ಜಗಳೂರು: ಅಕ್ರಮ ಮಣ್ಣು, ರಾಗಿ ಮಾರಾಟ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಖಡಕ್ ವಾರ್ನಿಂಗ್!

Suddivijaya
Suddivijaya February 21, 2023
Updated 2023/02/21 at 11:33 AM

ಸುದ್ದಿವಿಜಯ, ಜಗಳೂರು: ತಾಲೂಕಿನ ಮುಷ್ಟಿಗರಹಳ್ಳಿ ಕೆರೆಯಲ್ಲಿನ ಮಣ್ಣ, ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಗ್ರಾಮದ ಮಂಜಪ್ಪ ಸೇರಿ ಅನೇಕರು ದೂರು ನೀಡಿದ ಹಿನ್ನೆಲೆ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಅವರು ತಾಪಂ ಇಓ ಚಂದ್ರಶೇಖರ್‍ಗೆ ಸೂಚನೆ ನೀಡಿ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದರು.

ಪ್ರತಿ ತಿಂಗಳು ಮೂರನೇ ಮಂಗಳವಾರ ತಾಲೂಕು ಕಚೇರಿಗೆ ಭೇಟಿ ಕಾರ್ಯಕ್ರಮ ಹಿನ್ನೆಲೆ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ದೇವಿಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಮುಷ್ಟಿಗರಹಳ್ಳಿ ಕೆರೆಯಲ್ಲಿ ವ್ಯಾಪಕವಾಗಿ ಮರಳು ತುಂಬಲಾಗುತ್ತಿದೆ.

ರಾತ್ರಿ ಆದರೆ ಸಾಕು ಬೃಹತ್ ಲಾರಿಗಳು ವಿಪರೀತ ಮರಳು ಮತ್ತು ಮಣ್ಣನ್ನು ದಂಧೆ ಕೋರರು ತುಂಬುತ್ತಿದ್ದಾರೆ. ಪಿಡಿಒ ಸುನಿತಾ ಅವರ ಗಮನಕ್ಕೂ ತರಲಾಗಿದೆ. ಆದರೆ ಅವರು ಖ್ಯಾರೇ ಅನ್ನುತ್ತಿಲ್ಲ. 57 ಕೆರೆ ತುಂಬಿಸುವ ಯೋಜನೆಯಲ್ಲಿ ಈ ಕೆರೆಯು ಸೇರಿದೆ. ಅಕ್ರದ ಬಗ್ಗೆ ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾರೆ ಎಂದು ಡಿಸಿಗೆ ದೂರು ನೀಡಿದರು.

ಅಗ ಪಕ್ಕದಲ್ಲೇ ಇದ್ದ ತಾಪಂ ಇಓ ಅವರಿಗೆ ಡಿಸಿ ಸೂಚನೆ ನೀಡಿ, ಸ್ಪಾಟ್‍ಗೆ ಹೋಗಿ ನೋಡಬೇಕು. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‍ಗಳನ್ನು ಸ್ಥಳಕ್ಕೆ ಕರೆಸಿ. ಅದು ಮಣ್ಣೋ ಮರಳೋ ಎಂದು ಖುದ್ದು ಭೇಟಿ ನೀಡಿ ವರದಿಕೊಡಿ. ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಆದೇಶ ನೀಡಿದರು.

ಬಿರಿಯಾನಿ ವಾಸನೆ ಸಾಕಾಗಿದೆ!:
ಪಟ್ಟಣದ ರಾಮಾಲಯ ರಸ್ತೆಯಲ್ಲಿ ಸಮುದಾಯಭವನ ನಿರ್ಮಾಣಕ್ಕೆಂದು ನೀಡಿದ ಜಾಗದಲ್ಲಿ ಶಾದಿ ಮಹಲ್ ಕಟ್ಟಲಾಗಿದೆ. ಕೊಟ್ಟ ಜಾಗಕ್ಕಿಂತಲೂ 10 ಅಡಿ ಅಕ್ರಮವಾಗಿ ಕಟ್ಟಿದ್ದರಿಂದ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಶಾದಿ ಮಹಲ್‍ನಲ್ಲಿ ಒಂದು ವರ್ಗದವರು ಬಿರಿಯಾನಿ ಮಾಡುತ್ತಾರೆ. ನಾವು ತಿನ್ನಲ್ಲ. ನಮಗೆ ವಾಸನೆ ಕಂಡರೆ ವಾಂತಿಯಾಗುತ್ತಿದೆ ಸ್ವಾಮಿ ದಯಮಾಡಿ ಶಾದಿಮಹಲ್‍ನಲ್ಲಿ ಬರಿಯಾನಿ ಮಾಡುವುದನ್ನು ನಿಲ್ಲಿಸಲು ಸೂಚಿಸಿ ಎಂದು ರಾಮಾಲಯ ರಸ್ತೆಯ ನಿವಾಸಿಗಳು ಡಿಸಿಗೆ ಮನವಿ ಮಾಡಿದರು. ಆಗ ಡಿಸಿ ಬಿರಿಯಾನಿ ಮಾಡಬೇಡಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಅಕ್ರಮವಾಗಿ ಕಟ್ಟಿದ್ದರೆ ಅದನ್ನು ತೆರವುಗೊಳಿಸಲು ಪಪಂ ಚೀಫ್ ಆಫೀಸರ್‍ಗೆ ಸೂಚನೆ ನೀಡುತ್ತೇನೆ ಎಂದರು.

ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ ಇದುವರೆಗೂ ಸೂರಿಲ್ಲ. ನಮ್ಮದು 40 ವರ್ಷದ ಹೋರಾಟವಾಗಿದೆ ಎಂದು ಮುಖಂಡ ಕುರಿ ಜಯ್ಯಪ್ಪ ಮನವಿ ಮಾಡಿದರು. ಆಗ ಡಿಸಿ ಅವರು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಸೂಚಿಸಿ. ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

ಪಟ್ಟಣದಲ್ಲಿ ಜಾಗವಿಲ್ಲದೇ ಇದ್ದರೆ ಪಕ್ಕದ ಉದ್ದಗಟ್ಟದಲ್ಲಿ ಜಾಗ ಇದ್ದರೆ ಕೊಡಿ. ಪದೇ ಪದೇ ನಮಗೆ ಇವರು ಮನವಿಸಲ್ಲಿಸಲು ಬರುವುದು ಬೇಡ ಎಂದು ಹೇಳಿದರು. ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗೆ ಜಮೀನು ಕೊಡಿ ಎಂದು ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್ ಮನವಿಗೆ ಸ್ಪಂದಿಸಿದ ಡಿಸಿ. ಕೃಷಿ ಇಲಾಖೆ ಜೆಡಿ ಶ್ರೀನಿವಾಸ್ ಚಿಂತಾಲ್ ಅವರಿಗೆ ಕರೆ ಮಾಡಿ ಶೀಘ್ರೆವೇ ನಿಮ್ಮ ಇಲಾಖೆಗೆ ಜಮೀನು ಮಂಜೂರು ಮಾಡುತ್ತೇವೆ. ಕಂಪನಿಗೆ ವರ್ಗಾವಣೆ ಮಾಡಿ ಎಂದರು.

ಮತದಾರರ ಜಾಗೃತಿ: ಜಿಲ್ಲೆಯಲ್ಲಿ 36 ಸಾವಿರ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ತಹಶೀಲ್ದಾರ್ ಕಚೇರಿಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಬಳಕೆ ಹಾಗೂ ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್) ಕಾರ್ಯವೈಖರಿ ಕುರಿತು ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ಇವಿಎಂ ಕಾರ್ಯವೈಖರಿಯ ಬಗ್ಗೆ ಅರಿತುಕೊಳ್ಳಿ ಎಂದು ಡಿಸಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಅಕ್ರಮ ರಾಗಿ ಖರೀದಿ ವಾರ್ನಿಂಗ್:

ಪಟ್ಟಣದ ಎಪಿಎಂಸಿ ರಾಗಿ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಕೆಲವರು ಆರೋಪಿಸಿದ ಕಾರಣ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಸಂಪೂರ್ಣವಾಗಿ ಪರಿಶೀಲಿಸಿದರು. ಎಪಿಎಂಸಿ ಮ್ಯಾನೇಜರ್ ಶಂಕರ್ ಅವರಲ್ಲಿ ಮಾಹಿತಿ ಪಡೆದರು. ರಾಗಿ ಖರೀದಿ ಸರಿಯಾಗಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಮಾಶ್ಚರ್ ಪರಿಶೀಲನೆಯ ಯಂತ್ರ, ತೂಕಯಂತ್ರ, ರಾಗಿ ಜರಡಿ ಹಾಕಿ ಖರೀದಿಸುತ್ತಿದ್ದೇವೆ. ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ಮ್ಯಾನೇಜರ್ ಶಂಕರ್ ಅವರು ಡಿಸಿಗೆ ವರದಿ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಅವರು ಎಪಿಎಪಿ ದಿಢೀರ್ ಭೇಟಿ ನೀಡಿದರು
ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಅವರು ಎಪಿಎಪಿ ದಿಢೀರ್ ಭೇಟಿ ನೀಡಿದರು

ಅಕ್ರಮವಾಗಿ ರಾಗಿ ಮಾರಾಟ ಮಾಡಿದರೆ ಎಚ್ಚರಿಕೆ. ಶೀಘ್ರದಲ್ಲೇ ಕಡಲೆ ಖರೀದಿ ಕೇಂದ್ರ ಆರಂಭವಾಗುತ್ತಿದ್ದು. ಅದನ್ನು ಸಹ ನಿಯಮಾನುಸಾರ ಮಾಡಬೇಕು. ಅಕ್ರಮ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಎಚ್ಚರಿಕೆ ನೀಡಿದರು. ದೊಡ್ಡ ರೈತರಿಂದಲೂ ರಾಗಿ ಖರೀದಿಸಿ ಎಂದು ಎಫ್‍ಪಿಒ ನಿರ್ದೇಶಕ ಬಸವನಗೌಡ ಮತ್ತು ರೈತ ಮುಖಂಡರು ಡಿಸಿಗೆ ಮನವಿ ಮಾಡಿದರು.

ಈ ವೇಳೆ ಎಸಿ ದುರ್ಗಾಶ್ರೀ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ವೆಂಕಟೇಶ್ ಮೂರ್ತಿ, ಕೃಷಿ ಅಧಿಕಾರಿ ಗಿರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!