ಜಗಳೂರು:ಸಾರಿಗೆ ವ್ಯವಸ್ಥೆಯಿಲ್ಲದ ಮೂಡಲ ಮಾಚಿಕೆರೆಯಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ…

Suddivijaya
Suddivijaya January 21, 2023
Updated 2023/01/21 at 12:28 PM

ಸುದ್ದಿವಿಜಯ, ಜಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳೇ ತುಂಬಿದ್ದರೂ ಇದುವರೆಗೂ ಆ ಗ್ರಾಮಕ್ಕೆ ಸರಕಾರಿ ಸಾರಿಗೆಯಾಗಲಿ, ಖಾಸಗಿ ಸಾರಿಗೆ ವ್ಯವಸ್ಥೆಯಿಲ್ಲದ ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯವನ್ನು ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದು ಬಹುತೇಕ ಸಮಸ್ಯೆಗಳಿಗೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸ್ಥಳದಲ್ಲೇ ಈಡೇರಿಸಿದರು.

ಕಂದಾಯ ಇಲಾಖೆ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಸ್ಟೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಮೂಡಲ ಮಾಚಿಕೆರೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಈ ಗ್ರಾಮದ ಜನರ ಬಹು ವರ್ಷಗಳ ಬೇಡಿಕೆಯಾದ ಸಾರಿಗೆ ಸಂಪರ್ಕವನ್ನು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಮತ್ತು ಜಿಪಂ ಸಿಇಒ ಡಾ.ಎ.ಚನ್ನಪ್ಪ ಮನಗಂಡಿದ್ದು ಶೀಘ್ರೇವೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಈ ಗ್ರಾಮದಲ್ಲಿ ಅನೇಕ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇವೆ. ಇಡೀ ಆಡಳಿತ ವ್ಯವಸ್ಥೆ ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ರಸ್ತೆಯ ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಸ್ಥಳಾಂತರ, ಶಾಲಾಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ವೃದ್ಧಾಪ್ಯ ವೇತನಕ್ಕೆ ಅನೇಕ ಅರ್ಜಿಗಳು ಬಂದಿದ್ದು ಆದಷ್ಟು ಬೇಗ ಬಗೆಹರಿಸಲಾಗುವುದು. ವ್ಯಾಜ್ಯ ಮುಕ್ತ ಗ್ರಾಮ ಮಾಡುವುದು ನಮ್ಮ ಉದ್ದೇಶವಾಗಿದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಅರ್ಜಿಗಳನ್ನು ಸಲ್ಲಿಸಿದರೆ ಶೀಘ್ರವೇ ಬಗೆಹರಿಸುತ್ತೇವೆ ಎಂದರು.

 ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಉದ್ಘಾಟಿಸಿದರು.
 ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಉದ್ಘಾಟಿಸಿದರು.

ಬಿಇಓ ಉಮಾದೇವಿ, ಅಂಗನವಾಡಿ ಕೇಂದ್ರ ಶೀಘ್ರವೇ ಶಾಲಾ ಅಂಗಳಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದೇನೆ. ಅಂಗನವಾಡಿ ಕೇಂದ್ರ ನಿರ್ಮಾಣವಾಗುವವರೆಗೂ ಸರಕಾರಿ ಶಾಲಾ ಆವರಣದಲ್ಲೇ ಮಕ್ಕಳು ಕಲಿಯಲು ಕೊಠಡಿ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ ಎಂದರು.

ಟಿಎಚ್‍ಒ ನಾಗರಾಜ್, ಕೋವಿಡ್ ಲಸಿಕಾಕರಣ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ, ಮಕ್ಕಳಿಗೆ, ಗರ್ಭಿಣಿಯರಿಗೆ ವಿವಿಧ ಯೋಜನೆಗಳು ಇದ್ದು ಪ್ರತಿ ವಾರ ಹಿಂದುಳಿದ ಗ್ರಾಮವಾದ ಮೂಡಲ ಮಾಚಿಕೆಗೆರೆ ವೈದ್ಯರ ತಂಡ ಕಳುಹಿಸಿ ಕ್ಯಾಂಪ್ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗವುದು ಎಂದರು.

ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಮೀಣ ಕುಡಿಯುವ ನೀರು ಯೋಜನೆ ಎಂಜಿನಿಯರ್ ಸಾದೀಕ್ ಉಲ್ಲಾ ಖಾನ್, ನರೇಗಾ ಎಡಿ ವಾಸುದೇವ, ಪಿಡಬ್ಯೂಡಿ ಎಇಇ ಯು. ರುದ್ರಪ್ಪ, ಸಿಡಿಪಿಓ ಬೀರೇಂದ್ರಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಬಾಲಸುಬ್ರಹ್ಮಣ್ಯ ಜೋಯಿಸಾ, ಪಶು ಇಲಾಖೆ ಅಧಿಕಾರಿ ಮಹಾದೇವಪ್ಪ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ವೇಳೆ ಆರ್‍ಐ ಕುಬೇರ ನಾಯ್ಕ್, ಮೀನುಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್, ಮುಸ್ಟೂರು ಗ್ರಾಪಂ ಅಧ್ಯಕ್ಷರಾದ ಶ್ರುತಿ, ಆಹಾರ ಇಲಾಖೆ ಅಧಿಕಾರಿ ಶಿವಪ್ರಕಾಶ್, ಮಲ್ಲಾಪುರದ ವೈದ್ಯಾಧಿಕಾರಿ ಸಚಿನ್, ಗ್ರಾಪಂ ಸದಸ್ಯರಾದ ರಾಜಮ್ಮ, ಸಾಕಮ್ಮ, ತಿಪ್ಪೇಶ್, ಬಸವರಾಜ್ ಸೇರಿದಂತೆ ಅನೇಕರು ಇದ್ದರು.

ಒಕ್ಕಲು ಕಣಕ್ಕೆ ಬೇಡಿಕೆ
ರೈತರು ಬೆಳೆದ ಧಾನ್ಯಗಳನ್ನು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿದ್ದು ಸವಾರರಿಗೆ ತೊಂದರೆಯಾಗುತ್ತದೆ. ಸರಕಾರದಿಂದ ಒಕ್ಕಲು ಕಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ಬಸವರಾಜ್, ಮಂಜುನಾಥ್ ಬೇಡಿಕೆ ಇಟ್ಟರು. ಆಗ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ನಿಮ್ಮ ಗ್ರಾಮದ ಸುತ್ತ ಸರಕಾರಿ ಜಮೀನು ಇದ್ದರೆ ತಿಳಿಸಿ. ಜಿಲ್ಲಾಧಿಕಾರಿಗಳ ಜೊತೆ ಒಕ್ಕಲು ಕಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದರು.

ಗ್ರಾಮದ ಸಮಸ್ಯೆಗಳ ಅನಾವರಣ 
ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಇದು ಅತ್ಯಂತ ಹಿಂದುಳಿದ ಗ್ರಾಮ. ಈ ಗ್ರಾಮಕ್ಕೆ ಸಾರಿಗೆ, ರಸ್ತೆ, ನೈರ್ಮಲ್ಯ, ನೀರು, ಸೇರಿದಂತೆ ಅನೇಕ ಸಮಸ್ಯೆಗಳ ಪಟ್ಟಿಯನ್ನು ಸಾಮಾಜಿಕ ಕಾರ್ಯಕರ್ತ ಡಾ.ಅರವಿಂದನ್ ತಹಶೀಲ್ದಾರ್ ಗಮನಕ್ಕೆ ತಂದರು.

ಅಧಿಕಾರಿಗಳ ಗೈರು:
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಖ್ಯವಾಗಿ ಬೆಸ್ಕಾಂ ಇಲಾಖೆ, ವಲಯ ಅರಣ್ಯ ಇಲಾಖೆ, ಜಿ.ಪಂ ಇಲಾಖೆ ಅಧಿಕಾರಿಗಳು, ಸಾಮಾಜಿಕ ಅರಣ್ಯ, ಪೊಲೀಸ್, ಬಿಸಿಎಂ ಇಲಾಖೆ, ವಲಯ ಅರಣ್ಯ ಅಧಿಕಾರಿಗಳು ಗೈರಾಗಿದ್ದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಾರ್ಯಕ್ರಮವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!