪಾಲ ನಾಗಲಿಂಗಪ್ಪ ಹೇಳಿದರು.
ಇಲ್ಲಿನ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನಕ್ಕೆ ತನ್ನದೆ ಆದಂತಹ ಇತಿಹಾಸ, ಮಹತ್ವ ಹಾಗೂ ಲಿಖಿತ ಸ್ವರೂಪವಿದೆ. ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಯಾಗಿರುವ ಸಂವಿಧಾನದಲ್ಲಿ, ಎಲ್ಲ ವರ್ಗಗಳ, ಎಲ್ಲ ಸ್ತರದ ಜನರ ಹಿತವಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೂ ನಮ್ಮ ಸಂವಿಧಾನ ಎಂದು ಬಣ್ಣಿಸಿದರು.
ಕಳೆದ ಲೋಕಸಭೆಯ ಅವಧಿಯಲ್ಲಿ ಸಂವಿಧಾನ ಬದಲಾವಣೆ ಹೆಚ್ಚು ಚರ್ಚಿತವಾದ ವಿವಾದಿತ ವಿಷಯವಾಗಿತ್ತು. ಆಗಿನ ಕೇಂದ್ರ ಸಚಿವ, ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನಾವು ಬಂದಿರುವುದೆ ಸಂವಿಧಾನ ಬದಲಾವಣೆ ಮಾಡಲು ಎಂಬ ಹೇಳಿಕೆ ಕೊಟ್ಟಿದ್ದರು.
ಅವರ ಹೇಳಿಕಯಿಂದ ಇಡೀ ದೇಶಾದ್ಯಂತ ವಿವಾದ ಎದ್ದಿತ್ತು. ಜತೆಗೆ ಆ ಹೇಳಿಕೆಗೆ ದೇಶಾದ್ಯಂತ ತೀವ್ರ ಖಂಡನೆಯೂ ವ್ಯಕ್ತವಾಗಿತ್ತು. ಲೋಕಸಭೆಯಲ್ಲಿ ಕ್ಷಮೆ ಕೇಳುವ ಮೂಲಕ ಅದು ಕೊನೆಯಾಯಿತು ಎಂದರು.
ವಕೀಲ ಸಣ್ಣ ಓಬಯ್ಯ ಮಾತನಾಡಿ, ದೇವರು, ದೇವಸ್ಥಾನ, ಮಡಿ ಮೈಲಿಗೆ ಹೆಸರಿನಲ್ಲಿ ಮಹಿಳೆಯರನ್ನ ಸಮಾನತೆ ಬದುಕಿನಿಂದ ದೂರವಿಟ್ಟು ಕೇವಲ ಮಕ್ಕಳು ಹೇರುವ ಯಂತ್ರವನ್ನಾಗಿಸಿಕೊಂಡಿದ್ದ ಮನುವಾದ ವಿರುದ್ದ ಹೋರಾಡಿದ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಅವರಿಗೆ ಸಮಾನತೆ ಬದುಕು ಕಲ್ಪಿಸಿಕೊಟ್ಟರು ಆದರೆ ಅವುಗಳನ್ನ ಮರೆತ ನಾವು ಯಾರೋ ಬರೆದ ಪುರಾಣ ಕಥೆಗಳನ್ನ ಮನಸ್ಸಿನಲ್ಲಿ ಹಾಕಿಕೊಂಡು ಸಂವಿದಾನಕ್ಕೆ ಅರ್ಥವಿಲ್ಲದಂತೆ ಮಾಡಿದ್ದೇವೆ ಮೊದಲು ಮಹಿಳೆಯರು ಸಂವಿಧಾನ ಓದಬೇಕು ಎಂದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್, ಮಾನವ ಬಂಧುತ್ವ ವೇದಿಕೆ ಸಹ ಸಂಚಾಲಕ ಗೋಗುದ್ದು ತಿಪ್ಪೇಸ್ವಾಮಿ, ಮಾಜಿ ಗ್ರಾ.ಪಂ ಉಪಾಧ್ಯಕ್ಷ ಮರೇನಹಳ್ಳಿ ಎಂ.ಎಸ್ ನಜೀರ್ ಅಹಮದ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ನಿಲಯ ಮೇಲ್ವಿಚಾರಕಿ ಮಂಗಳ ಕನವಳ್ಳಿ ಸೇರಿದಂತೆ ಇತರರು ಇದ್ದರು.