ಸುದ್ದಿವಿಜಯ, ಜಗಳೂರು: ಗುಡಿಸಲು ತೆರವುಗೊಳಿಸುವಂತೆ ಗ್ರಾ.ಪಂ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಇನ್ನು ಮೂರು ತಿಂಗಳು ಕಾಲವಕಾಶ ನೀಡಬೇಕು ಹಾಗೂ ನಿವೇಶನ ಕಲ್ಪಿಸಬೇಕು ಎಂದು ಸೊಕ್ಕೆ ಗ್ರಾಮದ ದಲಿತ ಕುಟುಂಬಗಳು ಗುರುವಾರ ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸ.ನಂ 89ರಲ್ಲಿ 11.11ಎಕರೆ ಜಮೀನಿದ್ದು, ಇದರಲ್ಲಿ 1 ಎಕರೆ ಭೂಮಿಯನ್ನು ಕೆಇಬಿಯವರಿಗೆ ನೀಡಲಾಗಿದೆ. ಉಳಿದ ಜಾಗದಲ್ಲಿ ಲೇಹೌಟ್ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಗ್ರಾಪಂ ನಿರ್ಧರಿಸಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಇದೇ ಮಾತನ್ನು ಹೇಳುತ್ತಾ ಬಂದಿದ್ದಾರೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.
ಇಲ್ಲಿ ಅನೇಕು ಕುಟುಂಬಗಳು ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ದಿಢೀರನೇ ನೋಟಿಸ್ ನೀಡಿ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿರುವುದು ಖಂಡನಿಯ ಎಂದು ಗ್ರಾಮದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಮಳೆಗಾಲ ನಿತ್ಯ ಮಳೆ ಸುರಿಯುತ್ತಿದೆ. ಇಂತಹ ಸಮಯದಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದರೆ ಹತ್ತಾರು ಕುಟುಂಬಗಳು ಬೀದಿಗೆ ಬೀಳುತ್ತವೆ, ಚಿಕ್ಕ, ಪಟ್ಟ ಮಕ್ಕಳು, ವಯೋವೃದ್ದರನ್ನು ಕಟ್ಟಿಕೊಂಡು ಎಲ್ಲಿ ಜೀವನ ಮಾಡಬೇಕು.
ನಮಗೆ ಸ್ವಂತ ಸೂರು ಇಲ್ಲ. ಆದ್ದರಿಂದ ನಮಗೆ ಮೂರು ತಿಂಗಳು ಕಾಲವಕಾಶ ನೀಡಬೇಕು. ಗುಡಿಸಲು ಕಳೆದುಕೊಳ್ಳುವ ಪ್ರತಿ ಕುಟುಂಬಕ್ಕೂ ನಿವೇಶನ ನೀಡಬೇಕು ಅಲ್ಲಿಯರೆವಗೂ ನಾವೂ ಜಾಗ ಬಿಡುವುದಿಲ್ಲ, ಈ ಹೋರಾಟ ನಿಲ್ಲಿಸುವುದಿಲ್ಲವೆಂದು ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಮಾತನಾಡಿ, ಈ ದೇಶದಲ್ಲಿ 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿದರು ಇನ್ನು ದಲಿತರ, ಹಿಂದುಳಿದ ವರ್ಗಗಳಿಗೆ ನಿಜವಾದ ಸ್ವಾತಂತ್ರ್ಯ, ಸಮಾನತೆ ಸಿಕ್ಕಿಲ್ಲವೆಂದರೆ ತಲೆ ತಗ್ಗಿಸುವಂತಾಗಿದೆ. ಇಪ್ಪತ್ತು ವರ್ಷಗಳಿಂದಲೂ ಗುಡಿಸಲು ನಿರ್ಮಿಸಿಕೊಂಡು ಬದುಕುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನಿವೇಶನ ನೀಡುವಲ್ಲಿ ಗ್ರಾ.ಪಂ ಅಧಿಕಾರಿಗಳು ವಿಫಲರಾಗಿದ್ದಾರೆ.
ಗುಡಿಸಲು ಹಾಕಿಕೊಂಡಿರುವ ಕುಟುಂಬಗಳಿಗೆ ನ್ಯಾಯ ಒದಗಿಸಿ ಜಾಗ ತೆರವುಗೊಳಿಸಬೇಕು. ಬಲವಂತಾಗಿ ಅವರ ಮೇಲೆ ದೌರ್ಜನ್ಯವೆಸಗಿದರೆ ತಾಲೂಕಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಮಲ್ಲೇಶ್ ಪೂಜಾರ್, ಮುಖಂಡ ಹಟ್ಟಿ ತಿಪ್ಪೇಸ್ವಾಮಿ, ಸೊಕ್ಕೆ ಗ್ರಾಮದ ಮಾಜಿ ಗ್ರಾಪಂ ಮಂಡಲ ಸದಸ್ಯ ಚೌಡಪ್ಪ, ಗ್ರಾಮಸ್ಥರಾದ ಜಗದೀಶ್, ರಮೇಶ್, ಮಂಜಪ್ಪ, ಹನುಮೇಶ್, ಓಬಪ್ಪ, ಗಂಗಾಧರ, ಹನುಮಂತಪ್ಪ, ಚಂದ್ರಪ್ಪ, ದುರುಗಮ್ಮ, ಕೊಟ್ರಮ್ಮ, ರೇಣುಕಮ್ಮ, ಮಹೇಶ್ ಸೇರಿದಂತೆ ಮತ್ತಿತರಿದ್ದರು.